ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ಪರವಾನಗಿ ರದ್ದು

 ಅಂಗಡಿ-ಮುಂಗಟ್ಟುಗಳ ಮಾಲೀಕರಿಗೆ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಎಚ್ಚರಿಕೆ

ದಾವಣಗೆರೆ, ಡಿ.15- ಕನ್ನಡದಲ್ಲಿ ನಾಮಫಲಕಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದ್ದು, ನಗರದಲ್ಲಿ ಈ ಆದೇಶ ಪಾಲಿಸದ ಅಂಗಡಿ-ಮುಂಗಟ್ಟುಗಳನ್ನು ಪಾಲಿಕೆ ಅಧಿಕಾರಿಗಳ ತಂಡದೊಂದಿಗೆ ಮೇಯರ್ ಎಸ್.ಟಿ. ವೀರೇಶ್ ಇಂದು ಪರಿಶೀಲಿಸಿ, ಕನ್ನಡದ ನಾಮಫಲಕಗಳ ಬಗ್ಗೆ ಜಾಗೃತಿ ಅಭಿಯಾನ ನಡೆಸಿದರು. 

ಈಗಾಗಲೇ ಅಳವಡಿಸಲಾಗಿರುವ ನಾಮಫಲಕ ಗಳನ್ನು ವಾರದೊಳಗಾಗಿ ಬದಲಿಸಿಕೊಂಡು ಆದೇಶ ಪಾಲಿಸದಿದ್ದರೆ ದಂಡ ಸಹಿತ ಉದ್ದಿಮೆ ಪರವಾನಿಗೆ ರದ್ದುಪಡಿಸುವುದೂ ಸೇರಿದಂತೆ ಕಾನೂನು ಕ್ರಮ ಜರುಗಿಸುವುದಾಗಿಯೂ ಅಂಗಡಿ-ಮುಂಗಟ್ಟುಗಳ ಮಾಲೀಕರಿಗೆ ಎಚ್ಚರಿಕೆಯನ್ನೂ ನೀಡಿದರು.

ಮಂಡಿಪೇಟೆಯಲ್ಲಿ ನಗರ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳ ತಂಡದೊಂದಿಗೆ ಕನ್ನಡ ನಾಮಫಲಕ ಅಳವಡಿಕೆಯ ಜಾಗೃತಿ ಮೂಡಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಮೇಯರ್ ವೀರೇಶ್, ಅಂಗಡಿ, ಮುಂಗಟ್ಟುಗಳ ನಾಮಫಲಕದಲ್ಲಿ ಕಡ್ಡಾಯವಾಗಿ ಶೇ.70 ರಷ್ಟು ಗಾತ್ರದಲ್ಲಿ ಕನ್ನಡ ಅಕ್ಷರ ಮತ್ತು ಶೇ.30 ರಷ್ಟು ಗಾತ್ರದಲ್ಲಿ ಅನ್ಯಭಾಷೆಯ ಅಕ್ಷರಗಳು ಇರಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಈ ಆದೇಶ ಪಾಲಿಸದಿದ್ದರೆ ದಂಡ, ನಾಮಫಲಕ ತೆರವು ಅಷ್ಟೇ ಅಲ್ಲದೇ ಉದ್ದಿಮೆ ಪರವಾನಿಗೆ ರದ್ದು ಪಡಿಸುವುದು ಸೇರಿದಂತೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುನ್ನೆಚ್ಚರಿಸಿದರು. 

ನಾಳೆ ಗುರುವಾರದಿಂದ ನಗರ ಪಾಲಿಕೆ ಆರೋಗ್ಯ ಅಧಿಕಾರಿಗಳ ತಂಡ ನಗರದಲ್ಲೆಲ್ಲಾ ಸರ್ಕಾರದ ಆದೇಶ ಪಾಲಿಸಲು ಜಾಗೃತಿ ಮೂಡಿಸಲಿದೆ. ಇದಕ್ಕೂ ಸ್ಪಂದಿಸದ ಅಂಗಡಿಗಳ ಮಾಲೀಕರ ಮೇಲೆ ದಂಡ, ಅದಕ್ಕೂ ಮೀರಿದಲ್ಲಿ ಅಂಗಡಿಗಳ ಪರವಾನಿಗೆ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರ ಪಾಲಿಕೆ ವತಿಯಿಂದ ಪರವಾನಿಗೆ ಪಡೆದ ಜಾಹೀರಾತಿನ ಫಲಕಗಳಿಗೂ ಸರ್ಕಾರದ ಆದೇಶ ಅನ್ವಯವಾಗಲಿದ್ದು, ಕನ್ನಡ ಭಾಷೆ ಬಳಕೆ ಕಡ್ಡಾಯವಾಗಬೇಕು. ಈ ವಿಚಾರವಾಗಿ ಪಾಲಿಕೆಯಿಂದ ಸೂಚನೆ ನೀಡಿದ್ದು, ಅಂತಹ ಜಾಹೀರಾತಿನಲ್ಲಿ ಕನ್ನಡ ಇಲ್ಲದಿದ್ದಲ್ಲಿ ಅದಕ್ಕೂ ಕ್ರಮ ಜರುಗಿಸಲಾಗುವುದು ಎಂದರು.

ದೊಡ್ಡ ಅಂಗಡಿಗಳ ಮಾಲೀಕರು ಫುಟ್‍ಪಾತ್ ಆಕ್ರಮಿಸಿಕೊಂಡು ವಸ್ತುಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದು, ಅವುಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಇನ್ನೂ ಎವಿಕೆ ರಸ್ತೆ ಸೇರಿದಂತೆ, ಹಲವೆಡೆ ಫುಟ್‍ಪಾತ್ ವ್ಯಾಪಾರಿಗಳು ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿದ್ದು, ಅವರಿಗೆ ಮಾನವೀಯತೆ ದೃಷ್ಟಿಯಿಂದ ಕಾಲಾವಕಾಶ ನೀಡಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ವೇಳೆ ಪಾಲಿಕೆ ಸದಸ್ಯರುಗಳಾದ ಕೆ.ಎಂ. ವೀರೇಶ್, ಸ್ವಾಗಿ ಶಾಂತಕುಮಾರ್, ಪಾಲಿಕೆ ಅಧಿಕಾರಿಗಳಾದ ಸಂತೋಷ್‌ ಕುಮಾರ್, ನಿಖಿಲ್, ರೆಹಮತ್, ನೀಲಪ್ಪ, ಶಶಿಧರ್, ಹೊನ್ನಪ್ಪ, ಮಲ್ಲಿಕಾ ಗುಡಿಕೋಟೆ, ಹೆಚ್. ಉಷಾ, ಜಯಪ್ರಕಾಶ್, ರಾಘವೇಂದ್ರ ಸೇರಿದಂತೆ ಇತರರು ಇದ್ದರು.

error: Content is protected !!