ದಾವಣಗೆರೆ,ಡಿ.17- ಸರ್ಕಾರದ ನಿರ್ಧಾರದಂತೆ ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಿಸುವಂತೆ ಆಗ್ರಹಿಸಿ ನಗರದ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ನೆರಳು ಬೀಡಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲು ಸರ್ಕಾರ ಮುಂದಾಗಿದ್ದರೂ, ಕೆಲವು ಮಠಾಧೀಶರು ವಿರೋಧ ಮಾಡಿದ್ದರಿಂದ ಈ ಯೋಜನೆಯನ್ನು ತಪ್ಪಿಸುವ ಕುತಂತ್ರ ನಡೆಯುತ್ತಿದೆ. ಸರ್ಕಾರ ಇದಕ್ಕೆ ಮಣಿಯದೇ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಿದರು.
ಬುಡಕಟ್ಟು ಮಕ್ಕಳು, ದಲಿತ ಮಕ್ಕಳು, ಮುಸ್ಲಿಂ ಸಮುದಾಯದ ಮಕ್ಕಳು ಮತ್ತು ಹಿಂದುಳಿದ ಜಾತಿಯ ಮಕ್ಕಳು ಈ ಯೋಜನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಎಲ್ಲಾ ಶಾಲೆಗಳಲ್ಲೂ ಶಾಲೆಗೆ ಹೊಂದಿಕೊಂಡಂತೆ ಅಡುಗೆ ಕೊಠಡಿ ಇರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಜಬೀನಾ ಖಾನಂ, ಕರಿಬಸಪ್ಪ, ನಾಜೀಮಾ, ಸಲ್ಮಾಬಾನು, ರಶೀದಾ, ನಜ್ಮಾಬಾನು, ನೂರ್ ಫಾತಿಮಾ ಮತ್ತಿತರರು ಉಪಸ್ಥಿತರಿದ್ದರು.