ಕನ್ನಡೇತರ ನಾಮಫಲಕಗಳಿಗೆ ದಂಡ : ಮೇಯರ್ ಎಚ್ಚರಿಕೆ

ದಾವಣಗೆರೆ,ಡಿ.7- ನಗರದ ಎಲ್ಲಾ ಅಂಗಡಿ-ಮುಂಗಟ್ಟುಗಳ ಮತ್ತು ಜಾಹೀರಾತು ಫಲಕಗಳು ಶೇಕಡ 70ರಷ್ಟು ಕನ್ನಡದಲ್ಲಿಯೇ ಇರಬೇಕು. ಇಲ್ಲವಾದರೆ ಅಂತಹ ನಾಮಫಲಕಗಳನ್ನು  ದಂಡ ಹಾಕುವ ಮೂಲಕ ತೆರವುಗೊಳಿಸುವ ಕೆಲಸವನ್ನು ಮಹಾನಗರ ಪಾಲಿಕೆಯಿಂದ ಮಾಡಲಾಗುವುದು ಎಂದು   ಮೇಯರ್  ಎಸ್.ಟಿ. ವೀರೇಶ್ ಎಚ್ಚರಿಸಿದ್ದಾರೆ. 

ಕರ್ನಾಟಕ ರಕ್ಷಣಾ ವೇದಿಕೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ನಡೆದ 66ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಮೇಯರ್ ವೀರೇಶ್, ಕನ್ನಡ ನಾಡಿನಲ್ಲಿ ಹುಟ್ಟಿದ ಕನ್ನಡಿಗರು ಕನ್ನಡ ಭಾಷೆಯನ್ನು ಬೆಳೆಸಬೇಕು, ಯಾವುದೇ ಭಾಷೆ ಕಲಿಯುವುದಕ್ಕೆ ಯಾರ ವಿರೋಧವೂ ಇಲ್ಲ.  ನಮ್ಮ ಭಾಷೆ ನಮಗೆ ಬಹಳ ಮುಖ್ಯ ಎಂದು ಹೇಳಿದರು.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸುವ ಬಗ್ಗೆ  ಟೆಂಡರ್ ಕರೆಯಲಾಗಿದ್ದು, 3-4 ದಿನಗಳೊಳಗಾಗಿ ನಾಯಿಗಳನ್ನು ಹಿಡಿಸುವ ಕೆಲಸ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು 

ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಸಸಿಗೆ ನೀರು ಹಾಕುವುದರ ಮೂಲಕ   ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ, ಕರ್ನಾಟಕ ಉದಯವಾಗಲು ಹಲವಾರು ಹಿರಿಯರ ತ್ಯಾಗ-ಬಲಿದಾನ ಕಾರಣ, ಅವರ ಪರಿಶ್ರಮದಿಂದ ಕರ್ನಾಟಕದಲ್ಲಿ ಕನ್ನಡಿಗರು ಸಮೃದ್ಧವಾಗಿ ಸುಸಂಸ್ಕೃತವಾಗಿ ಬದುಕಲು ಕಾರಣವಾಗಿದೆ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ, ಕರ್ನಾಟಕ ಎಂದರೆ ಅದು ಹೆಸರಲ್ಲ ಕರ್ನಾಟಕ ನಮ್ಮ ಉಸಿರು. ರಕ್ಷಣಾ ವೇದಿಕೆ ಕಟ್ಟುವುದರ ಮುಖಾಂತರ ಕನ್ನಡಿಗರನ್ನು ಒಗ್ಗೂ ಡಿಸುವ ಕೆಲಸ ರಾಜ್ಯಾಧ್ಯಕ್ಷ ನಾರಾಯಣಗೌಡರು ಮಾಡಿದರೆ, ದಾವಣಗೆರೆಯಲ್ಲಿ ಆ ಕೆಲಸವನ್ನು ರಾಮೇಗೌಡ ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದರು. 

ಈ ಸಂದರ್ಭದಲ್ಲಿ ಸಿಪಿಐ ಕೆ.ಎಂ. ಗಜೇಂದ್ರಪ್ಪ, ಜನತಾವಾಣಿ ಪತ್ರಕರ್ತ ಬಿ. ಸಿಕಂದರ್, ವಕೀಲರಾದ  ರಿಜ್ಜಿಖಾನ್, ಸಮೀವುಲ್ಲಾ, ಸೈಫುಲ್ಲಾ, ಲೋಹಿತ್, ಉಮೇಶ್, ಮೂರ್ತಿ, ಹಾಲೇಶ್, ಶಿವರಾಜ್, ಹುಸೇನ್  ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ. ಅಮಾನುಲ್ಲಾ ಖಾನ್ ವಹಿಸಿದ್ದರು. ಜೆಡಿಎಸ್  ರಾಜ್ಯ ಕಾರ್ಯದರ್ಶಿ ಟಿ ಅಜ್ಗರ್, ಮನ್ಸೂರ್ ಅಲಿ, ಪಾಲಿಕೆ ಸದಸ್ಯ ಸೈಯದ್ ಚಾರ್ಲಿ, ಕರವೇ  ಹಿರಿಯೂರು ತಾಲೂಕು ಅಧ್ಯಕ್ಷ ಉದಯಕುಮಾರ್, ದಾದಾಪೀರ್, ಕರವೇ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜಬಿವುಲ್ಲಾ, ಅನ್ವರ್, ಎಂ.ಡಿ ರಫೀಕ್, ಭಾಷಾ ಸಾಬ್,  ಖಾದರ್ ಭಾಷಾ, ಮಹಿಳಾ ಘಟಕದ ಅಧ್ಯಕ್ಷರಾದ ಬಸಮ್ಮ, ಮಂಜುಳಮ್ಮ, ಶಾಂತಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್  ಮತ್ತಿತರರು  ಉಪಸ್ಥಿತರಿದ್ದರು.

error: Content is protected !!