ಚಿಕಿತ್ಸೆಗೆಂದು ಬಂದಿದ್ದ ವೃದ್ಧೆಯ ಚಿನ್ನದ ಸರ ಕಳ್ಳತನ

ದಾವಣಗೆರೆ, ಡಿ.14- ಚಿಕಿತ್ಸೆಗೆ ತೆರಳಿದ್ದ ವೃದ್ಧೆ ಕೊರಳಲ್ಲಿದ್ದ 1.20 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳ್ಳತನವಾಗಿದ್ದು, ಈ ಬಗ್ಗೆ ಖಾಸಗಿ ಆಸ್ಪತ್ರೆಯ ಮೂವರು ಸಿಬ್ಬಂದಿ ವಿರುದ್ಧ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ನಗರದ ನೀಲಮ್ಮ (75) ಎಂಬುವರ ಸರ ಕಳುವಾಗಿದ್ದು, ಡಿ.5ರ ಮಧ್ಯಾಹ್ನ ಅನಾರೋಗ್ಯದ ಹಿನ್ನೆಲೆಯಲ್ಲಿ ನೀಲಮ್ಮನವರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಇಸಿಜಿ ಮಾಡಿಸಿ, ಗ್ಲುಕೋಸ್ ಹಾಕಲಾಗಿತ್ತು. ನಂತರ ಆರೋಗ್ಯ ಸುಧಾರಿಸಿದ್ದರಿಂದ ಅದೇ ಸಂಜೆ 5ಕ್ಕೆ ಮನೆಗೆ ವಾಪಸ್ ಕರೆ ತರಲಾಗಿತ್ತು. 

ಇದೇ ದಿನಾಂಕ 6ರ ಮುಂಜಾನೆ ನೀಲಮ್ಮ ತಮ್ಮ ಕೊರಳಿನಲ್ಲಿದ್ದ 3 ತೊಲದ ಹವಳ, ಚಿನ್ನದ ಸರ ಕಾಣುತ್ತಿಲ್ಲವೆಂದು ಹೇಳಿದಾಗ, ಸರ ಕಳುವಾಗಿರುವುದು ಗೊತ್ತಾಗಿದೆ. ತಕ್ಷಣವೇ ನೀಲಮ್ಮ ಕುಟುಂಬ ಮನೆಯನ್ನೆಲ್ಲಾ ಹುಡುಕಿದರೂ ಸರ ಸಿಕ್ಕಿಲ್ಲ. ಮತ್ತೆ ಅಸ್ವಸ್ಥರಾದ ನೀಲಮ್ಮನವರಿಗೆ ಅದೇ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ. 

ಆಗ ನೀಲಮ್ಮನ ಕೊರಳಲ್ಲಿದ್ದ ಚಿನ್ನದ ಸರ ಕಾಣೆಯಾದ ಬಗ್ಗೆ ಆಸ್ಪತ್ರೆ ಮೇಲ್ವಿಚಾರಕರ ಗಮನಕ್ಕೆ ನೀಲಮ್ಮನ ಸಹೋದರ
ಜಗದೀಶ್ ತಂದರು. 

ನೀಲಮ್ಮನ ಆರೈಕೆ ಮಾಡಿದ್ದ ಸಿಬ್ಬಂದಿ ವಿಚಾರಿಸಿ, ತಿಳಿಸುವುದಾಗಿ ಆಸ್ಪತ್ರೆ ಮೇಲ್ವಿಚಾರಕರು ಪ್ರತಿಕ್ರಿಯಿಸಿದರು. ಅದೇ ದಿನ ನೀಲಮ್ಮ ಆಸ್ಪತ್ರೆಯಿಂದ ಬಿಡುಗಡೆಯಾದರು. ಆಸ್ಪತ್ರೆ ಸಿಸಿ ಟಿವಿ ಪರಿಶೀಲಿಸಿದಾಗ ಡಿ.5ರಂದು ಮೊದಲ ಸಲ ಆಸ್ಪತ್ರೆಗೆ ಬಂದಾಗ ಕೊರಳಲ್ಲಿ ಚಿನ್ನದ ಸರ ಇರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನೀಲಮ್ಮಗೆ ಚಿಕಿತ್ಸೆ ನೀಡಿದ್ದ ಸಂತೋಷ, ರತ್ನಮ್ಮ, ಮಂಜುನಾಥರ ಮೇಲೆ ಅನುಮಾನವಿದೆ ಎಂದು ಜಗದೀಶ್ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

error: Content is protected !!