ಅವೈಜ್ಞಾನಿಕವಾಗಿರುವ ಹೊನ್ನೂರು ಕೆರೆ ಕೋಡಿ ಎತ್ತರ ಸರಿಪಡಿಸಲು ಆಗ್ರಹ

ದಾವಣಗೆರೆ, ಡಿ.21- ತಾಲ್ಲೂಕಿನ ಹೊನ್ನೂರು ಕೆರೆ ಕೋಡಿಯನ್ನು ಅವೈಜ್ಞಾನಿಕವಾಗಿ ಎತ್ತರ ಮಾಡಿದ್ದರಿಂದ ಹಿನ್ನೀರು ಹೆಚ್ಚಾಗಿ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಕೋಡಿ ಎತ್ತರ ಕಡಿಮೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಮಲ್ಲಶೆಟ್ಟಿಹಳ್ಳಿ ಗ್ರಾಮದ ದಳಪತಿ ಜಿ.ಎಸ್. ರೇವಣಸಿದ್ಧಪ್ಪ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆ ಕೋಡಿ ಎತ್ತರದಿಂದ ಜಮೀನುಗಳು ಜಲಾವೃತಗೊಂಡು ರೈತರ ಬದುಕು ಹೀನಾಯ ಸ್ಥಿತಿ ತಲುಪಿದೆ. ಅಡಿಕೆ, ಮೆಕ್ಕೆಜೋಳ ಬೆಳೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಕಳೆದ ಮೂರು ತಿಂಗಳಿನಿಂದ ಜಮೀನಿನಲ್ಲಿ ನೀರು ನಿಂತಿದ್ದು, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಸುಮಾರು 45 ವರ್ಷಗಳ ಹಿಂದೆ ಹೊನ್ನೂರು ಕೆರೆ ತುಂಬಿತ್ತಾದರೂ ಜಮೀನುಗಳಿಗೆ ನೀರು ನುಗ್ಗುವುದಾಗಲೀ, ಹಾನಿ ಉಂಟಾಗಿಲ್ಲ. ಆದರೆ ಕಳೆದ ಎರಡು ತಿಂಗಳ ಹಿಂದೆ ಸುರಿದ ಭಾರೀ ಮಳೆಗೆ ಕೊಗ್ಗನೂರು, ಆನಗೋಡು, ಸಿದ್ಧನೂರು ಕೆರೆಗಳ ಕೋಡಿ ಬಿದ್ದು ಜಮೀನುಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಜಿಲ್ಲಾಧಿಕಾರಿಗಳೂ ಅಗತ್ಯ ಕ್ರಮಕ್ಕೆ ಮುಂದಾಗಬೇಕು. ಸ್ಥಳ ಪರಿಶೀಲಿಸಿ, ಭೂ ಹಿಡುವಳಿದಾರರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಎಂ. ಗಿರೀಶ್, ಬಸವರಾಜಪ್ಪ, ಡೋಲಿ ಚಂದ್ರು, ಹರೀಶ್‌ ಬಸಾಪುರ, ಬಸವರಾಜಪ್ಪ ಮತ್ತಿತರರಿದ್ದರು.

error: Content is protected !!