ಹೆಂಡದಂಗಡಿಗೆ 8 ನಿಯಮ, ಶಿಕ್ಷಣ ಸಂಸ್ಥೆಗೆ 80 ನಿಯಮ

ಹರಪನಹಳ್ಳಿ: ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಅವೈಜ್ಞಾನಿಕ ನಿಯಮಗಳ ಹೇರಿಕೆ ವಿರೋಧಿಸಿ ಪ್ರತಿಭಟನೆ

ಹರಪನಹಳ್ಳಿ, ಡಿ.15- ಸರ್ಕಾರ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮೇಲೆ ಅವೈಜ್ಞಾನಿಕ ನಿಯಮಗಳ ಹೇರಿಕೆಯನ್ನು ವಿರೋಧಿಸಿ ಮಠಾಧೀಶರು, ಖಾಸಗಿ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಶಿಕ್ಷಕರು ಸಭೆ ಸೇರಿ, ನಂತರ ಹೊಸಪೇಟೆ ರಸ್ತೆ, ಐ.ಬಿ.ವೃತ್ತದ ಮೂಲಕ ತಾಲ್ಲೂಕು ಮಿನಿ ವಿಧಾನಸೌಧ ದವರೆಗೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಭಿತ್ತಿಪತ್ರ ಹಿಡಿದು ಮೆರವಣಿಗೆ ನಡೆಸಿದರು.

ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ನವೀಕರಣಕ್ಕೆ, ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆಯ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಕಡ್ಡಾಯಗೊಳಿಸಿರುವುದರಿಂದ ಮಧ್ಯಮ ಹಾಗೂ ಗ್ರಾಮೀಣ ಭಾಗದ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ಬಂದಿವೆ. 

ಖಾಸಗಿ ಶಾಲೆಗಳನ್ನು ಮುಚ್ಚಿದರೆ ಬಡ ಮಕ್ಕಳ ಶಿಕ್ಷಣವನ್ನು ಸರ್ಕಾರ ಕಸಿದುಕೊಂಡಂತಾಗುತ್ತದೆ. ಅಲ್ಲದೇ ಅನೇಕ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳ ಜೀವನ ಬೀದಿಗೆ ಬೀಳುವುದು. ಆದ್ದರಿಂದ ಶಾಲಾ ನಿಯಮಗಳನ್ನು ಸರಳೀಕರಣಗೊಳಿಸಬೇಕು. ಲಿಕ್ಕರ್ ಅಂಗಡಿ ಪರವಾನಿಗಿಗೆ  8 ನಿಯಮಗಳನ್ನು ಅಳವಡಿಸಿದ್ದಾರೆ. ಆದರೆ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು 80 ನಿಯಮಗಳನ್ನು ಅಳವಡಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಡಿ.23ರೊಳಗೆ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ನೀಲಗುಂದ ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿಗಳು, ಅರಸಿಕೇರಿ ಕೋಲಶಾಂತೇಶ್ವರ ಮಠದ ಶ್ರೀ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮೀಜಿ, ಕೂಲಹಳ್ಳಿ ಪಟ್ಟದ ಶ್ರೀ ಚಿನ್ಮಯಿ ಸ್ವಾಮೀಜಿ, ಅಡವಿಹಳ್ಳಿ ಶ್ರೀ ಸದ್ಗುರು ಶಿವಯೋಗಿ ವೀರಗಂಗಾಧರ ಹಾಲಸ್ವಾಮೀಜಿ, ನಿಚ್ಚವ್ವನಹಳ್ಳಿ ಶ್ರೀ ಹಾಲಸ್ವಾಮೀಜಿ, ಮುಸ್ಲಿಂ ಧಾರ್ಮಿಕ ಮುಖಂಡ ಮೌಲಾನಾ ಅಬ್ದುಲ್ ವಹಾಬ್‍ಸಾಬ್, ಲೋಕೇಶ್ ತಾಳಿಕಟ್ಟೆ, ಸಂಚಾಲಕ ಸುನಿಲ್ ಹುಡಗಿ, ಮುನಿಯಪ್ಪ, ಗುಂಡಗತ್ತಿ ಕೊಟ್ರಪ್ಪ, ಉಮಾಶಂಕರ್,  ರವಿ ಅಧಿಕಾರ್, ಬಸವರಾಜ ಕೊಂಡಜ್ಜಿ, ಶಾಹಿದ್  ತಹಶೀಲ್ದಾರ್, ಮಂಜುನಾಥ ಪೂಜಾರ, ಸಿ. ಬಸವರಾಜ್,  ನಂಜಪ್ಪ,ದಾದಾಪೀರ್, ಅರುಣ ಪೂಜಾರ್, ಕೆ.ವಿರೂಪಾಕ್ಷಪ್ಪ. ನಾರಾಯಣ,  ಚನ್ನೇಶ, ಅನ್ನಪೂರ್ಣ, ಮಲ್ಲಿಕಾರ್ಜುನ ಸ್ವಾಮಿ, ಆನಂದ್  ಸೇರಿದಂತೆ, ಇತರರು ಇದ್ದರು.

error: Content is protected !!