ಅಧಿಕಾರಿಗಳು ಕರ್ತವ್ಯ ನಿರ್ವಹಿಸದಿದ್ದರೆ ನಗರಸಭೆ ಅಧೋಗತಿ

ಸಮರ್ಪಕ ನೀರು ಪೂರೈಸದ ಹರಿಹರ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್

ಹರಿಹರ, ಡಿ.13- ಅಧಿಕಾರಿಗಳು ಸರಿಯಾಗಿ ಕರ್ತವ್ಯಗಳನ್ನು ಮಾಡದೆ ಹೋದರೆ ನಗರಸಭೆ ಅಧೋಗತಿಯತ್ತ ಸಾಗುತ್ತದೆ. ಆದ್ದರಿಂದ ಅಧಿಕಾರಿ ಗಳು ಸರ್ಕಾರ ತಮಗೆ ವಹಿಸಿರುವ ಜವಾಬ್ದಾರಿ ಅರಿತು, ಜನತೆಯ ಕೆಲಸ ಮಾಡಿ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹೇಳಿದ್ದಾರೆ.

ಇಲ್ಲಿನ ಬೆಂಕಿನಗರ, ಹೈಸ್ಕೂಲ್ ಬಡಾವಣೆ, ಹೊಸಭರಂಪುರ, ಕಾಳಿದಾಸ ನಗರ, ವಿದ್ಯಾನಗರ, ಇಂದ್ರಾ ನಗರ ಸೇರಿದಂತೆ, ವಿವಿಧ ಬಡಾವಣೆಯಲ್ಲಿ  ಕಳೆದ ಐದು ದಿನಗಳಿಂದ ನೀರು ಸರಬರಾಜು ಮಾಡದೇ ಇರುವುದನ್ನು ಸ್ಥಳೀಯ ಸದಸ್ಯರು  ತಮ್ಮ ಗಮನಕ್ಕೆ ತಂದ ಪರಿಣಾಮವಾಗಿ, ನಗರಸಭೆಯ ಆವರಣಕ್ಕೆ ಆಗಮಿಸಿದ ಶಿವಶಂಕರ್, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಇನ್ನೂ ಎರಡು ದಿನಗಳಲ್ಲಿ ಸರಿಯಾಗಿ ನೀರು ಸರಬರಾಜು ಮಾಡಬೇಕು. ಇಲ್ಲದೇ ಹೋದರೆ ಅದಕ್ಕೆ ತಕ್ಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಗೆ ನೀರು, ವಿದ್ಯುತ್, ಸ್ವಚ್ಚತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಆಗದಿದ್ದರೆ ನಗರಸಭೆ ಇದ್ದು ಏನು ಪ್ರಯೋಜನ ? ಇಲ್ಲಿನ ಅಧಿಕಾರಿಗಳಿಗೆ ಯಾರ ಬಗ್ಗೆಯೂ ಭಯ ಎನ್ನುವುದು ಹೋಗಿದೆ. ಕಚೇರಿಯಲ್ಲಿ ಕುಳಿತು ಕಾಲ ಹರಣ ಮಾಡುವುದು ಬಿಟ್ಟರೆ ಬೇರೆ ಕೆಲಸ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವುದರಿಂದ ನಗರದ ಜನತೆಯ ಕಷ್ಟಗಳು ಹೇಗೆ ತಿಳಿಯುತ್ತವೆ? ಎಂದು ಪ್ರಶ್ನಿಸಿದ್ದಾರೆ.

ನದಿಯಲ್ಲಿ ನೀರು ಇದ್ದರೂ ಸಹ ನೀರು ಸರಬರಾಜು ಮಾಡುವುದಕ್ಕೆ ಮೋಟಾರ್‌ ದುರಸ್ತಿ ಮಾಡಲು ಹಲವಾರು ದಿನಗಳಿಂದ ಆಗುತ್ತಿಲ್ಲ ಎಂದರೆ ಹೇಗೆ? ಇದರಿಂದಾಗಿ ಜನರು ತಾಳ್ಮೆಯನ್ನು ಕಳೆದ ಕೊಳ್ಳುವುದಕ್ಕಿಂತ ಮುಂಚಿತವಾಗಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಬೇಕಿದೆ. ಇನ್ನೂ ಬೇಸಿಗೆ ಕಾಲದಲ್ಲಿ ನೀರಿನ ತೊಂದರೆ ಬಹಳ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ, ಅದಕ್ಕೆ ತಕ್ಕಂತೆ ಪೂರಕ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಕಳೆದ ಹಲವಾರು ವರ್ಷಗಳಿಂದ ನಗರಸಭೆಯಲ್ಲಿ ಠಿಕಾಣಿ ಹಾಕಿರುವ ಕೆಲವು ಅಧಿಕಾರಿಗಳ ವರ್ತನೆಯಿಂದಾಗಿ ಜನರು ರೋಸಿ ಹೋಗಿದ್ದಾರೆ. ಹಾಗಾಗಿ ಇಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಇದನ್ನು ಸರಿ ದಾರಿಗೆ ತರುವ ಕೆಲಸವನ್ನು ಆಡಳಿತದಲ್ಲಿ ಇರುವವರು ಮಾಡಬೇಕು ಎಂದು ಹೇಳಿದರು.  

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ದಿನೇಶ್ ಬಾಬು, ಆರ್.ಸಿ‌ ಜಾವೇದ್, ದಾದಾ ಖಲಂದರ್, ಮುಜಾಮಿಲ್, ಅಲ್ತಾಫ್,  ಮುಖಂಡ ರಾದ ಅಂಗಡಿ ಮಂಜುನಾಥ್, ಮನ್ಸೂರು ಮದ್ದಿ, ಜಾಕೀರ್, ಸುರೇಶ್ ಚಂದಾಪೂರ್, ನಗರಸಭೆ ಎಇಇ ಬಿರಾದಾರ, ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!