ಜಗಳೂರು, ಡಿ.13- ತಾಲ್ಲೂಕಿನ ಅಣಬೂರು ಗ್ರಾಮದ ವ್ಯಾಪ್ತಿಯಲ್ಲಿ ರೈತರೊಬ್ಬರು ಸುಮಾರು 44 ಎಕರೆ ಪ್ರದೇಶದಲ್ಲಿ ಔಡಲ ಬೆಳೆ ಬೆಳೆದು ಅಧಿಕ ಆದಾಯ ಗಳಿಸಿದ್ದಾರೆ.
ನಿವೃತ್ತ ಅಧಿಕಾರಿಯೂ ಆಗಿರುವ ಲಕ್ಷ್ಮಣಸ್ವಾಮಿ ಅವರು, ಮಳೆ ಕಡಿಮೆ ಪ್ರಮಾಣದಲ್ಲಿ ಬರುವ ತಾಲ್ಲೂಕಿನ ಪರಿಸ್ಥಿತಿಯಲ್ಲಿ ತಮ್ಮ 44 ಎಕರೆ ಜಮೀನಿನಲ್ಲಿ ಕೃಷಿ ಇಲಾಖೆ ಹಾಗೂ ಜಿಕೆವಿಕೆ ಅವರ ಸಲಹೆ ಮೇರೆಗೆ ಔಡಲ ಬೆಳೆಯನ್ನು ಬಿತ್ತನೆ ಮಾಡಿ, ಅಚ್ಚರಿಯ ಅಧಿಕ ಆದಾಯ ಪಡೆದುಕೊಂಡಿದ್ದಾರೆ.
ಇದರ ಜೊತೆಗೆ ಅಂತರ ಬೆಳೆಯಾಗಿ ಹುರುಳಿಯನ್ನೂ ಸಹ ಬಿತ್ತನೆ ಮಾಡಲಾಗಿದ್ದು ಇದರಿಂದಲೂ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಜಗಳೂರು ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಯಾವ ಬೆಳೆಯನ್ನು ಬೆಳೆದರೆ ಸೂಕ್ತ ಎಂಬುದರ ಬಗ್ಗೆ ಕೃಷಿ ಇಲಾಖೆ ಅವರೊಂದಿಗೆ ಸಮಾಲೋಚಿಸಿದ ನಂತರ, ನಾನು ಔಡಲ ಬೆಳೆಯನ್ನು ಬೆಳೆಯಲು ನಿರ್ಧರಿಸಿದೆ ಎನ್ನುತ್ತಾರೆ ರೈತರಾದ ಲಕ್ಷ್ಮಣಸ್ವಾಮಿ ಅವರು.
ಔಡಲ ಬೆಳೆಯ ಮಾರುಕಟ್ಟೆ ಬಗ್ಗೆಯೂ ಸಹ ಮಾಹಿತಿ ಹೊಂದಿದ್ದಾರೆ. ಔಡಲ ಬೆಳೆಯುವ ರೈತರ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದು, ಪ್ರತಿದಿನ ದೇಶ ದಲ್ಲಿ ಔಡಲ ಬೆಳೆಯ ಮಾರುಕಟ್ಟೆ ಬೆಲೆ ಮಾಹಿತಿ ಲಭ್ಯವಾಗುತ್ತದೆ ಎನ್ನುತ್ತಾರೆ.
ಒಂದು ಬಾರಿ ಮಾತ್ರ ಔಷಧ ಸಿಂಪ ರಣೆ ಮಾಡಿದ್ದು ಯಾವುದೇ ರೀತಿಯ ಗೊಬ್ಬರವನ್ನು ಹಾಕಿರುವುದಿಲ್ಲ. ಈಗಾಗಲೇ ಎರಡು ಬಾರಿ ಬೆಳೆಯನ್ನು ಕಟಾವು ಮಾಡಲಾಗಿದೆ. ಇನ್ನೂ ಎರಡು ಬಾರಿ ಕಟಾವು ಮಾಡಲಾಗುವುದು. ರೈತರು ಮೆಕ್ಕೆಜೋಳ ಬೆಳೆಗಿಂತಲೂ ಔಡಲ ಬೆಳೆಯುವುದು ಸೂಕ್ತ ಎನ್ನುತ್ತಾರೆ ಅವರು.
ಭಾರತ ದೇಶದ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 5200 ರೂ. ಬೆಲೆ ಇದೆ. ರೈತರು ಈ ಬಗ್ಗೆ ಆಸಕ್ತಿ ವಹಿಸಬೇಕು ಎನ್ನುತ್ತಾರೆ ಲಕ್ಷ್ಮಣ ಸ್ವಾಮಿ.
ಜಮೀನಿಗೆ ಭೇಟಿ ನೀಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸಲು ಅವರು, ತಾಲ್ಲೂಕಿನ ರೈತರು ಬೆಳೆ ಪರಿವರ್ತನೆ ಬಗ್ಗೆ ಚಿಂತಿಸಬೇಕು. ಮೆಕ್ಕೆಜೋಳದ ಬದಲಾಗಿ ಔಡಲ, ತೊಗರಿ, ಹುರುಳಿ, ಅಂತರ ಬೆಳೆಯಾಗಿ ಬೆಳೆಯಲು ಪ್ರಯತ್ನಿಸಬೇಕು. ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈಹಿಡಿಯಲಿದೆ. ಲಕ್ಷ್ಮಣ ಸ್ವಾಮಿ ಅವರ ಪ್ರಯತ್ನ ಉತ್ತಮವಾಗಿದೆ ಎಂದರು.
ತಾಲ್ಲೂಕಿನಲ್ಲಿ ಮುಂಗಾರಿನ 54 ಸಾವಿರ ಹೆಕ್ಟೇರ್ ಪ್ರದೇಶ ಬಿತ್ತನೆಯಾ ಗಿದ್ದು. ಮೆಕ್ಕೆಜೋಳ, ರಾಗಿ, ಶೇಂಗಾ, ತೊಗರಿ ಮುಂತಾದ ಬೆಳೆಗಳನ್ನು ಹಾಕಿದ್ದಾರೆ.
ಅಂತರ ಬೆಳೆಯಾಗಿ ತೊಗರಿ, ಹುರುಳಿ, ಅವರೆ ಬೆಳೆಗಳನ್ನು ಬೆಳೆದಿದ್ದಾರೆ. 44 ಎಕರೆ ಅತಿ ಹೆಚ್ಚು ಪ್ರದೇಶದಲ್ಲಿ ಔಡಲ ಒಂದೇ ಬೆಳೆಯನ್ನು ಬೆಳೆದಿರುವುದು ವಿಶೇ ಷವಾಗಿದೆ ಎಂದು ಅವರು ತಿಳಿಸಿದ್ದಾರೆ.