ವಿದ್ಯೆ, ಬುದ್ಧಿ, ಆರ್ಥಿಕತೆಯಲ್ಲಿ ಹಿಂದುಳಿದಿದ್ದ ಬಂಜಾರ ಸಮಾಜದ ಸುಧಾರಣೆ ಶ್ಲ್ಯಾಘನೀಯ

ಶ್ರೀ ಸೇವಾಲಾಲ್ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ರಂಭಾಪುರಿ ಜಗದ್ಗುರುಗಳ ಪ್ರಶಂಸೆ

ಹೊನ್ನಾಳಿ, ಡಿ.6- ವಿದ್ಯೆ, ಬುದ್ಧಿ ಹಾಗು ಆರ್ಥಿಕತೆಯಲ್ಲಿ ಹಿಂದುಳಿದಿದ್ದ ಬಂಜಾರ ಸಮಾಜದವರು ವಿದ್ಯಾವಂತರಾಗಿ ಸುಧಾರಣೆಯೊಂದಿಗೆ ಸಮಾಜಕ್ಕೆ ಚೈತನ್ಯದೊಂದಿಗೆ ದೈವಶಕ್ತಿ ತುಂಬಿರುವುದು ಶ್ಲ್ಯಾಘನಿಯ ಎಂದು   ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ತಾಲೂಕಿನ ಘಂಟ್ಯಾಪುರ ಗ್ರಾಮದಲ್ಲಿ ಶ್ರೀ ಸೇವಾಲಾಲ್ ಶ್ರೀ ಮರಿಯಮ್ಮ ದೇವಿಯ ದೇವಸ್ಥಾನ ಉದ್ಘಾಟನೆ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮದ ಪ್ರಯುಕ್ತ ನಿನ್ನೆ ಹಮ್ಮಿಕೊಂಡಿದ್ದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

250 ವರ್ಷಗಳ ಇತಿಹಾಸವಿರುವ ಸಂತ ಸೇವಾಲಾಲರ ಸಂದೇಶಗಳ ಪ್ರಭಾವಗಳು ಬಂಜಾರ ಸಮಾಜದ ಧರ್ಮ, ನಂಬಿಕೆ ಹಾಗು ಗುರುಗಳ ಮೇಲೆ ಇಟ್ಟಿರುವ ಭಕ್ತಿಯನ್ನು ಪದಗಳಲ್ಲಿ ವರ್ಣಿಸಲಾಗದು ಎಂದು ನುಡಿದರು.

ದಾವಣಗೆರೆ ಜಿಲ್ಲೆಯ ಅನೇಕ ತಾಂಡಾಗಳಲ್ಲಿನ ಜನ ಮತಾಂತರ ಗೊಳ್ಳುತ್ತಿದ್ದು. ಅದರಲ್ಲಿ ಕೆಲವರು ವೀರಶೈವರು ಇರುವ ಬಗ್ಗೆ ಕೇಳಿಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಮಾಜ ಬಾಂಧವರು ಜಾಗೃತಿ ಮೂಡಿಸಬೇಕಿದೆ ಎಂದು ಶ್ರೀಗಳು ಕರೆ ನೀಡಿದರು.

ಶಾಸಕ ಎಂ.ಪಿ. ರೇಣುಕಾಚಾರ್ಯ ಜನಜಾಗೃತಿ ಧರ್ಮ ಸಮಾರಂಭ ಉದ್ಘಾಟಿಸಿ ಮಾತನಾಡಿ, ಘಂಟ್ಯಾಪುರ ಗ್ರಾಮಸ್ಥರು ಏತ ನೀರಾವರಿ ಯೋಜನೆಗೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಆ ಯೋಜನೆ ಅನುಷ್ಠಾನಕ್ಕೆ ಅರಣ್ಯ ಇಲಾಖೆ ಹಸಿರು ನಿಶಾನೆ ತೋರಿಸುತ್ತಿಲ್ಲ. ಶೀಘ್ರದಲ್ಲೇ 21 ಕೋಟಿ ರೂ.ಗಳ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ಮಂಜೂರು ಮಾಡಿಸುವುದಾಗಿ  ಭರವಸೆ ನೀಡಿದರು.

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್ ಮಾತನಾಡಿ, ಅಧ್ಯಾತ್ಮಿಕ ನೆಲೆಗಟ್ಟಿನಲ್ಲಿ ನಾವೆಲ್ಲರೂ ಬದುಕು ಕಟ್ಟಿಕೊಳ್ಳಬೇಕು. ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ಅಧ್ಯಾತ್ಮಿಕತೆಯ 4 ಅಂಶಗಳ ಮೇಲೆ ಜೀವನ ನಡೆಸಿದರೆ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹೊಟ್ಯಾಪುರ ಹಿರೇಮಠದ ಶ್ರೀ ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಸುರಪುರ ಕ್ಷೇತ್ರದ ಶಾಸಕ ರಾಜೂಗೌಡ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಜಿ.ಬಿ. ಮಾರುತಿನಾಯ್ಕ, ಜಿ.ಪಂ. ಮಾಜಿ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ಎಸ್. ಕುಬೇರನಾಯ್ಕ, ರಾಮದಾಸ್‍ನಾಯ್ಕ, ಭೀಮಾನಾಯ್ಕ ಇತರರು ಮಾತನಾಡಿದರು.

ರಾಂಪುರ ಬೃಹನ್ಮಠದ ಶ್ರೀ ಶಿವಕುಮಾರ ಹಾಲಸ್ವಾಮೀಜಿ, ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನದ ಲಿಂಗಸಗೂರು ಶಾಖಾಮಠದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ, ಕಮ್ಮಾರಗಟ್ಟೆ ಗ್ರಾಪಂ ಅಧ್ಯಕ್ಷ ಎಸ್. ರುದ್ರೇಶನಾಯ್ಕ, ಸದಸ್ಯರಾದ ಶಿವಕುಮಾರನಾಯ್ಕ, ಲಕ್ಷ್ಮಿಬಾಯಿ ಹನುಮಂತನಾಯ್ಕ, ಎಸ್.ಡಿ. ರಮೇಶನಾಯ್ಕ, ಮಮತಾ ಎಲ್.ಎಸ್. ಅನಂತನಾಯ್ಕ, ಚಂದ್ರಕಲಾ ಶಿವಕುಮಾರ್, ಪದ್ಮಾನಾಯ್ಕ ಇತರರು ಇದ್ದರು.

error: Content is protected !!