ಖಾಸಗಿ ಶಾಲೆಯಲ್ಲಿ ಹೆಸರು, ಸರ್ಕಾರಿ ಶಾಲೆಯಲ್ಲಿ ಕಲಿಕೆ

ಜಿಲ್ಲೆಯ ಹತ್ತು ಸಾವಿರ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಬಂದರೂ ದಾಖಲಾತಿ ಸಾಧ್ಯವಾಗದೇ ಅತಂತ್ರ

ದಾವಣಗೆರೆ, ಸೆ. 26 – ಆರರಿಂದ ಹತ್ತನೇ ತರಗತಿಯವರೆಗಿನ ಶಾಲೆಗಳು ಕಳೆದ ತಿಂಗಳು ಆಗಸ್ಟ್ 23 ಹಾಗೂ ಸೆಪ್ಟೆಂಬರ್ 6ರಿಂದ ಎರಡು ಹಂತಗಳಲ್ಲಿ ಆರಂಭಗೊಂಡಿದ್ದರೂ, ಕೆಲ ತೊಡಕುಗಳು ಇನ್ನೂ ಬಗೆಹರಿಯದೇ ಹತ್ತು ಸಾವಿರ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.

ಕೊರೊನಾ ಸಾಂಕ್ರಾಮಿಕದಿಂದ ಶಿಕ್ಷಣದಲ್ಲಿ ಎರಡು ವರ್ಷಗಳಿಂದ ಅನಿಶ್ಚಿತತೆ ಉಂಟಾಗಿದೆ. ಆರ್ಥಿಕ ಒತ್ತಡ ಸೇರಿದಂತೆ, ಹಲವಾರು ಕಾರಣಗಳಿಂದ ಪೋಷಕರು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳ ಕಡೆ ಮುಖ ಮಾಡಿದ್ದಾರೆ. ಆದರೆ, ಸಾಕಷ್ಟು ಪೋಷಕರು ಹಳೆಯ ಶುಲ್ಕ ಪಾವತಿ ಮಾಡದೇ ಇರುವ ಕಾರಣ, ಖಾಸಗಿ ಶಾಲೆಗಳು ವರ್ಗಾವಣೆ ಪತ್ರ ಕೊಡಲು ನಿರಾಕರಿಸುತ್ತಿವೆ.

ಈ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರಲು ಬಯಸಿದರೂ ದಾಖಲಾತಿ ಸಾಧ್ಯವಾಗುತ್ತಿಲ್ಲ. ಹೆಸರಿರುವು ದು ಖಾಸಗಿ ಶಾಲೆಯಲ್ಲಿ, ಪಾಠ ಕಲಿಯುತ್ತಿರುವುದು ಸರ್ಕಾರಿ ಶಾಲೆಯಲ್ಲಿ ಎಂಬ ಅತಂತ್ರದಲ್ಲಿ ಈ ವಿದ್ಯಾರ್ಥಿಗಳಿದ್ದಾರೆ. ಸೆಪ್ಟೆಂಬರ್‌ ಮುಗಿದು ಅಕ್ಟೋಬರ್ ಸಮೀಪಿಸಿದರೂ ಈ ಗೊಂದಲ ಬಗೆಹರಿಯುತ್ತಿಲ್ಲ.

ಹೈಕೋರ್ಟ್‌ ಕಳೆದ ವರ್ಷ ಖಾಸಗಿ ಶಾಲೆಗಳ ಶುಲ್ಕದಲ್ಲಿ ಶೇ.30ರ ವಿನಾಯಿತಿ ನೀಡಿತ್ತು ಹಾಗೂ ಈ ವರ್ಷ ಶೇ.15ರ ವಿನಾಯಿತಿ ನೀಡಿದೆ. ಇಷ್ಟಾದರೂ, ಪೋಷಕರು ಶುಲ್ಕ ಪಾವತಿಸದ ಕಾರಣ ಮಕ್ಕಳ ಟಿ.ಸಿ. ಪಡೆಯಲು ಸಾಧ್ಯವಾಗಿಲ್ಲ. ಇಂತಹ ಮಕ್ಕಳ ಸಂಖ್ಯೆ ಸುಮಾರು 10 ಸಾವಿರದಷ್ಟಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಖಾಸಗಿ ಬಿಟ್ಟು ಸರ್ಕಾರಿ ಶಾಲೆಗಳಿಗೆ ಬಂದ ಈ ಮಕ್ಕಳು ಅಧಿಕೃತವಾಗಿ ಶಾಲೆಗೆ ಸೇರ್ಪಡೆಯಾಗಲು ಸಾಧ್ಯವಾಗಿಲ್ಲ. ಈ ಮಕ್ಕಳಿಗೆ ಶಿಕ್ಷಣ ನಿರಾಕರಿಸದೇ ಪಾಠ ಮಾಡಲಾಗುತ್ತಿದೆ. ಆದರೆ, ದಾಖಲಾತಿ ವಿಷಯದಲ್ಲಿ ಶಾಲೆಗಳು ಅಸಹಾಯಕವಾಗಿವೆ. ಪ್ರತಿನಿತ್ಯ ಈ ಪೋಷಕರು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸರ್ಕಾರಿ ಶಾಲೆಗಳಿಗೆ ಬಂದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಆದರೆ, ದಾಖಲಾತಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.85ರಷ್ಟು ದಾಖಲಾತಿ ಮಾತ್ರ ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ವರದಿಗಳ ಪ್ರಕಾರ ಜಿಲ್ಲೆಯಲ್ಲಿನ 495 ಪ್ರೌಢಶಾಲೆಗಳಿಗೆ 77,214 ಮಕ್ಕಳು ದಾಖಲಾಗಿದ್ದಾರೆ. 1,100 ಪ್ರಾಥಮಿಕ ಶಾಲೆಗಳಿಗೆ 53,318 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಈ ಪೈಕಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 24,346, ಅನುದಾನಿತ ಶಾಲೆಗಳಲ್ಲಿ 7,645, ಅನುದಾನ ರಹಿತ ಪ್ರಾಥಮಿಕ ಶಾಲೆಗಳಲ್ಲಿ 19,570 ಮತ್ತು ಸಮಾಜ ಕಲ್ಯಾಣ ಇಲಾಖೆ ಮತ್ತಿತರೆ ಶಾಲೆಗಳಲ್ಲಿ 1,757 ಮಕ್ಕಳಿದ್ದಾರೆ.

ಸರ್ಕಾರಿ ಪ್ರೌಢಶಾಲೆಗಳಲ್ಲಿ 25,611, ಅನುದಾನಿತ ಪ್ರೌಢಶಾಲೆಗಳಲ್ಲಿ 24,470, ಅನುದಾನ ರಹಿತ ಪ್ರೌಢಶಾಲೆಗಳಲ್ಲಿ 22,390 ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತಿತರೆ ಶಾಲೆಗಳಲ್ಲಿ 4,743 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಈ ಸಮಸ್ಯೆ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಉತ್ತಮವಾಗಿದೆ. ಶಾಲಾರಂಭದ ನಂತರ ಕೊರೊನಾದಿಂದ ಯಾವುದೇ ತೊಡಕು ಎದುರಾಗಿಲ್ಲ. ಮಕ್ಕಳ ದಾಖಲಾತಿಗೆ ಇನ್ನೂ ಸಮಯ ಇದೆ. ದಾಖಲಾತಿಗೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಕೆಲವೇ ಖಾಸಗಿ ಶಾಲೆಗಳನ್ನು ಹೊರತು ಪಡಿಸಿದರೆ, ಉಳಿದೆಲ್ಲ ಶಾಲೆಗಳಲ್ಲಿ 6ರಿಂದ ಹತ್ತನೇ ತರಗತಿಗೆ ನೇರ ಪಾಠಗಳು ನಡೆಯುತ್ತಿವೆ. ಪೋಷಕರು ಹಾಗೂ ಮಕ್ಕಳು ಉತ್ಸಾಹದಿಂದ ಶಾಲೆಗೆ ಬರುತ್ತಿದ್ದಾರೆ. ಮಕ್ಕಳು ಪೂರ್ಣ ಪ್ರಮಾಣದಲ್ಲಿ ಶಾಲೆಗಳಿಗೆ ಬರುತ್ತಿದ್ದಾರಾದರೂ, ಖಾಸಗಿ ಶಾಲೆಗಳಿಂದ ವರ್ಗಾವಣೆ ಪತ್ರ ಇನ್ನೂ ಸಿಗದ ಕಾರಣ ಒಟ್ಟು ದಾಖಲಾತಿ ಅಂಕಿ-ಅಂಶದಲ್ಲಿ ಕೊರತೆ ಇದೆ ಎಂದು ಹೇಳಿದ್ದಾರೆ.


– ಎಸ್‌.ಎ. ಶ್ರೀನಿವಾಸ್‌,
[email protected]

error: Content is protected !!