ಜಾತ್ರೆಯಿಂದ ನಾಯಕ ಸಮುದಾಯದ ಜಾಗೃತಿ

ಮುಂದಿನ ಚುನಾವಣೆಯಲ್ಲಿ ನೀವು ಎಷ್ಟೇ ಹಣ ನೀಡಿದರೂ ಸಮಾಜದ ಜನರು ಮತವನ್ನು ಯಾರಿಗೆ ಹಾಕಬೇಕೆಂದು ನಿರ್ಧರಿಸಿರುತ್ತಾರೋ ಅವರಿಗೇ ಹಾಕುತ್ತಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮವರು ತಕ್ಕ ಪಾಠ ಕಲಿಸುತ್ತಾರೆ.

– ಶ್ರೀ ಪ್ರಸನ್ನಾನಂದ ಸ್ವಾಮೀಜಿ,  ವಾಲ್ಮೀಕಿ ಗುರುಪೀಠ

ಹರಪನಹಳ್ಳಿ, ಡಿ. 22- ರಾಜ್ಯದಲ್ಲಿ ನಾಯಕ ಸಮುದಾಯವನ್ನು ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಹಿನ್ನೆಲೆಯಲ್ಲಿ ಮಠದಲ್ಲಿ ಜಾತ್ರೆ ಆಯೋಜಿಸಿ, ಸಮುದಾಯವನ್ನು ಜಾಗೃತಿಗೊಳಿಸಲಾಗುತ್ತಿದೆ ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಇಂದು ಏರ್ಪಾಡಾಗಿದ್ದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಈಗಾಗಲೇ ನೂರು ತಾಲ್ಲೂಕುಗಳ ಪ್ರವಾಸ ಮಾಡಿ, ಜಾತ್ರೆಗೆ ಆಹ್ವಾನ ನೀಡುವ ಮೂಲಕ ರಾಜ್ಯದ 4ನೇ ಅತಿ ದೊಡ್ಡ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಕಳೆದ 3 ಜಾತ್ರೆಗಳಲ್ಲಿ ಸಮಾಜದ ಬಂಧುಗಳು ನಿರೀಕ್ಷೆಗೂ ಮೀರಿ ಆರ್ಥಿಕ ನೆರವು  – ಬೆಂಬಲ  ನೀಡಿದ್ದಾರೆ. ಕಳೆದ ವರ್ಷ ಕೊರೊನಾ ಇದ್ದರೂ ಕೂಡ ದೊಡ್ಡ ಸಂಖ್ಯೆಯಲ್ಲಿ ಜನರು ಜಾತ್ರೆಗೆ ಬಂದಿದ್ದರು. ಸರ್ಕಾರ ಆನೆ ಇದ್ದಂಗೆ. ಆನೆ ಪಳಗಿಸುವ ಕೆಲಸವನ್ನು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದವರು ಶಿಕ್ಷಣ ಸಂಘಟನೆ, ಹೋರಾಟ ಎಂಬ ಅಂಕುಶಗಳನ್ನು ಚುಚ್ಚಿ ಎಚ್ಚರಿಸಬೇಕು ಎಂದು ಕರೆ ನೀಡಿದರು. 

ಸಮಾಜದ ಮೀಸಲಾತಿಯಿಂದ ಚುನಾಯಿತರಾದ ವಾಲ್ಮೀಕಿ ನಾಯಕ ಸಮಾಜದ 15 ಶಾಸಕರು, ಇಬ್ಬರು ಸಂಸದರ ಇಚ್ಛಾಶಕ್ತಿ ಕೊರತೆಯಿಂದ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಗೆ ಹಿನ್ನಡೆಯಾಗುತ್ತಿದ್ದು, ಸರ್ಕಾರ ಕಳೆದ 30 ವರ್ಷಗಳಿಂದ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳ ಮಾಡದೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿಕೊಂಡು ಬಂದಿದೆ ಎಂದು ಶ್ರೀಗಳು ಕಿಡಿ ಕಾರಿದರು.

ಇದೇ ಸಂದರ್ಭದಲ್ಲಿ 3ನೇ ವರ್ಷದ ವಾಲ್ಮೀಕಿ ಜಾತ್ರಾ ಸಮಿತಿ ತಾಲ್ಲೂಕು ಅಧ್ಯಕ್ಷ ಹೆಚ್.ಕೆ. ಹಾಲೇಶ್ ಅವರು 3ನೇ ವರ್ಷದ ಹಣಕಾಸಿನ ಲೆಕ್ಕವನ್ನು ಸಭೆಯಲ್ಲಿ ಓದಿದರು. 4ನೇ ವಾಲ್ಮೀಕಿ ಜಾತ್ರಾ ಸಮಿತಿ ತಾಲ್ಲೂಕು ಅಧ್ಯಕ್ಷರಾಗಿ ಆಲದಹಳ್ಳಿ ಷಣ್ಮುಖಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಉಪಾಧ್ಯಕ್ಷ ಶಿವಾನಂದ, ಪ್ರಧಾನ ಕಾರ್ಯದರ್ಶಿ ಗಿರಜ್ಜಿ ನಾಗರಾಜ, ಸಂಘಟನಾ ಕಾರ್ಯದರ್ಶಿ ನೀಲಗುಂದ ತಿಮ್ಮೇಶ, ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಶಿರಹಟ್ಟಿ ದಂಡ್ಯಪ್ಪ, ಉಚ್ಚಂಗಿದುರ್ಗದ ಮಂಜಣ್ಣ, ಯಡಿಹಳ್ಳಿ ಶೇಖರಪ್ಪ, ಮಹಿಳಾ ಘಟಕದ ಗೌರವ ಅಧ್ಯಕ್ಷೆ ಟಿ. ಪದ್ಮಾವತಿ, ಸದಸ್ಯರಾದ ಮಂಜುಳಾ, ಅರಸಿಕೆರೆ ವೈ. ಅಣ್ಣಪ್ಪ, ಪ್ರಶಾಂತ ಪಾಟೀಲ್, ತಾ.ಪಂ. ಸದಸ್ಯರಾದ ವೈ. ಬಸಪ್ಪ,  ಸಿಂಗ್ರಿಹಳ್ಳಿ ನಾಗರಾಜ್, ಪುರಸಭೆ ಸದಸ್ಯರಾದ  ದ್ಯಾಮಜ್ಜಿ ರೊಕ್ಕಪ್ಪ, ಎಂ.ವಿ. ಅಂಜಿನಪ್ಪ, ಗೊಂಗಡಿ ನಾಗರಾಜ, ಲಾಟಿ ದಾದಾಪೀರ್, ಉದ್ದಾರ ಗಣೇಶ್, ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ, ಏಕಲವ್ಯ ಸಂಘರ್ಷ ಸಮಿತಿ ಅಧ್ಯಕ್ಷ ರಾಯದುರ್ಗದ ಪ್ರಕಾಶ್, ಮುಖಂಡರಾದ ಬಾಣದ ಅಂಜಿನಪ್ಪ, ಆರ್. ಲೋಕೇಶ್, ಸಾಸ್ವಿಹಳ್ಳಿ ನಾಗರಾಜ್, ಪಿ. ರಾಜು, ಪೂಜಾರ್ ಅರುಣ್‌ಕುಮಾರ್, ಕೆಂಗಳ್ಳಿ ಪ್ರಕಾಶ್, ದುಗ್ಗಾವತ್ತಿ ಮಂಜುನಾಥ, ಚಿಕ್ಕೇರಿ ಬಸಪ್ಪ, ಮೈದೂರು ಮಾರುತಿ, ಮಂಡಕ್ಕಿ ಸುರೇಶ್, ತಳವಾರ್ ಚಂದ್ರಪ್ಪ, ಹೆಚ್. ವೆಂಕಟೇಶ್ ಉಪಸ್ಥಿತರಿದ್ದರು.

error: Content is protected !!