ದೃಶ್ಯಕಲಾ ಮಹಾವಿದ್ಯಾಲಯದ ಗತವೈಭವ ಮೆರೆಸಲು ನೆರವು

ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ

ದಾವಣಗೆರೆ, ಸೆ. 19 – ಕಲೆ, ಕಲಾವಿದರನ್ನು ಬೆಳೆಸಿ ಇತಿಹಾಸ ನಿರ್ಮಿಸಿರುವ ದಾವಣಗೆರೆ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲ ಯವು ಮತ್ತೊಮ್ಮೆ ಗತವೈಭವವನ್ನು ಮೆರೆಯುವಂತೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ್ ತಿಳಿಸಿದ್ದಾರೆ.

ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಂವಾದ ಹಾಗೂ ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ದೃಶ್ಯಕಲಾ ಮಹಾ ವಿದ್ಯಾಲಯವು ಅದ್ಭುತ ಕಲಾಸಿರಿಯನ್ನು ಒಳಗೊಂಡಿದೆ. 

ಇಲ್ಲಿರುವ ಕಲಾವೈಭವ ಮತ್ತು ಕಲಾ ಸಂಪತ್ತು ಜಗತ್ತಿನ ಕಲಾಸಕ್ತರಿಗೆ ತಲುಪಬೇಕು. ಅದಕ್ಕೆ ಅಗತ್ಯವಿರುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಕಲೆ ಯಾರೊಬ್ಬರ ಸ್ವತ್ತೂ ಅಲ್ಲ. ಅರ್ಧ ಶತಮಾನದ ಇತಿಹಾಸ ಹೊಂದಿರುವ ಮಹಾವಿದ್ಯಾಲಯಕ್ಕೆ ಆಧುನಿಕತೆಯ ಸ್ವರೂಪ ನೀಡಬೇಕಾಗಿದೆ. ಅಲ್ಲದೆ ಇಲ್ಲಿರುವ ಕಲೆಗಳಿಗೆ ಮಾರುಕಟ್ಟೆ ಒದಗಿಸಿ, ಕಲಾವಿದರನ್ನು ಪೋಷಿಸುವ ಮತ್ತು ಕಲಾ ಪರಂಪರೆಗೆ ಹೊಸ ಮಾರ್ಗವನ್ನು ನಿರ್ಮಿಸಬೇಕಾಗಿದೆ. ಇದಕ್ಕೆ ವಿಶ್ವವಿದ್ಯಾನಿಲಯವು ಆದ್ಯತೆ ನೀಡಿದೆ. ಇದು ಕಲಾ ಕೇಂದ್ರವಾಗಿ ಗುರುತಿಸಿಕೊಳ್ಳುವ ಎಲ್ಲ ಅರ್ಹತೆಗಳನ್ನೂ ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟರು. 

ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕಲಾವಿದರನ್ನು ಮಹಾವಿದ್ಯಾಲಯಕ್ಕೆ ಕರೆತಂದು ಇಲ್ಲಿನ ವಿದ್ಯಾರ್ಥಿಗಳಿಗೆ ಹೊಸ ಪರ್ಯಾಯಗಳ ಪರಿಚಯ ಮಾಡಿಕೊಡಬೇಕಾಗಿದೆ. 

ಅಲ್ಲದೇ ಇಲ್ಲಿನ ವಿದ್ಯಾರ್ಥಿಗಳ ವೃತ್ತಿ ಕೌಶಲ್ಯ ಮತ್ತು ಕಲಾ ಕೌಶಲ್ಯವನ್ನು ಜನರಿಗೆ ತಿಳಿಸಲು ಒತ್ತು ನೀಡಬೇಕಾಗಿದೆ. ಇದರಿಂದ ಮಹಾವಿದ್ಯಾಲಯವು ಜಾಗತಿಕ ಮಟ್ಟದಲ್ಲಿ ತನ್ನ ಅಸ್ತಿತ್ವ ರೂಪಿಸಿಕೊಳ್ಳಲಿದೆ. ಆ ಸಾಧನೆ ಮಾಡಲಿದೆ ಎಂಬ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ದಾವಣಗೆರೆ ವಿ.ವಿ. ಕುಲಪತಿ ಪ್ರೊ.ಎಸ್.ವಿ. ಹಲಸೆ, ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ್, ಪರೀಕ್ಷಾಂಗ ಕುಲಸಚಿವೆ
ಪ್ರೊ. ಅನಿತಾ ಎಚ್.ಎಸ್. ಹಣಕಾಸು ಅಧಿಕಾರಿ ಡಿ.ಪ್ರಿಯಾಂಕ, ಸಿಂಡಿಕೇಟ್
ಸದಸ್ಯ ಡಾ. ಶ್ರೀಧರ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಪ್ರಶಾಂತ್ ಬಣಕಾರ, ಪ್ರಾಚಾರ್ಯರಾದ ಗಂಗಾಧರ, ಎನ್‍ಇಪಿ ನೋಡಲ್ ಅಧಿಕಾರಿ ಡಾ. ಗೋಪಾಲ ಎಂ. ಅಡವಿರಾವ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!