ಚಿಕನ್ ಕಂಪನಿ ವಿರುದ್ಧ ಕೋಳಿ ಸಾಕಾಣಿಕೆದಾರರ ಪ್ರತಿಭಟನೆ
ದಾವಣಗೆರೆ, ಡಿ.15- ಕೋಳಿ ಸಾಕಾಣಿಕೆದಾರರನ್ನು ಶೋಷಣೆ ಮಾಡುವ ಜೊತೆಗೆ ಕೋಳಿ ಮಾಂಸ ಖರೀದಿಸುವ ಗ್ರಾಹಕರಿಗೆ ಅನ್ಯಾಯ ಮಾಡುತ್ತಿರುವುದಾಗಿ ಆರೋಪಿಸಿ ನಗರದ ಶಾಬನೂರು ರಸ್ತೆಯ ವೆಂಕಾಬ್ ಚಿಕನ್ಸ್ ಕಚೇರಿಗೆ ಅಖಿಲ ಕರ್ನಾಟಕ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಇಂದು ಕೋಳಿ ಸಾಕಾಣಿಕೆದಾರರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಇದೇ ವೇಳೆ ಮಾತನಾಡಿದ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ, ವೆಂಕಾಬ್ಸ್ ಚಿಕನ್ನವರು ಹೆಚ್ಚಿನ ದರಕ್ಕೆ ಕೋಳಿ ಮರಿ ಮಾರಾಟ ಮಾಡಿ, ಮಾರುಕಟ್ಟೆಯಲ್ಲಿ ಕೇವಲ 70 ರೂ.ಗೆ ಕೋಳಿ ಖರೀದಿಗೆ ದರ ನಿಗದಿಪಡಿಸಿರುವ ಕಂಪನಿಗಳು ಅದೇ ಕೋಳಿ ಮಾಂಸವನ್ನು ಗ್ರಾಹಕರಿಗೆ 140 ರೂ.ಗಳಿಗೆ ಮಾರಾಟ ಮಾಡುತ್ತಾ ಒಂದು ಕಡೆ ಕೋಳಿ ಬೆಳೆದ ರೈತರಿಗೆ ಖರೀದಿಯಲ್ಲಿ ಶೋಷಣೆ ಮಾಡಿದರೆ, ಕೋಳಿ ಮಾಂಸ ಖರೀದಿಸುವ ಗ್ರಾಹಕರಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ, ಅನ್ಯಾಯ ಮಾಡುತ್ತಿವೆ ಎಂದು ಆಪಾದಿಸಿದರು.
ರೈತರು ಕೋಳಿ ಸಾಕಲು ಪ್ರತಿ ಕೋಳಿಗೆ 95 ರೂ.ಗಳಷ್ಟು ವೆಚ್ಚ ಮಾಡುತ್ತಾರೆ. ಕಂಪನಿಗಳು ಪ್ರತಿ ಕೋಳಿಗೆ 25 ರೂ. ನಷ್ಟ ಮಾಡುತ್ತಿವೆ. ಗ್ರಾಹಕರಿಗೆ ಅದೇ ಕೋಳಿಗೆ 75 ರೂ. ದರ ಹೆಚ್ಚಿಸಿ ಮಾರುತ್ತಿವೆ. ಇಲ್ಲಿ ಕೋಳಿ ಸಾಕಿದ ರೈತರಿಗೂ ಲಾಭವಿಲ್ಲ, ಕೋಳಿ ಮಾಂಸ ಖರೀದಿಸುವ ಗ್ರಾಹಕರಿಗೆ ಅನ್ಯಾಯ ತಪ್ಪಲಿಲ್ಲ ಎಂದು ಆಕ್ಷೇಪಿಸಿದರು.
ಇಂತಹ ಕೋಳಿ ಮಾಂಸದ ಕಂಪನಿಗಳಿಗೆ ತೆರಿಗೆ ಹೇರುವಂತೆ, ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಪಶು ಸಂಗೋಪನಾ ಇಲಾಖೆ, ರಾಜ್ಯ, ಕೇಂದ್ರ ಸರ್ಕಾರಗಳಿಗೆ ನಿರಂತರ ಒತ್ತಾಯಿಸುತ್ತಿದ್ದರೂ ಯಾರೊಬ್ಬರೂ ಕಿವಿಗೊಡುತ್ತಿಲ್ಲ ಎಂದು ದೂರಿದರು.
ರೈತರಿಗೆ ನೇರವಾಗಿ ಕೋಳಿ, ಕೋಳಿ ಮಾಂಸ ಮಾರಾಟ ಮಾಡಲು ಮುಕ್ತ ಅವಕಾಶ ಮಾಡಿಕೊಡಬೇಕು. ರೈತರ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಹೂಡಿ, ಅದರ ದುಪ್ಪಟ್ಟು ಲಾಭ ಬಾಚಿಕೊಳ್ಳುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ನಗರ ಸಿಪಿಐ ಸುರೇಶ್ ಸಗರಿ ಪ್ರತಿಭಟನಾ ನಿರತರ ಜೊತೆಗೆ ಚರ್ಚಿಸಿ, ಇದೇ ದಿನಾಂಕ 18ಕ್ಕೆ ವೆಂಕಾಬ್ ಚಿಕನ್ ಮುಖ್ಯಸ್ಥರೊಂದಿಗೆ ಸಂಘದ ಮುಖಂಡರ ಸಭೆ ನಡೆಸುವುದಾಗಿ ಭರವಸೆ ನೀಡಿದರು. ನಂತರ ರೈತರು ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದರು.
ಪ್ರತಿಭಟನೆಯಲ್ಲಿ ಸಂಘದ ಮೆದಿಕೆರೆ ಮಂಜುನಾಥ, ಗುರುಮೂರ್ತಿ, ಐಗೂರು ಶಿವಮೂರ್ತೆಪ್ಪ, ಚಿಕ್ಕನಹಳ್ಳಿ ಮಂಜುನಾಥ, ಕೊಂಡಜ್ಜಿ ನಾಗರಾಜ, ರಾಣೇಬೆನ್ನೂರು ಸುರೇಶ, ಬನ್ನಿಕೋಡು ಅಭಿಷೇಕ, ಷಂಷೀಪುರ ಮಂಜಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.