ಹರಿಹರದಲ್ಲಿ ಆಟೋ ಚಾಲಕರ ಮತ್ತು ಮಾಲೀಕರ ಸಂಘ, ಜಯಕರ್ನಾಟಕ ಸಂಘಟನೆಗಳಿಂದ ಪ್ರತಿಭಟನೆ
ಹರಿಹರ, ಡಿ. 15 – ನಗರದ ಸಿ.ಸಿ. ರಸ್ತೆಗಳು ಸಂಪೂರ್ಣ ಹಾಳಾಗಿರುವುದರಿಂದ ಸಂಚಾರಕ್ಕೆ ತೊಂದ ರೆಯಾಗುತ್ತಿರುವುದನ್ನು ಸರಿಪಡಿಸುವಂತೆ ಹಲವಾರು ಸಂಘಟನೆಗಳು ನಗರಸಭೆಯನ್ನು ಒತ್ತಾಯಿಸಿವೆ.
ಆಟೋ ಚಾಲಕರ ಮತ್ತು ಮಾಲೀಕರ ಸಂಘ, ಜಯಕರ್ನಾಟಕ ಸಂಘಟನೆ, ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹಾಗೂ ಹೆಚ್. ಶಿವರಾಮೇಗೌಡ ಬಣದ ಜೊತೆಗೆ ವಿವಿಧ ಕನ್ನಡಪರ ಸಂಘಟನೆಗಳು, ಆದಷ್ಟು ಬೇಗನೆ ರಸ್ತೆಗಳನ್ನು ಸರಿಪಡಿಸುವಂತೆ ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಮುಖಂಡರು, ಹರಿಹರ ನಗರ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ವಾರ್ಡ್ಗಳಲ್ಲಿ ಯು. ಜಿ.ಡಿ. ಕಾಮಗಾರಿಯಿಂದಾಗಿ ಸಿ.ಸಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಆಟೋ ಚಾಲಕರಿಗೆ ಮತ್ತು ವಾಹನ ಚಾಲಕರಿಗೆ, ಸಾರ್ವಜನಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ಗರ್ಭಿಣಿ ಸ್ತ್ರೀಯರಿಗೆ, ರೋಗಿಗಳಿಗೆ ಇನ್ನು ಮುಂತಾದವರಿಗೆ ಹಲವಾರು ತೊಂದರೆಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ಆಟೋಚಾಲಕರ ಮತ್ತು ಮಾಲೀಕರ ಸಂಘದ ಗೌರವ ಅಧ್ಯಕ್ಷ ಸಿ.ಎಂ. ಸಿದ್ದಲಿಂಗಸ್ವಾಮಿ, ಅಧ್ಯಕ್ಷ ಬಿ.ಎಸ್. ಮೋಹನ್, ಉಪಾಧ್ಯಕ್ಷರು ಟಿ.ಹೆಚ್. ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಮತ್ತು ಆಟೋ ಹನುಮಂತಪ್ಪ, ತಿಪ್ಪೇಶ್, ರಾಜು, ಮುತ್ತು, ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಎಸ್. ಗೋವಿಂದ, ಉಪಾಧ್ಯಕ್ಷ ಎಂ.ಆರ್. ಆನಂದ್, ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ರಮೇಶ್ ಮಾನೆ, ಪ್ರಧಾನ ಕಾರ್ಯದರ್ಶಿ ಪ್ರೀತಮ್ ಬಾಬು ಮತ್ತು ಹೆಚ್. ಶಿವರಾಮೇಗೌಡರ ಬಣ ಅಧ್ಯಕ್ಷ ಎಂ ಇಲಿಯಾಜ್, ಸೈಫುಲ್ಲಾ, ಸೈಯದ್ ಶಫಿ, ಯೂನಸ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.