ಪಾಲಿಕೆ ಆಡಳಿತ ವಿಫಲ

ಪಾಲಿಕೆ ಆಡಳಿತ ವಿಫಲ - Janathavaniವರ್ಕ್ ಆರ್ಡರ್ ನೀಡಲು ಕಮೀಷನ್, ಕಸ ಸಂಗ್ರಹಣೆ ನೆಪದಲ್ಲಿ ಲೂಟಿ: ವಿಪಕ್ಷ ನಾಯಕ ನಾಗರಾಜ್ ಆರೋಪ

ದಾವಣಗೆರೆ, ಡಿ.16- ಕಾಮಗಾರಿ ವಿಳಂಬ, ವರ್ಕ್ ಆರ್ಡರ್ ನೀಡಲು ಕಮೀಷನ್, ನಡೆಯದ ಸಾಮಾನ್ಯ ಸಭೆ,  ಕಸ ಸಂಗ್ರಹಣೆ ನೆಪದಲ್ಲಿ ಲೂಟಿ, ಎನ್‌ಒಸಿ ಕೊಡುವ ದಂಧೆ, ಲಸಿಕೆಗಾಗಿ ಪಾಲಿಕೆ ಸಿಬ್ಬಂದಿ- ಪಾಲಿಕೆ ಕೆಲಸಗಳು ಸ್ಥಗಿತ 

ಮಹಾನಗರ ಪಾಲಿಕೆ ಮೇಯರ್ ಹಾಗೂ ಆಯುಕ್ತರ ಮೇಲೆ ವಿಪಕ್ಷ ನಾಯಕ ಎ.ನಾಗರಾಜ್ ಮಾಡಿದ ಆರೋಪಗಳ ಪಟ್ಟಿ ಇದು.

ಪಾಲಿಕೆ ಆಡಳಿತ ವೈಖರಿ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು,  ನಗರದ ಅಭಿವೃದ್ಧಿಯಲ್ಲಿ ಪಾಲಿಕೆ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.

ಮೇಯರ್ ಅವರು ಅಧಿಕಾರ ವಹಿಸಿಕೊಂಡು 10 ತಿಂಗಳು ಕಳೆದರೂ ನಗರದ 45 ವಾರ್ಡ್‌ಗಳಲ್ಲಿ ಯಾವುದೇ ಒಂದು ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿಗಳ ಅನುದಾನದ ನಗರೋತ್ಥಾನ ಕಾಮಗಾರಿ ವಿಳಂಬವಾಗುತ್ತಿದೆ. ಪ್ರಶ್ನಿಸಿದರೆ ಫೈನಾನ್ಸ್ ಬಿಡ್, ಟೆಂಡರ್ ಬಿಡ್ ಎಂದು ಸಬೂಬು ಹೇಳುತ್ತಿದ್ದಾರೆ. ಸೆ.13 ರಂದು ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ 15ನೇ ಹಣಕಾಸು ಯೋಜನೆಯಡಿ 25 ಕೋಟಿ ರೂ. ಕಾಮಗಾರಿಗೆ ಅನುಮೋದನೆ ನೀಡಿದ್ದರೂ, ಟೆಂಡರ್ ಕರೆಯುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಇದು ಮೇಯರ್ ಹಾಗೂ ಆಯುಕ್ತರ ನಿರಾಸಕ್ತಿಗೆ ಕೈಗನ್ನಡಿಯಾಗಿದೆ ಎಂದರು.

ಕೊರೊನಾ ಲಸಿಕೆ ನೀಡುವ ಕಾರ್ಯಕ್ಕೆ ಎಂದು ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಕಳೆದ ಎರಡು ತಿಂಗಳಿನಿಂದ ಪಾಲಿಕೆಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ.  1 ಖಾತೆ ಎಕ್ಸ್‌ಟ್ರಾಕ್ಟ್ ಕೊಡಲು 2 ತಿಂಗಳು ಸತಾಯಿಸುತ್ತಿದ್ದಾರೆ. ಕಂದಾಯ ವಿಭಾಗದ ಉಪ ಆಯುಕ್ತರು ಸಹಿ ಸಾಕಾಗಿದ್ದರೂ, ಆಯುಕ್ತರೇ ಸಹಿ ಮಾಡಲಾರಂಭಿಸಿದ್ದಾರೆ ಇದರಿಂದಾಗಿ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.

ಕಳೆದ ಮೇಯರ್ ಅವಧಿಯ `ಮುಂದುವರೆದ ಸಾಮಾನ್ಯ ಸಭೆ’ ಹಾಗೂ ಸೆ.8ರಂದು ಒಂದು ಸಾಮಾನ್ಯ ಸಭೆ ಹೊರತುಪಡಿಸಿದರೆ ಇಲ್ಲಿಯವರೆಗೆ ಒಂದೂ ಸಭೆಯಾಗಿಲ್ಲ. ಪ್ರತಿ ತಿಂಗಳು ಸಭೆ ನಡೆಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಕಳೆದ ಸಾಮಾನ್ಯ ಸಭೆಯ ನಡವಳಿಗಳನ್ನು 7 ದಿನಗಳೊಳಗಾಗಿ ನೀಡಬೇಕಿತ್ತು. ಆದರೆ ನಾಲ್ಕು ತಿಂಗಳಾದರೂ ತಯಾರಿಸಿಲ್ಲ ಎಂದ ಅವರು, ಸಭೆ ಕರೆದರೆ ವಾರ್ಡ್‌ಗಳ ಸಮಸ್ಯೆಗಳು, ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಎವಿಕೆ ಕಾಲೇಜು ರಸ್ತೆಯಲ್ಲಿ ಅಳವಡಿಸಲಾಗಿದ್ದ ಅತ್ಯಾಧುನಿಕ ವಿದ್ಯುತ್ ದೀಪಗಳು ಕೆಟ್ಟು ಹೋಗಿದ್ದು, ಕೇಳಿದರೆ ಅವುಗಳನ್ನು ಪಾಲಿಕೆಗೆ ಹಸ್ತಾಂತರಿಸಿಲ್ಲ ಎಂದು ಹೇಳಲಾಗುತ್ತಿದೆ. ಕಸ ಸಂಗ್ರಹಣೆ ಕೆಲಸವನ್ನು ಯಾವುದೇ ಡಿಪಾಸಿಟ್ ಕಟ್ಟಿಸಿಕೊಳ್ಳದೆ ಪಕ್ಷದ ಕಾರ್ಯಕರ್ತರಿಗೆ ಕೊಡಲಾಗಿದೆ. ವಾಣಿಜ್ಯ ಮಳಿಗೆಗಳಿಂದ ಅವರು 300-400 ಹಾಗೂ ಮದುವೆ ಮಂಟಪಗಳಲ್ಲಿ  ಸುಮಾರು 2 ಸಾವಿರ ರೂ. ವಸೂಲಿ ಮಾಡುವ ಮೂಲಕ ಲೂಟಿ ಕಾರ್ಯ ನಡೆಯುತ್ತಿದೆ. ಕಟ್ಟಡ ಕಟ್ಟಲು ಎನ್‌ಒಸಿ ಕೊಡುವ ಕೆಲಸ ಪಾಲಿಕೆಯಲ್ಲಿ ಒಂದು ದಂಧೆಯಾಗಿ ಮಾರ್ಪಟ್ಟಿದೆ ಎಂದರು.

ವರ್ಕ್ ಆರ್ಡರ್ ಕೊಡಲು ಒಂದು ಪರ್ಸೆಂಟ್ ಗುತ್ತಿಗೆದಾರರಿಂದ ಹಣ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರೇ ನಮ್ಮ ಬಳಿ ಬಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೂ ದೂರು ಸಲ್ಲಿಸಲಿದ್ದೇವೆ ಎಂದರು. 9 ಜನ ಸಹಾಯಕ ಎಂಜಿನಿಯರ್‌ಗಳು ನೇಮಕಗೊಂಡು 9 ತಿಂಗಳುಗಳಾದರೂ ಅವರಿಗೆ ಕೆಲಸ ಹಂಚಿಕೆ ಮಾಡಿಲ್ಲ ಎಂದರು.

ನಾಮಫಲಕದಲ್ಲಿ ಕನ್ನಡ ಇದ್ದರೂ ಕೆಲವು ಕಡೆ ಬದಲಿಸಬೇಕೆಂದು, ಇಲ್ಲವಾದರೆ ದಂಡ ವಿಧಿಸುವುದಾಗಿ ಮೇಯರ್ ಹೇಳಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ವ್ಯಾಪಾರವೇ ಕಷ್ಟ. ಇಂತಹ ವೇಳೆ ನಾಮಫಲಕ ಬದಲಿಸುವುದು ಹೊರೆಯಾಗುತ್ತದೆ ಎಂದು ಪಾಲಿಕೆ ಸದಸ್ಯ ಮಂಜುನಾಥ ಗಡಿಗುಡಾಳ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಕೆ.ಚಮನ್ ಸಾಬ್, ಸೈಯದ್‌ ಚಾರ್ಲಿ, ಗಣೇಶ್ ಹುಲ್ಮನಿ, ಮುಖಂಡ ಯುವರಾಜ್ ಉಪಸ್ಥಿತರಿದ್ದರು.

error: Content is protected !!