ದಾವಣಗೆರೆ, ಡಿ.21- ನಿತ್ಯದ ಬದುಕಿನ ಅವಿಭಾಜ್ಯ ಅಂಗವಾಗಿರುವ ಗಣಿತ ಮತ್ತು ವಿಜ್ಞಾನವು ಶೈಕ್ಷಣಿಕ ಅಧ್ಯಯನಕ್ಕೆ ಸೀಮಿತ ವಾಗದೆ ಭವಿಷ್ಯ ವನ್ನು ರೂಪಿಸುವಂತಾಗ ಬೇಕು. ಗಣಿತ ಹಾಗೂ ವಿಜ್ಞಾನವು ಆಸಕ್ತಿದಾಯಕ ಕಲಿಕೆ ಯಾದಾಗ ಶಿಕ್ಷಣದ ಉದ್ದೇಶ ಸಫಲವಾ ಗುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿ ಲಯದ ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರಿನ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಗಣಿತ ಶಿಕ್ಷಣ: ಅಭ್ಯಾಸಗಳು, ನಿರೀಕ್ಷೆಗಳು ಮತ್ತು ಸವಾಲುಗಳು ಹಾಗೂ ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಣ ಕುರಿತು ಏರ್ಪಡಿಸಿರುವ ಮೂರು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಎಲ್ಲ ವಿಚಾರಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಅವರ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವ ಜೊತೆಗೆ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಕೊಂಡು ಪ್ರಾಯೋಗಿಕವಾಗಿ ಮನವರಿಕೆ ಮಾಡಿ ಕೊಡುವುದು ಮುಖ್ಯ. ಕಲಿಕಾಸಕ್ತಿ ಬೆಳೆಸಲು ಗಣಿತ ಆಟದಂತಿರಬೇಕು ಹಾಗೂ ವಿಜ್ಞಾನ ಮನರಂಜನೆಯಿಂದ ಕೂಡಿರಬೇಕು ಎಂದು ಸಲಹೆ ನೀಡಿದರು.
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮ ವಿಭಾಗದ ಸಹ ನಿರ್ದೇಶಕ ಎಸ್.ವಿ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನ ಮತ್ತು ಗಣಿತ ಅಧ್ಯಯನದ ಬಗ್ಗೆ ಮಕ್ಕಳಲ್ಲಿರುವ ಹಿಂಜರಿಕೆಯನ್ನು ಹೋಗಲಾಡಿಸಿ, ಕ್ರಿಯಾಶೀಲವಾಗಿ, ಪ್ರಯೋಗಾತ್ಮಕವಾಗಿ ಆಸಕ್ತಿ ಬೆಳೆಸುವ ಪ್ರಯತ್ನವನ್ನು ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯ ಮಾಡುತ್ತಿದೆ. ಈಗಾಗಲೇ ರಾಜ್ಯದ 11 ಜಿಲ್ಲೆಗಳಲ್ಲಿ ಪ್ರಾಯೋಗಿಕ, ಸಕಾರಾತ್ಮಕ ಶಿಕ್ಷಣ ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಕೆಲಸವನ್ನು ಸಂಸ್ಥೆ ನಡೆಸುತ್ತಿದೆ ಎಂದರು.
ಕಲಾ ನಿಕಾಯದ ಡೀನ್ ಪ್ರೊ. ಕೆಬಿ. ರಾಮಲಿಂಗಪ್ಪ ಮಾತನಾಡಿ, ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಕಬ್ಬಿಣದ ಕಡಲೆ ಎಂದು ಪರಿಭಾವಿಸಲಾಗುತ್ತಿದೆ. ವಾಸ್ತವವಾಗಿ ಮಕ್ಕಳಲ್ಲಿ ಕಲಿಯುವ ಆಸಕ್ತಿಗಿಂತ ಕಲಿಸುವ ವಿಧಾನದಲ್ಲಿ ಬೋಧಕರು ಪ್ರಯೋಗಶೀಲರಾಗಿದ್ದಾಗ ಬದಲಾವಣೆ ಕಾಣಲು ಸಾಧ್ಯವಿದೆ ಎಂದು
ತಿಳಿಸಿದರು.
ವಾಣಿಜ್ಯ ನಿಕಾಯದ ಡೀನ್ ಪ್ರೊ. ಪಿ.ಲಕ್ಷ್ಮಣ, ಗಣಿತಶಾಸ್ತ್ರ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ. ಪ್ರಸನ್ನಕುಮಾರ, ಭೌತವಿಜ್ಞಾನ ನಿಕಾಯದ ಸಹ ಪ್ರಾಧ್ಯಾಪಕ ಡಾ. ಕೆ.ಎಂ. ಈಶ್ವರಪ್ಪ, ಕಂಪ್ಯೂಟರ್ ವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಡಾ. ಚಂದ್ರಕಾಂತ ನಾಯ್ಕೋಡಿ ಉಪಸ್ಥಿತರಿದ್ದರು. ವಿಜ್ಞಾನ ನಿಕಾಯದ ಡೀನ್ ಪ್ರೊ. ರಾಮಲಿಂಗಪ್ಪ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಡಾ. ಶಿವಕುಮಾರ ಕಣಸೋಗಿ ಕಾರ್ಯಕ್ರಮ ನಿರೂಪಿಸಿದರು. ಗಣಿತಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಜಿ.ಡಿ.ಪ್ರಕಾಶ್ ವಂದಿಸಿದರು.
ಮೊದಲ ದಿನ ನಡೆದ ವಿಚಾರ ಸಂಕಿರಣದಲ್ಲಿ ಆರು ಅಧಿವೇಶನಗಳು ನಡೆದವು. ಡಾ.ಯು.ಎಸ್. ಮಹಾಬಲೇಶ್ವರ, ಪ್ರೊ. ರಾಮಲಿಂಗಪ್ಪ, ಡಾ. ಜಿ.ಡಿ. ಪ್ರಕಾಶ್, ಡಾ. ಪ್ರಸನ್ನಕುಮಾರ, ಪ್ರೊ. ಎಸ್.ಶಿಶುಪಾಲ, ಡಾ.ಕೆ.ಎಂ.ಈಶ್ವರಪ್ಪ ಅವರು ವಿವಿಧ ಅಧಿವೇಶನಗಳ ಅಧ್ಯಕ್ಷತೆ ವಹಿಸಿದ್ದರು.