ಜಿಲ್ಲಾ ಆಸ್ಪತ್ರೆಯಲ್ಲಿ ಸಾಕಷ್ಟು ಬೆಡ್, ವೈದ್ಯರು ಹಾಗೂ ಮಾನವ ಸಂಪನ್ಮೂಲ ಲಭ್ಯವಿದೆ. ಮಕ್ಕಳಿಗೆ ಚಿಕಿತ್ಸೆ ನೀಡಲು ಸಂಪೂರ್ಣ ಸನ್ನದ್ಧರಾಗಿದ್ದೇವೆ. ಜಿಲ್ಲೆಯಲ್ಲಿ ಗಾಬರಿ ಆಗುವ ಸಂದರ್ಭ ಇಲ್ಲ.
– ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ
ದಾವಣಗೆರೆ, ಸೆ. 21 – ಜಿಲ್ಲೆಯ ಮಕ್ಕಳಿಗೆ ವೈರಲ್ ಫೀವರ್ ಕಾಡುವುದು ಹೆಚ್ಚಾಗಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬಂದಿದೆ. ಕೊರೊನಾ ಮೂರನೇ ಅಲೆಗೆ ಮುಂಚೆಯೇ, ವೈರಲ್ ಫೀವರ್ ಕಾರಣದಿಂದಾಗಿ ಸಿ.ಜಿ. ಆಸ್ಪತ್ರೆಯಲ್ಲಿ ಸದ್ಯಕ್ಕೆ ಮಕ್ಕಳ ತೀವ್ರ ನಿಗಾ ಘಟಕದ (ಪಿ.ಐ.ಸಿ.ಯು.) ಎಲ್ಲಾ ಬೆಡ್ಗಳು ಭರ್ತಿಯಾಗಿವೆ.
ಪ್ರಸಕ್ತ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕು ಬಂದ ಒಂದು ಮಗು ಮಾತ್ರ ಚಿಕಿತ್ಸೆ ಪಡೆಯುತ್ತಿದೆ. ಆದರೆ, ವೈರಲ್ ಫಿವರ್ ಮಕ್ಕಳನ್ನು ಕಾಡುವುದೇ ಹೆಚ್ಚಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಸಕ್ತ 40 ಮಕ್ಕಳು ಜ್ವರದಿಂದ ದಾಖಲಾಗಿದ್ದಾರೆ. ಇವರಲ್ಲಿ ಏಳು ಜನರಿಗೆ ಶಂಕಿತ ಡೆಂಗ್ಯೂ ಇದೆ. ರಾಪಿಡ್ ಟೆಸ್ಟ್ ನಂತರ ಎಲಿಜಾ ಟೆಸ್ಟ್ಗೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಸಿ.ಜಿ. ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದ ಎಲ್ಲಾ 12 ಬೆಡ್ಗಳು ತುಂಬಿವೆ. ತೀವ್ರ ನಿಗಾ ಘಟಕಕ್ಕೆ ಇನ್ನೂ 36 ಬೆಡ್ ಹಾಕಲು ಸಿದ್ಧ ಮಾಡಿಕೊಳ್ಳುತ್ತಿದ್ದೇವೆ. ಅಗತ್ಯವಾದಲ್ಲಿ ಅದನ್ನು ಇನ್ನೂ ಹೆಚ್ಚು ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಬಾಪೂಜಿ ಆಸ್ಪತ್ರೆಯಲ್ಲಿ ವೈರಲ್ ಫೀವರ್ನಿಂದ 21 ಮಕ್ಕಳು ದಾಖಲಾಗಿದ್ದು, 10 ಶಂಕಿತ ಡೆಂಗ್ಯೂ ಪ್ರಕರಣಗಳಾಗಿವೆ. ಎಸ್.ಎಸ್.ಐ.ಎಂ.ಎಸ್. ಆಸ್ಪತ್ರೆಯಲ್ಲಿ 110 ವೈರಲ್ ಫೀವರ್ ಮಕ್ಕಳಿದ್ದು, 28 ಶಂಕಿತ ಡೆಂಗ್ಯೂ ಪ್ರಕರಣಗಳು ಎಂದೂ ಅವರು ಹೇಳಿದ್ದಾರೆ.
ಹವಾಮಾನ ಹಾಗೂ ಋತುಗಳ ಬದಲಾ ವಣೆ ಸಂದರ್ಭದಲ್ಲಿ ವೈರಲ್ ಫೀವರ್ ಬರುವು ದು ಸಾಮಾನ್ಯವಾಗಿದೆ. ಡೆಂಗ್ಯೂ ಸಹ ಇದೇ ಸಮಯದಲ್ಲಿ ಬರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪ್ರತಿ ವರ್ಷ ಆಗಸ್ಟ್ – ಸೆಪ್ಟೆಂಬರ್ನಲ್ಲಿ ಜ್ವರ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳಲ್ಲಿ ಉಸಿರಾಟದ ಸೋಂಕು ಕಾಣಿಸಿಕೊಳ್ಳುತ್ತದೆ. ಬ್ರಾಂಕೈಟಿಸ್, ನ್ಯುಮೋನಿಯಾ ಸಹ ಹೆಚ್ಚಾಗುತ್ತದೆ.
ಶಂಕಿತ ಡೆಂಗ್ಯೂ ಪ್ರಕರಣ ಕಂಡು ಬಂದಾಗ, ದೃಢವಾಗದೇ ಇದ್ದರೂ ಡೆಂಗ್ಯೂಗೆ ನೀಡುವ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಪಿ.ಐ.ಸಿ.ಯು. ತುಂಬಿದ ಸಂದರ್ಭದಲ್ಲಿ, ಸ್ಪೆಪ್ ಡೌನ್ ಸೌಲಭ್ಯದ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳಿಗೆ ಇನ್ನೂ 25 ಬೆಡ್ಗಳು ಲಭ್ಯವಿವೆ ಎಂದು ಸಿ.ಜಿ. ಆಸ್ಪತ್ರೆ ಮಕ್ಕಳ ತಜ್ಞ ಡಾ. ಲೋಹಿತ್ ತಿಳಿಸಿದ್ದಾರೆ. ಆದರೆ, ಸಮಾಧಾನಕರ ಅಂಶವೆಂದರೆ ವೈರಲ್ ಫೀವರ್ ತೀವ್ರ ಸಮಸ್ಯೆಗಳನ್ನು ತರುವುದಿಲ್ಲ. ಸೂಕ್ತ ಚಿಕಿತ್ಸೆಯಿಂದ ಗುಣವಾಗುತ್ತದೆ. ರೋಗ ಬಂದಾಗ ಭಯ ಪಡದೇ ತೋರಿಸಿಕೊಳ್ಳಬೇಕು. ವೈರಲ್ ಜ್ವರದಿಂದ ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ ಎಂದು ಡಾ. ಲೋಹಿತ್ ತಿಳಿಸಿದ್ದಾರೆ.
ಸಿ.ಜಿ. ಆಸ್ಪತ್ರೆಗೆ ದಾಖಲಾಗುವ ಮಕ್ಕಳಲ್ಲಿ ವೈರಲ್ ಫೀವರ್ ಬಂದವರು ಐದು ದಿನಗಳಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. ಡೆಂಗ್ಯೂ ರೀತಿಯ ಲಕ್ಷಣಗಳು ಕಂಡು ಬಂದ ಮಕ್ಕಳು ಹತ್ತು ದಿನಗಳಲ್ಲೇ ಚೇತರಿಸಿಕೊಂಡು ಮನೆಗೆ ಹೋಗುತ್ತಿದ್ದಾರೆ ಎಂದವರು ಹೇಳಿದ್ದಾರೆ.
ಮಕ್ಕಳು ತ್ವರಿತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರತಿದಿನ ಐದಾರು ಮಕ್ಕಳು ದಾಖಲಾಗುತ್ತಿದ್ದರೆ, ಅಷ್ಟೇ ಪ್ರಮಾಣದ ಮಕ್ಕಳು ಚೇತರಿಸಿಕೊಂಡು ಬಿಡುಗಡೆಯಾಗುತ್ತಿದ್ದಾರೆ. ಈ ಬಗ್ಗೆ ಗಾಬರಿಯಾಗುವ ಅಗತ್ಯವಿಲ್ಲ ಎಂದು ಸಿ.ಜಿ. ಆಸ್ಪತ್ರೆಯ ಆರ್.ಎಂ.ಒ. ಡಾ. ಎಂ.ಎಲ್. ಪಾಟೀಲ್ ತಿಳಿಸಿದ್ದಾರೆ.