ಆತ್ಮಸೌಂದರ್ಯ ಹೆಚ್ಚಿಸಿಕೊಳ್ಳುವ ಸಾಧನಗಳು ನಿಮ್ಮಲ್ಲಿಯೇ ಇವೆ

ರಾಣೇಬೆನ್ನೂರು ಕುರುಬಗೇರಿ  ಬನಶಂಕರಿ ದೇವಸ್ಥಾನದ ಕಳಸಾರೋಹಣ ನೆರವೇರಿಸಿದ ತರಳಬಾಳು ಶ್ರೀ 

ರಾಣೇಬೆನ್ನೂರು, ಡಿ.16- ಸೌಂದರ್ಯದಲ್ಲಿ ಎರಡು ವಿಧ. ಒಂದು ಶರೀರದ ಸೌಂದರ್ಯ, ಮತ್ತೊಂದು ಆತ್ಮದ ಸೌಂದರ್ಯ. ಶರೀರದ  ಸೌಂದರ್ಯ ಹೆಚ್ಚಿಸಿಕೊಳ್ಳಲು ಸೌಂದರ್ಯ ಸಾಧನಗಳು ಪೇಟೆಯಲ್ಲಿ ದೊರೆಯುತ್ತವೆ. ಆತ್ಮದ ಸೌಂದರ್ಯ ಹೆಚ್ಚಿಸಿಕೊಳ್ಳಲು ಸತ್ಯ, ದಯೆ, ದಾನ-ಧರ್ಮ, ಪ್ರೀತಿ ಮುಂತಾದ ನಿಮ್ಮಲ್ಲಿಯೇ ಇರುವ  ಸಾಧನಗಳಿಂದ ಅದು ಸಾಧ್ಯವಾ ಗಲಿದೆ ಎಂದು ತರಳಬಾಳು ಜಗದ್ಗುರು  ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದ ಕುರುಬಗೇರಿಯ ಬನಶಂಕರಿ ದೇವಸ್ಥಾನದ ಕಳಸಾರೋಹಣ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಶಿಲ್ಪಶಾಸ್ತ್ರ ದೇವಾಲಯವನ್ನು ಶರೀರಕ್ಕೆ ಹೋಲಿಸಿದರೆ, ದೇಹವನ್ನೇ ದೇವಾಲಯವನ್ನಾಗಿ ಪ್ರತಿಪಾದಿಸಿದವರು ಬಸವಣ್ಣ.  ಬಸವಣ್ಣನವರು ದೇವಾಲಯದ ವಿರೋಧಿಗಳಾಗಿರಲಿಲ್ಲ. ಮಸೀದಿ, ಚರ್ಚು, ಗುಡಿ ಎಲ್ಲೆಡೆ  ದೇವರಿದ್ದಾನೆ. ಜಾತಿ ಕಾರಣಕ್ಕೆ ಕೆಲವರನ್ನು  ಗುಡಿ ಒಳಗೆ ಬಿಡುತ್ತಿರಲಿಲ್ಲ. ಬಸವಣ್ಣ ಇಂತಹ ಕರ್ಮಠತನದ ವಿರೋಧಿಯಾಗಿದ್ದರು. ಅವರೇ ಕೂಡಲಸಂಗನ ಅರ್ಚನೆ ಮಾಡಿದ್ದರು ಎಂದು  ಶ್ರೀ ಗಳು ಹೇಳಿದರು.

ದೇವಾಂಗ ಜಗದ್ಗುರು ಶ್ರೀ ದಯಾನಂದಪುರಿ ಮಹಾಸ್ವಾಮೀಜಿ ಮಾತನಾಡುತ್ತಾ  ಹೋಮ, ಹವನಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ. ದೇವಸ್ಥಾನಗಳು ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸುತ್ತವೆ. ಈ ವ್ಯವಸ್ಥೆ ಹಿಂದೂ ಧರ್ಮದಲ್ಲಿ ಮಾತ್ರ ಸಾಧ್ಯ. ಇದರಿಂದ ಮನುಷ್ಯನ ಬದುಕು ಬಂಗಾರವಾಗಲಿದೆ. ಕೋಟ್ಯಾಂತರ ಹಣ ಖರ್ಚು ಮಾಡಿ ನಿರ್ಮಿಸುವ ಈ ಗುಡಿಗಳ ಸ್ವಚ್ಛತೆ ಕಾಪಾಡುವ ಹೊಣೆಗಾರಿಕೆಯನ್ನು ಮಹಿಳೆಯರು ವಹಿಸಿಕೊಳ್ಳಬೇಕು ಎಂದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಡಿ ಲಕ್ಷ್ಮಿನಾರಾಯಣ ಮಾತನಾಡಿ, ಆಶೀರ್ವಾದ ಪಡೆಯಲು ಗುರುಗಳಿದ್ದರೆ, ಗುರಿ ತಲುಪಲು ತಾಯಿ ಬನಶಂಕರಿ ಇದ್ದಾಳೆ. ಹಾಗಾಗಿ ಇಲ್ಲಿನ ಜನರ ಬದುಕು ಸಮೃದ್ಧಗೊಳ್ಳಲಿದೆ ಎಂದರು. 

ವಾಸ್ತು ಶಿಲ್ಪಿ ರುದ್ರಪ್ಪ ಕಮ್ಮಾರ, ಶಾಸಕ ಆರ್. ಶಂಕರ್, ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಡಾ: ಬಸವರಾಜ ಕೇಲಗಾರ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಸಂಕಪ್ಪ ಮಾರನಾಳ, ಸಾಧು ವೀರಶೈವ ಸಮಾಜದ ಅಧ್ಯಕ್ಷ ಶಿವಪ್ಪ ನಂದಿಹಳ್ಳಿ ಮತ್ತಿತರರಿದ್ದರು.

 ದೇವಸ್ಥಾನ ಸಮಿತಿ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ದಾನಿಗಳಿಗೆ, ಸಹಾಯ ಸಹಕಾರ ನೀಡಿದವರಿಗೆ ಶ್ರೀ ಗಳು ಗೌರವಿಸಿದರು.

error: Content is protected !!