ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಠೇವಣಿದಾರರಿಗೆ ಚೆಕ್ ವಿತರಿಸಿದರು.
ಠೇವಣಿದಾರರ ಹಿತ ಕಾಪಾಡಲು ಬದ್ಧ: ಸಚಿವ ರಾಜೀವ್ ಚಂದ್ರಶೇಖರ್
ದಾವಣಗೆರೆ, ಡಿ.12- ಬಡ ಹಾಗೂ ಮಧ್ಯಮ ವರ್ಗದ ಬ್ಯಾಂಕ್ ಠೇವಣಿದಾರರ ಹಿತ ಕಾಪಾಡುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಎಂದು ಕೇಂದ್ರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ `ನಮಗೆ ಠೇವಣಿದಾರ ಮೊದಲು’ ಐದು ಲಕ್ಷ ರೂ.ವರೆಗೆ ಖಾತರಿಪಡಿಸಿದ ಠೇವಣಿ ವಿಮೆ ಪಾವತಿ ಕಾರ್ಯಕ್ರಮದಲ್ಲಿ ಠೇವಣಿದಾರರಿಗೆ ಚೆಕ್ ವಿತರಿಸಿ ಅವರು ಮಾತನಾಡಿದರು.
`ನಮಗೆ ಠೇವಣಿದಾರ ಮೊದಲು’ ಎಂಬುದು ಕೇಂದ್ರ ಸರ್ಕಾರದ ನಿಲುವಾಗಿದ್ದು ಬ್ಯಾಂಕ್ ಗ್ರಾಹಕರ ಹಿತ ಕಾಪಾಡಲು ಅದರಲ್ಲಿಯೂ ಬಡ ಮಧ್ಯಮ ವರ್ಗದವರ ರಕ್ಷಣೆಗೆ ಸರ್ಕಾರ ಉತ್ತರದಾಯಿ ಆಗಿದೆ ಎಂದು ಹೇಳಿದರು.
ಬ್ಯಾಂಕಿಂಗ್ ವಲಯದಲ್ಲಿ ಠೇವಣಿದಾರರ ಪಾತ್ರ ಅತಿ ಮುಖ್ಯ. ಇವರ ಹಿತ ಕಾಪಾಡಲು 2014 ರಲ್ಲಿ 1 ಲಕ್ಷ ಹಣಕ್ಕೆ ವಿಮೆ ಗ್ಯಾರಂಟಿ ನೀಡಲಾಯಿತು. ಪ್ರಸ್ತುತ 5 ಲಕ್ಷ ಹಣಕ್ಕೆ ವಿಮೆ ಗ್ಯಾರಂಟಿ ನೀಡುವುದರೊಂದಿಗೆ ಬಡ ಹಾಗೂ ಮಧ್ಯಮ ವರ್ಗದವರ ಹಣಕ್ಕೆ ಸರ್ಕಾರ ಗ್ಯಾರಂಟಿ ನೀಡುತ್ತಿದೆ ಎಂದರು.
ಕೆಲ ಸಂದರ್ಭಗಳಲ್ಲಿ ಬ್ಯಾಂಕ್ ಗಳ ಅಸಮರ್ಪಕ ನಿರ್ವಹಣೆಯಿಂದ ಮುಚ್ಚಲ್ಪಟ್ಟಾಗ ಬಹಳಷ್ಟು ಬಡ ಮಧ್ಯಮ ವರ್ಗದವರು ತಮ್ಮ ಜೀವನದ ಅವಶ್ಯಕತೆಗಳಾದ ಮನೆ ಕಟ್ಟುವುದು, ಮಕ್ಕಳ ಮದುವೆ ಮುಂತಾದ ಉದ್ದೇಶಗಳಿಗೆ ಇಟ್ಟಿದ್ದ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದರೆ ಸರ್ಕಾರದ ಈ ಕ್ರಮದಿಂದಾಗಿ ಗ್ರಾಹಕರು ನಿರಾಳರಾಗುತ್ತಾರೆಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಯವರ `ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಎಂಬಂತೆ ಯಾವೊಬ್ಬ ಬ್ಯಾಂಕ್ ಗ್ರಾಹಕರು ತೊಂದರೆಗೆ ಸಿಲುಕಬಾರದೆಂದು 5 ಲಕ್ಷ ರೂ. ವರೆಗಿನ ಹಣಕ್ಕೆ ವಿಮೆ ಸಿಗುವಂತೆ ಮಾಡಿದ್ದಾರೆಂದರು
ಈ ಹಿಂದೆ ಬ್ಯಾಂಕ್ ಗ್ರಾಹಕರು ತಾವು ಇಟ್ಟ ಹಣ ವ್ಯತ್ಯಯವಾದರೆ ಆತಂಕಕ್ಕೊಳಗಾಗುತ್ತಿದ್ದರು. ಬಡ ಹಾಗೂ ಮಧ್ಯಮ ವರ್ಗದ ಜನತೆ ತಾವು ಕೂಡಿಟ್ಟ ಹಣ ಕಳೆದುಕೊಂಡು ಕಣ್ಣೀರು ಹಾಕಬಾರದು ಎಂಬುದು ಪ್ರಧಾನಿ ನಿಲುವಾಗಿದೆ.
– ಜಿ.ಎಂ. ಸಿದ್ದೇಶ್ವರ್, ಸಂಸದ
4 ವರ್ಷಗಳ ಹಿಂದೆ ಠೇವಣಿ ಇಟ್ಟಿದ್ದ 2.28 ಲಕ್ಷ ರೂ. ಹಣ ಮರಳಿ ಪಡೆದಿರುವುದು ಸಂತಸ ತಂದಿದೆ.
– ಇರ್ಫಾನ್, ಠೇವಣಿ ಹಣ ಪಡೆದ ಗ್ರಾಹಕ
ಇಂದು ಮಹತ್ವದ ದಿನ. ದಾವಣಗೆರೆಯ ಎಲ್ಲಾ ಠೇವಣಿದಾರರಿಗೆ ಅಭಿನಂದಿಸುತ್ತೇನೆ. ಸಂಕಷ್ಟದಲ್ಲಿರುವ ಬ್ಯಾಂಕುಗಳ ಠೇವಣಿದಾರರಿಗೆ ಕೇಂದ್ರ ಸರ್ಕಾರದ ಕ್ರಮ ನೆರವಾಗಲಿದೆ.
– ಸಚಿವ ರಾಜೀವ್ ಚಂದ್ರಶೇಖರ್
ದಾವಣಗೆರೆ ಜಿಲ್ಲೆಯಲ್ಲೂ ಠೇವಣಿ ಇರಿಸಿದ್ದ 642 ಗ್ರಾಹಕರಿಗೆ 2 ಕೋಟಿ ರೂ.ಗಳಷ್ಟು ಹಣ ಬಿಡುಗಡೆ ಮಾಡಿದ್ದು, ಉಳಿದವರ ಹಣವೂ ವಾಪಸ್ ಬರಲಿದ್ದು ಯಾರೂ ಆತಂಕಪಡಬೇಕಿಲ್ಲ ಎಂದರು.
ಕೆನರಾ ಬ್ಯಾಂಕ್ ಮಣಿಪಾಲ್ ಕ್ಷೇತ್ರ ಕಚೇರಿಯ ಮಹಾಪ್ರಬಂಧಕ ರಾಮಾನಾಯ್ಕ ಮಾತನಾಡುತ್ತಾ, ಹಲವಾರು ಕಾರಣಗಳಿಂದ ಕೆಲವು ಬ್ಯಾಂಕುಗಳ ನಷ್ಟದ ಹಾದಿಯತ್ತ ಸಾಗುತ್ತವೆ. ಈ ಸಂದರ್ಭದಲ್ಲಿ ಆರ್ಬಿಐ ಹಾಗೂ ಕೇಂದ್ರ ಸರ್ಕಾರ ಸಮಯಕ್ಕೆ ಸರಿಯಾಗಿ ಹಣ ಮರಳಿಸುವ ಕೆಲಸ ಮಾಡುತ್ತವೆ ಎಂದರು.
ಭಾರತದ ಬ್ಯಾಂಕಿಗ್ ವ್ಯವಸ್ಥೆ ಸದೃಢವಾಗಿದೆ. ಸರ್ಕಾರ ಠೇವಣಿದಾರರಿಗೆ ಒತ್ತು ನೀಡುತ್ತಿದೆ. ಆದಷ್ಟೂ ಗ್ರಾಹಕರು ಡಿಜಿಟಲ್ ವ್ಯವಸ್ಥೆ ಬಳಸುವ ಮೂಲಕ ದೇಶದಲ್ಲಿ ಕ್ರಾಂತಿಯೋಪಾದಿಯಲ್ಲಿ ದೇಶವನ್ನು ಮುನ್ನಡೆಸಬೇಕು. ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಠೇವಣಿದಾರರಿಗೆ ಚೆಕ್ ವಿತರಿಸಲಾಯಿತು. ಮಿಲ್ಲತ್ ಬ್ಯಾಂಕ್ನಲ್ಲಿ 4 ವರ್ಷಗಳ ಹಿಂದೆ ಠೇವಣಿ ಇಟ್ಟಿದ್ದ 2.28 ಲಕ್ಷ ರೂ. ಹಣ ಮರಳಿ ಪಡೆದಿರುವುದಾಗಿ ಇರ್ಫಾನ್ ಹೇಳಿದರು. ಮಿರ್ಜಾ ಸನಾವುಲ್ಲಾ ಮಾತನಾಡಿ, ತಾವು 3 ವರ್ಷದ ಹಿಂದೆ ಮಿಲ್ಲತ್ ಬ್ಯಾಂಕ್ನಲ್ಲಿ ಇಟ್ಟಿದ್ದ 1 ಲಕ್ಷ ರೂ. ಠೇವಣಿ ಮರಳಿ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಹರಿಹರದ ಡಾ.ಗೋಪಿ ತಮ್ಮ ಠೇವಣಿ ಹಣವೂ ಮರಳಿ ದೊರೆತಿದ್ದು, ಸರ್ಕಾರದ ಕ್ರಮಕ್ಕೆ ಧನ್ಯವಾದ ತಿಳಿಸುತ್ತಾ, ಇದೊಂದು ಧನಾತ್ಮಕ ಬೆಳವಣಿಗೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ವಿಜಯಮಹಾಂತೇಶ ದಾನಮ್ಮನವರ್, ಕೆನರಾ ಬ್ಯಾಂಕ್ ಕ್ಷೇತ್ರೀಯ ಮಹಾಪ್ರಬಂಧಕ ಹೆಚ್.ರಘುರಾಜ್, ಎಸ್.ಬಿ.ಐ. ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ರವಿರಂಜನ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ನಾಗೇಶ್ ಪ್ರಭು, ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಶ್ರುತ್ ಡಿ.ಶಾಸ್ತ್ರಿ ಇತರರು ಉಪಸ್ಥಿತರಿದ್ದರು. ಕೆ.ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ರುದ್ರಾಕ್ಷಿಬಾಯಿ ನಾಡಗೀತೆ ಹಾಡಿದರು.