ಹೆಲಿಕಾಪ್ಟರ್ ಪತನದಲ್ಲಿ ರಾವತ್ ಪತ್ನಿ, 11 ಸಿಬ್ಬಂದಿ ದುರ್ಮರಣ
ನವದೆಹಲಿ, ಡಿ. 8 – ಭಾರತದ ಮೊದಲ ಸೇನಾ ಪಡೆಗಳ ಮೊದಲ ಮುಖ್ಯಸ್ಥರಾಗಿರುವ (ಸಿ.ಡಿ.ಎಸ್.) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಹಾಗೂ ಸಶಸ್ತ್ರ ಪಡೆಗಳ ಇತರೆ 11 ಸಿಬ್ಬಂದಿ ಹೆಲಿಕಾಪ್ಟರ್ ಪತನದಲ್ಲಿ ಸಾವನ್ನ ಪ್ಪಿದ್ದಾರೆ. ಅವರಿದ್ದ ಸೈನಿಕ ಹೆಲಿಕಾಪ್ಟರ್ ತಮಿಳುನಾಡಿನ ಊಟಿ ಬಳಿ ಪತನಗೊಂಡಿದೆ ಎಂದು ವಾಯುಪಡೆ ತಿಳಿಸಿದೆ.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಮಾತ್ರ ಅಪಘಾತದಲ್ಲಿ ಬದುಕುಳಿ ದಿದ್ದು, ಅವರಿಗೆ ವೆಲ್ಲಿಂಗ್ಟನ್ನಲ್ಲಿರುವ ಸೈನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಶೇ.80ರಷ್ಟು ಸುಟ್ಟ ಗಾಯಗಳಿಗೆ ಸಿಲುಕಿದ್ದು, ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಜನರಲ್ ರಾವತ್ ಅವರಿದ್ದ ಎಂಐ-17ವಿ5 ಹೆಲಿಕಾಪ್ಟರ್ ಪತನಗೊಂಡ ಕಾರಣದ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರ ಆದೇಶಿಸಿದೆ.
ಮಂಜು ಮುಸುಕಿದ ವಾತಾವರಣದ ನಡುವೆ ಹೆಲಿಕಾಪ್ಟರ್ ಪತನವಾಗಿದೆ. ಮಂಜು ಮುಸುಕಿದ ವಾತಾವರಣವೇ ದುರಂತಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಹೆಲಿಕಾಪ್ಟರ್ನಲ್ಲಿದ್ದ 14 ಜನರ ಪೈಕಿ 13 ಜನರು ಸಾವನ್ನಪ್ಪಿದ್ದಾರೆ.
ರಾವತ್ ಹಾಗೂ ಇತರರಿದ್ದ ಹೆಲಿ ಕಾಪ್ಟರ್ ಸುಲುರು ವಾಯುಪಡೆ ಕೇಂದ್ರ ದಿಂದ ಬೆಳಿಗ್ಗೆ 11.50ಕ್ಕೆ ಹೊರಟಿತ್ತು. ಅದು ಊಟಿಯಲ್ಲಿರುವ ವೆಲ್ಲಿಂಗ್ಟನ್ ರಕ್ಷಣಾ ಸೇವೆಗಳ ಕಾಲೇಜಿಗೆ ಗಂಟೆಯ ನಂತರ ತಲುಪಬೇಕಿತ್ತು. ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ರಾವತ್ ಇಲ್ಲಿಗೆ ಆಗಮಿಸುತ್ತಿದ್ದರು.
ಬೆಳಿಗ್ಗೆ 12.20ರ ಸಮಯದಲ್ಲಿ ಹೆಲಿಕಾಪ್ಟರ್ ಇಳಿಯುವ ಕೇವಲ ಹತ್ತು ಕಿ.ಮೀ. ದೂರದಲ್ಲಿ ಅಪಘಾತ ಸಂಭವಿಸಿದೆ.
ಮಂಜು ಮುಸುಕಿದ ವಾತಾವರಣದಲ್ಲಿ ಹೆಲಿಕಾಪ್ಟರ್ ಕೆಳ ಮಟ್ಟದಲ್ಲಿ ಹಾರುತ್ತಾ ಕಣಿವೆಯೊಂದರಲ್ಲಿ ಕುಸಿಯಿತು, ನಂತರ ಮರಗಳ ಮೇಲೆ ಉರುಳಿತು. ಆಗ ಬೆಂಕಿ ಕಾಣಿಸಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೆಲಿಕಾಪ್ಟರ್ ಪತನಗೊಳ್ಳುವಾಗ ಕೆಲ ಮನೆಗಳಿಗೆ ತಗುಲಿತಾದರೂ, ಮನೆಯಲ್ಲಿ ದ್ದವರಿಗೆ ಯಾವುದೇ ತೊಂದರೆಗಳಾಗಿಲ್ಲ.
ಸೇನಾ ಹೆಲಿಕಾಪ್ಟರ್ ಎಂಐ17ವಿ5 ಪತನ
ನವದೆಹಲಿ, ಡಿ. 8 – ಸೇನಾ ಪಡೆಗಳ ಮುಖ್ಯಸ್ಥ (ಸಿ.ಡಿ.ಎಸ್.) ಬಿಪಿನ್ ರಾವತ್ ಹಾಗೂ ಇತರೆ 13 ಜನರನ್ನು ಕರೆದೊಯ್ಯುವಾಗ ಪತನಗೊಂಡ ಹೆಲಿಕಾಪ್ಟರ್ ಎಂಐ17ವಿ5 ಆಧುನಿಕ ಸೈನಿಕ ಸಾರಿಗೆ ವಾಹನವಾಗಿದ್ದು, 2012ರಿಂದ ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ರಷ್ಯನ್ ಹೆಲಿಕಾಪ್ಟರ್ಸ್ಗೆ ಸೇರಿದ ಕಜನ್ ಈ ಹೆಲಿಕಾಪ್ಟರ್ ಉತ್ಪಾದಿಸಿದೆ. ಈ ಹೆಲಿ ಕಾಪ್ಟರ್ನಲ್ಲಿ ಹವಾಮಾನದ ರಡಾರ್ ಹಾಗೂ ಇತ್ತೀಚಿನ ರಾತ್ರಿ ವೀಕ್ಷಣೆಯ ಉಪಕರಣಗಳಿವೆ.
ಇದರಲ್ಲಿ ಪಿಕೆವಿ-8 ಆಟೋಪೈಲಟ್ ವ್ಯವಸ್ಥೆ ಹಾಗೂ ಕೆಎನ್ಇಐ-8 ಏವಿಯಾನಿಕ್ಸ್ ಸಹ ಇದೆ. ಇದು ಗರಿಷ್ಠ 4 ಸಾವಿರ ಕೆಜಿ ತೂಕವನ್ನು ಹೊತ್ತು ಸಾಗಬಲ್ಲದು. 2011ರಲ್ಲಿ ಹೆಲಿಕಾಪ್ಟರ್ಗಳ ಮೊದಲ ತಂಡವನ್ನು ಪೂರೈಸಲಾಗಿತ್ತು. ಫೆಬ್ರವರಿ 2012ರಲ್ಲಿ ವಾಯುಪಡೆ ಔಪಚಾರಿಕವಾಗಿ ಹೆಲಿಕಾಪ್ಟರ್ ಕಾರ್ಯ ನಿರ್ವಹಣೆಗೆ ಚಾಲನೆ ನೀಡಿತ್ತು.
ಹೆಲಿಕಾಪ್ಟರ್ನಲ್ಲಿ ರಾವತ್ ಅವರಲ್ಲದೇ ಅವರ ಪತ್ನಿ, ಬ್ರಿಗೇಡಿಯರ್ ಎಲ್.ಎಸ್. ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರಿಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ನಾಯಕ್ ವಿವೇಕ್ ಕುಮಾರ್, ನಾಯಕ್ ಬಿ. ಸಾಯಿತೇಜ, ಹವಾಲ್ದಾರ್ ಸತ್ಪಾಲ್ ಅವರಿದ್ದರು. ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಪೈಲಟ್ ಆಗಿದ್ದರು ಮತ್ತು ಹೆಲಿಕಾಪ್ಟರ್ನಲ್ಲಿ ನಾಲ್ವರು ಸಿಬ್ಬಂದಿ ಇದ್ದರು.
ರಾವತ್ ಅವರು ರಕ್ಷಣಾ ಪಡೆಗಳ ಮೂರೂ ಸೇವೆಗಳ ಆಧುನೀಕರಣದ ಬೃಹತ್ ಹೊಣೆಯನ್ನು ಹೊತ್ತಿದ್ದರು. ಸೈನಿಕ ಪಡೆಗಳ ನಡುವೆ ಸಮನ್ವಯತೆ ತರುವ ಹಾಗೂ ಸಮರ ಸನ್ನದ್ಧತೆ ಹೆಚ್ಚಿಸುವ ಕರ್ತವ್ಯ ನಿಭಾಯಿಸುತ್ತಿದ್ದರು.
ಡಿಸೆಂಬರ್ 17, 2016ರಿಂದ ಡಿಸೆಂಬರ್ 31, 2019ರ ನಡುವೆ ಅವರು ಭಾರತೀಯ ಸೈನ್ಯದ ಮುಖ್ಯಸ್ಥರಾಗಿದ್ದರು. ಡಿಸೆಂಬರ್ 31, 2019ರಲ್ಲಿ ಅವರನ್ನು ಮೊದಲ ಸಿ.ಡಿ.ಎಸ್. ಆಗಿ ನೇಮಿಸಲಾಗಿತ್ತು.
ಅಪಘಾತದ ಬಗ್ಗೆ ಕೇಂದ್ರ ಸಂಪುಟ ರಕ್ಷಣಾ ಸಮಿತಿಗೆ ವಿವರಗಳನ್ನು ಸಲ್ಲಿಸಲಾಗಿದೆ. ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ , ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಉಪಸ್ಥಿತರಿದ್ದರು.
ರಾವತ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಉತ್ತರಾಖಂಡದ ಪೌರಿಯಲ್ಲಿ ಜನಿಸಿದ್ದ ರಾವತ್, ವೆಲ್ಲಿಂಗ್ಟನ್ ಸೈನಿಕ ಶಾಲೆಯಲ್ಲಿ ಪದವಿ ಪಡೆದಿದ್ದರು. ರಾವತ್ ಕುಟುಂಬದ ಹಲವರು ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ.
ನಾಲ್ಕು ದಶಕಗಳ ಕಾಲ ಸೈನ್ಯದಲ್ಲಿದ್ದ ಅವರು, ಚೀನಾ ಗಡಿ, ಕಾಶ್ಮೀರ ವಲಯ ಹಾಗೂ ವಿಶ್ವ ಸಂಸ್ಥೆಯ ಆಫ್ರಿಕಾ ಕಾರ್ಯಾಚರಣೆಗಳಲ್ಲೂ ಭಾಗಿಯಾಗಿದ್ದರು.
ಉನ್ನತ ತಪ್ಪಲಿನಲ್ಲಿ ಸಮರದ ಬಗ್ಗೆ ಅಪಾರ ಅನುಭವ ಹೊಂದಿದ್ದ ಅವರು, ಹತ್ತು ವರ್ಷಗಳ ಕಾಲ ಉಗ್ರವಾದ ವಿರೋಧಿ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದರು.