ರಾಣೇಬೆನ್ನೂರು, ಡಿ.19- ಹಾವೇರಿ ಜಿಲ್ಲೆಯ ಹಾನಗಲ್ಲ ಉಪಚುನಾವಣೆಯಲ್ಲಿ ವಿಧಾನಸಭೆಗೆ ಶ್ರೀನಿವಾಸ ಮಾನೆ ಹಾಗೂ ಅವಿಭಜಿತ ಧಾರವಾಡ ಜಿಲ್ಲೆಯಿಂದ ಮೇಲ್ಮನೆಗೆ ನನ್ನನ್ನು ಆಯ್ಕೆ ಮಾಡಿರುವ ಮತದಾರರು `ನರೇಂದ್ರ ಮೋದಿಯವರೇ ನಿಮ್ಮ ಸಮಯ ಮುಗಿಯಿತು’ ಎಂದು ತೀರ್ಪು ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಆಹ್ಮದ್ ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಛೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮೋದಿಯವರ ಸುಳ್ಳು ಮಾತುಗಳು, ಜನವಿರೋಧಿ ಆಡಳಿತ, ಶೇ.40ರ ಕಮೀಷನ್ ಹಾಗೂ ಏರುತ್ತಿರುವ ದರಗಳನ್ನು ನೋಡಿ ಜನರು ಅಸಮಾಧಾನಗೊಂಡಿದ್ದಾರೆ. ಈ ಭಾಗದ ಜನ ನೀಡಿದ ತೀರ್ಪನ್ನು ರಾಜ್ಯ ಹಾಗೂ ದೇಶದ ಜನರು ಎಲ್ಲಾ ಚುನಾವಣೆಗಳಲ್ಲೂ ನೀಡಲಿದ್ದಾರೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಪ್ರತಿ ನಿಧಿಗಳು ತಮ್ಮ ಕಾರ್ಯವ್ಯಾಪ್ತಿ ಯಲ್ಲಿನ ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ನನ್ನನ್ನು ಸಂಪರ್ಕಿಸಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಶ್ರಮಿಸುತ್ತೇನೆ ಎಂದ ಅವರು, ಕಾಂಗ್ರೆಸ್ ಕಾರ್ಯಕರ್ತರು ಈಗಿರುವ ಹುರುಪನ್ನೇ ಕಾಯ್ದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಮಾತನಾಡಿ, ಕಾಂಗ್ರೆಸ್ ಪಕ್ಷ ಸರ್ವ ಜನರಲ್ಲಿ ಸಮಾನತೆ ಕಾಣುತ್ತದೆ ಎಂಬುದಕ್ಕೆ ಸಲೀಂ ಆಹ್ಮದ್ ಅವರ ಆಯ್ಕೆಯೇ ಉದಾಹರಣೆ ಎಂದರು.
ಬಿ.ಎಸ್. ಮರದ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಕೆ.ಬಿ.ಕೋಳಿವಾಡರ ಪುತ್ರ ಪ್ರಕಾಶ ಕೋಳಿವಾಡ ಅವರು ಪಕ್ಷದ ಅಭ್ಯರ್ಥಿಯಾಗಲಿದ್ದು, ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕೈಗೆ ಆಡಳಿತ ನೀಡುವಂತೆ ಮನವಿ ಮಾಡಿದರು.
ಮುಖಂಡರುಗಳಾದ ಆರ್.ಎಂ. ಕುಬೇರಪ್ಪ, ಪುಟ್ಟಪ್ಪ ಮರಿಯಮ್ಮನವರ, ರವಿ ಪಾಟೀಲ, ಕೃಷ್ಣಪ್ಪ ಕಂಬಳಿ, ಶೇರು ಕಾಬೂಲಿ, ವೀರನಗೌಡ ಪೋಲಿಸಗೌಡ್ರ ಉಪಸ್ಥಿತರಿದ್ದರು. ಮಂಜನಗೌಡ ಪಾಟೀಲ ಸ್ವಾಗತಿಸಿದರು. ಇರ್ಫಾನ್ ದಿಡಗೂರ ನಿರೂಪಿಸಿದರು.