`ಅಕ್ಕ ಅಣ್ಣ ಬಣ್ಣ’ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದ ಮಂಜುನಾಥ ಸ್ವಾಮಿ
ದಾವಣಗೆರೆ, ಸೆ.26- ಶಿಕ್ಷಕ, ಕಲಾವಿದ ಶಾಂತಯ್ಯ ಪರಡಿಮಠ ಅವರ ಅವರ `ಅಕ್ಕ ಅಣ್ಣ ಬಣ್ಣ’ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಭಾನುವಾರ ನಗರದ ತರಳಬಾಳು ಬಡಾವಣೆಯಲ್ಲಿರುವ ಸ್ವಸ್ತಿ ಆರ್ಟ್ ಗ್ಯಾಲರಿಯಲ್ಲಿ ಚಾಲನೆ ನೀಡಲಾಯಿತು.
ಡಿಡಿಪಿಐ ಕಚೇರಿಯ ಸರ್ವಶಿಕ್ಷಣ ಅಭಿಯಾನದ ಉಪಯೋಜನೆ ಸಮನ್ವಯ ಅಧಿಕಾರಿ ಮಂಜುನಾಥಸ್ವಾಮಿ ಮೂರು ದಿನಗಳ ಕಾಲ ನಡೆಯುವ ಈ ಚಿತ್ರ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ದಾವಣಗೆರೆಯಲ್ಲಿ ಸಾಕಷ್ಟು ಚಿತ್ರಕಲಾವಿದರಿದ್ದು, ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಸಾಂಘಿಕ ಪ್ರಯತ್ನ ನಡೆಯಬೇಕಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಾವಣಗೆರೆ ವಿಶ್ವವಿದ್ಯಾ ನಿಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ ಕಣಸೋಗಿ, ಪತ್ರಕರ್ತ ಸದಾನಂದ ಹೆಗಡೆ, ಮಾತನಾಡಿದರು.
ಗಮನ ಸೆಳೆದ ಕಲಾಕೃತಿಗಳು
ಶಾಂತಯ್ಯ ಪರಡಿಮಠ ಅವರು ರಚಿಸಿರುವ ಅನೇಕ ಕಲಾಕೃತಿಗಳು ಹನ್ನೆರಡನೇ ಶತಮಾನದ ಶರಣ ಚಳವಳಿಯನ್ನು ನೆನಪಿಸುವಂತಿದ್ದವು. ಅಕ್ಕಮಹಾದೇವಿ, ಬಸವಣ್ಣನ ಚಿತ್ರಗಳು ಸೇರಿದಂತೆ, ಮ್ಯಾನ್ಹೋಲ್ ಸ್ವಚ್ಛಗೊಳಿಸುವ ಕಾರ್ಮಿಕನೊಬ್ಬ ಒಳಗಿನಿನ ಕತ್ತಲೆಯಿಂದಲೇ ಹೊರಗೆ ಕಾಣುವ ಬೆಳಕು ಕಾಣವು ಚಿತ್ರ, ಕಟ್ಟಡ ಕಾರ್ಮಿಕ ಹೆಂಗಸು ತನ್ನ ತಲೆಯ ಮೇಲೆ ಭಾರವಾದ ಇಟ್ಟಿಗೆಗಳನ್ನು ಹೊತ್ತಿದ್ದರೂ ಮುಗುಳ್ನಗುವ ಚಿತ್ರ, ಕೊಳಲನೂದುವ ಬಸವೇಶ್ವರರ ವಿಭಿನ್ನ ಚಿತ್ರ, ನೇಪಾಳಿ ಹೆಂಗಸು ಹೀಗೆ ಒಂದೊಂದು ಚಿತ್ರಗಳು ವಿಶಿಷ್ಟತೆಯಿಂದ ಕೂಡಿ, ನೋಡುಗರನ್ನು ಆಕರ್ಷಿಸಿದವು.
ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮನೋಹರ ಎಸ್.ಚಿಗಟೇರಿ ಮಾತನಾಡಿದರು. ಇಎನ್ಟಿ ತಜ್ಞ ಡಾ.ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು.
ಅನುಶ್ರೀ ಬಳಗದ ಧ್ಯಾನ್, ಗಾನವಿ, ಪರಿಣಿಕ ಮತ್ತು ವಿಹಾನ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಶ್ರೀ ಜಯ ವಿಭವ ವಿದ್ಯಾಸಂಸ್ಥೆಯ ಸದಸ್ಯ ಎಂ.ಕೆ. ಬಕ್ಕಪ್ಪ, ಸ್ವಸ್ತಿ ಆರ್ಟ್ ಗ್ಯಾಲರಿ ಮೇಲ್ವಿಚಾರಕ ರವಿ ಶ್ಯಾಮ ಹುದ್ದಾರ, ಅನುಶ್ರೀ ಸಂಗೀತ ಶಾಲೆಯ ಮೇಲ್ವಿಚಾರಕರಾದ ವೀಣಾ ಹೆಗಡೆ ಇತರರು ಉಪಸ್ಥಿತರಿದ್ದರು. ದತ್ತಾತ್ರೇಯ ಭಟ್ ನಿರೂಪಿಸಿದರು.