ಬಾಂಗ್ಲಾ ವಿಮೋಚನಾ ದಿನದ 50ನೇ ವರ್ಷಾಚರಣೆ
ದಾವಣಗೆರೆ, ಡಿ.17- ಬಾಂಗ್ಲಾ ವಿಮೋಚನಾ ದಿನದ 50ನೇ ವರ್ಷಾ ಚರಣೆ ಅಂಗವಾಗಿ ಹಿಂದೂ ಜಾಗರಣ ವೇದಿಕೆಯಿಂದ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಸೈನಿಕ ಸ್ಮಾರಕದ ಎದುರು ನಿನ್ನೆ ವಿಜಯ್ ದಿವಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಪ್ರಧಾನ ಕಾರ್ಯದರ್ಶಿ ಕೆ.ಟಿ. ಉಲ್ಲಾಸ್, ಬಾಂಗ್ಲಾ ವಿಮೋಚನೆಗಾಗಿ 1971 ರಲ್ಲಿ ನಡೆದ ಯುದ್ಧದಲ್ಲಿ ವೀರ ಯೋಧರ ತ್ಯಾಗ, ಬಲಿದಾನವನ್ನು ನಾವುಗಳು ಎಂದೂ ಮರೆಯದೇ ಸ್ಮರಿಸಬೇಕು. ಈ ಯುದ್ಧ ಭಾರತದ ಆತ್ಮಗೌರವ ಹೆಚ್ಚಿಸಿದ ಹೋರಾಟವಾಗಿತ್ತು ಎಂದು ತಿಳಿಸಿದರು.
ಹದಿಮೂರು ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಭಾರತದ ಮೂರೂ ಪಡೆಗಳನ್ನು ಬಳಸಿ ಯೋಜಿತವಾಗಿ ತಂತ್ರ ರೂಪಿಸಲಾಯಿತು. ನಮ್ಮ ಸೇನೆ ಪಾಕ್ ನೌಕಾ ನೆಲೆಗಳನ್ನು ಧ್ವಂಸಗೊಳಿಸಿತು. ಪರಿಣಾಮವಾಗಿ ಶತ್ರು ಪಾಳೆಯದ ಸೈನಿಕರು ಭಾರತದ ಮುಂದೆ ಮಂಡಿಯೂರಿದರು ಎಂದು ಹೇಳಿದರು.
ದೇಶ ವಿಭಜನೆಯ ನಂತರ ಪಶ್ಚಿಮ ಪಾಕಿಸ್ತಾನವು ಪೂರ್ವ ಪಾಕಿಸ್ತಾನವನ್ನು (ಈಗಿನ ಬಾಂಗ್ಲಾ ದೇಶ) ತಾರತಮ್ಯದಿಂದ ನೋಡಿತು. ದೌರ್ಜನ್ಯ ಮಿತಿ ಮೀರಿದ್ದರಿಂದ ಪೂರ್ವ ಪಾಕಿಸ್ತಾನದಿಂದ ಲಕ್ಷಾಂತರ ಮಂದಿ ಗಡಿ ಭಾಗಕ್ಕೆ ಬಂದು ಭಾರತದ ಆಶ್ರಯ ಕೋರಿದರು. ಆಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದಿಟ್ಟ ನಿರ್ಧಾರ ತೆಗೆದುಕೊಂಡು ಪಶ್ಚಿಮ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿದರು ಎಂದು ಯುದ್ಧವನ್ನು ಮೆಲುಕು ಹಾಕಿದರು.
ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ಅಂತ್ಯ ಕಂಡಾಗ ನಮ್ಮ ನಡುವಿನ ವಿಕೃತ ಮನಸ್ಸಿನ ಕೆಲವರು ಸಂಭ್ರಮಿಸಿದರು. ಇಂತಹ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸುವ ಸಂಕಲ್ಪವನ್ನು ನಾವೆಲ್ಲ ಮಾಡಬೇಕು ಎಂದು ಕರೆ ನೀಡಿದರು.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಮಂಜಾನಾಯ್ಕ, ಸಂಘ ಟನೆಯ ಮುಖಂಡ ಸತೀಶ್ ಪೂಜಾರಿ, ಮಾಜಿ ಸೈನಿಕರಾದ ಷಣ್ಮುಖಪ್ಪ, ಚಂದ್ರಪ್ಪ, ರುದ್ರಪ್ಪ ರೆಡ್ಡಿ, ನಿವೃತ್ತ ಇಂಜಿನಿಯರ್ ಉಮಾಪತಿ ಇದ್ದರು.
ಬೈಕ್ ರಾಲಿ ಮತ್ತು ಕಾಲ್ನಡಿಗೆ ಜಾಥಾ: ಇದಕ್ಕೂ ಮುನ್ನ ರಾಮ್ ಅಂಡ್ ಕೋ ವೃತ್ತದಿಂದ ಕಾರ್ಯಕ್ರಮದ ಸ್ಥಳದ ವರೆಗೂ ಹಿಂಜಾವೇ ಪದಾಧಿಕಾರಿಗಳು, ಹಿಂದೂಪರ ಮುಖಂಡರು ಬೈಕ್ ರಾಲಿ ಮತ್ತು ಕಾಲ್ನಡಿಗೆ ಜಾಥಾ ನಡೆಸಿದರು.
ಸಂಘ ಪರಿವಾರದ ಹಿರಿಯ ಮುಖಂಡ ಕೆ.ಬಿ. ಶಂಕರನಾರಾಯಣ, ದೂಡಾ ಅಧ್ಯಕ್ಷ ದೇವರಮನೆ ಶಿವ ಕುಮಾರ್ ಜಾಥಾಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಾಸುದೇವ್ ರಾಯ್ಕರ್, ಹೆಚ್.ಸಿ. ಜಯಮ್ಮ, ವಿಶ್ವನಾಥ್, ಮಂಜುನಾಥ್, ಚಂದ್ರಮೌಳಿ, ಶೋಭಕ್ಕ, ಸಹನಾ ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.