ಚಿತ್ರದುರ್ಗ ಮುರುಘಾ ಶರಣರ ನೇತೃತ್ವದಲ್ಲಿ ನಡೆದ ಧರ್ಮಸಂಸತ್ ಸಭೆ
ಚಿತ್ರದುರ್ಗ, ಡಿ. 6- ಹಲವಾರು ಕಡೆ ಲಿಂಗಾಯತರು ಮತಾಂತರ ಆಗುತ್ತಿರುವುದು ವಿಷಾದನೀಯ. ಎಲ್ಲ ಜಾತಿಗಳ ಧಾರ್ಮಿಕರಲ್ಲಿ ರಾಜಕೀಯ ಮತ್ತು ಧಾರ್ಮಿಕ ಶಕ್ತಿ ಬಂದಿದೆ. ಅಸ್ಪೃಶ್ಯತೆ ಮತ್ತು ಮತಾಂತರವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವು ಸಾಗಬೇಕಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶ್ರೀ ಶಿರಸಂಗಿ ಮಹಾಲಿಂಗಸ್ವಾಮಿ ಸಭಾಂಗಣದಲ್ಲಿ ನಡೆದ ಪರಿವರ್ತನಪರ ಧರ್ಮಸಂಸತ್ ಸಭೆಯಲ್ಲಿ ಅಸ್ಪೃಶ್ಯತಾ ನಿವಾರಣೆ ಹಾಗು ಮತಾಂತರ ತಡೆ ವಿಷಯ ಚರ್ಚೆಯಲ್ಲಿ ಶರಣರು ಮಾತನಾಡಿದರು.
ಪರಿವರ್ತನಪರ ಧರ್ಮಸಂಸತ್ ಮೂಲಕ ಜನಪರ ಕಾರ್ಯಕ್ರಮಗಳು ಆಗಬೇಕಿದೆ. ನಮ್ಮಿಂದ ದೀಕ್ಷೆ ಪಡೆದ ಸ್ವಾಮಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿದ್ದಾರೆ. ಅದರಿಂದ ಸಾಮರಸ್ಯ ಮೂಡಿದೆ ಎಂದು ನುಡಿದರು.
ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಎಲ್ಲ ಜಾತಿಗಳಲ್ಲೂ ಮತಾಂತರ ನಡೆಯುತ್ತಿದೆ. ಇಂದು ಸರ್ಕಾರ ಎಲ್ಲ ಸೌಲಭ್ಯಗಳನ್ನು ಕೊಡುತ್ತಿದೆ. ಆದರೆ ಹಿಂದೆ ಕೆಲ ಜಾತಿಯವರಿಗೆ ಆಸೆ ತೋರಿಸಿ ಅವರನ್ನು ಮತಾಂತರಗೊಳಿಸುತ್ತಿದ್ದರು. ಆದರೆ ಇಂದು ಅಂತಹ ಸಂದರ್ಭ ಇಲ್ಲ. ಗೂಳಿಹಟ್ಟಿ ಶೇಖರ್ ಅವರ ತಾಯಿ ಮತಾಂತರ ಆಗಲು ಕಾರಣವೇನು? ಎಂಬುದನ್ನು ಹುಡುಕಬೇಕಿದೆ. ಜಾಗತಿಕ ಮಟ್ಟದಲ್ಲಿ ತಮ್ಮ ಧರ್ಮ ದೊಡ್ಡದಾಗಿ ಬೆಳೆಯಬೇಕೆಂಬ ಆಶಯದಿಂದ ಮತಾಂತರದಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ. ನಾವಿಲ್ಲಿ ಸೇರಿರುವ ಎಲ್ಲ ಮಠಾಧೀಶರು ಯಾರಿಗೆ ತೊಂದರೆ ಆದರೂ ಅದನ್ನು ಬಹಿಷ್ಕರಿಸುವ ವ್ಯವಸ್ಥೆ ಬೆಳೆಯಬೇಕು. ಮತಾಂತರ ತಡೆ ಎನ್ನುವುದು ರಾಷ್ಟ್ರಮಟ್ಟಕ್ಕೆ ಸಂದೇಶ ಹೋಗಬೇಕಿದೆ. ಭಾರತದ ಧರ್ಮ ಉಳಿಸಬೇಕು. ನಮ್ಮ ಸಮಾಜವನ್ನು ಉಳಿಸುವ ನಿಟ್ಟಿನಲ್ಲಿ ಸಾಗಬೇಕಿದೆ. ನಾವೆಲ್ಲರು ಸೇರಿ ಒಗ್ಗಟ್ಟಾಗಿ ಸಾಗಿದರೆ ಮತಾಂತರ ತಡೆಗಟ್ಟಬಹುದು ಎಂದು ನುಡಿದರು.
ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಈ ಮೊದಲು ಶೋಷಣೆ ಹಾಗು ಬಡತನದಿಂದ ಮತಾಂತರ ಆಗುತ್ತಿದ್ದರು. ನಮ್ಮ ಸಮುದಾಯಗಳಲ್ಲಿ ಆಗುತ್ತಿರುವ ಮತಾಂತರವನ್ನು ತಡೆಯಬೇಕಿದೆ. ಬೋಸೆದೇವರಹಟ್ಟಿ, ಹಿರಿಯೂರು ಮೊದಲಾಗಿ ಅನೇಕ ಕಡೆಗಳಲ್ಲಿ ಮತಾಂತರ ಗೊತ್ತಿಲ್ಲದೆ ನಡೆಯುತ್ತಿದೆ. ಎಲ್ಲೆಲ್ಲಿ ಮತಾಂತರ ವಾಗಿದ್ದಾರೋ ಅವರನ್ನು ಮತ್ತೆ ಸ್ವಜಾತಿಗೆ ಕರೆತರುವ ಪ್ರಯತ್ನ ಮಾಡೋಣವೆಂದರು.
ಲಿಂಗಾಯತರೂ ಮತಾಂತರ ಆಗುತ್ತಿರುವುದು ವಿಷಾದನೀಯ. ಅಸ್ಪೃಶ್ಯತೆ ಮತ್ತು ಮತಾಂತರ ತಡೆ ಗಟ್ಟುವ ನಿಟ್ಟಿನಲ್ಲಿ ನಾವು ಸಾಗಬೇಕಿದೆ
– ಮುರುಘಾ ಶರಣರು
ಜಾಗತಿಕ ಮಟ್ಟದಲ್ಲಿ ತಮ್ಮ ಧರ್ಮ ದೊಡ್ಡದಾಗಿ ಬೆಳೆಯಬೇಕೆಂಬ ಆಶಯದಿಂದ ಮತಾಂತರದಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ. ನಾವೆಲ್ಲರು ಸೇರಿ ಒಗ್ಗಟ್ಟಾಗಿ ಸಾಗಿ ದರೆ ಮತಾಂತರ ತಡೆಗಟ್ಟಬಹುದು
– ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ
ಎಲ್ಲೆಲ್ಲಿ ಮತಾಂತರ ವಾಗಿದ್ದಾರೋ ಅವರನ್ನು ಮತ್ತೆ ಸ್ವಜಾತಿಗೆ ಕರೆತರುವ ಪ್ರಯತ್ನ ಮಾಡೋಣ
– ಪುರುಷೋತ್ತಮಾನಂದಪುರಿ ಶ್ರೀ
ತಿಪಟೂರು ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ಮತಾಂತರ ಅನ್ನುವುದೇ ದೇಶದ ದೊಡ್ಡ ಪಿಡುಗು. ನಮ್ಮ ಸುತ್ತಮುತ್ತ ಗುಪ್ತವಾಗಿ ನಡೆಯುತ್ತಿದೆ. ಫಾದರ್ ಹಾಗೂ ಫಾಸ್ಟರ್ಗಳು ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಅದನ್ನು ಪರಿವರ್ತನಪರ ಧರ್ಮಸಂಸತ್ ತಡೆಯುವ ಪ್ರಯತ್ನ ಮಾಡಬೇಕಿದೆ ಎಂದರು.
ಶ್ರೀ ಬಸವ ಭೃಂಗೇಶ್ವರ ಸ್ವಾಮೀಜಿ ಮಾತನಾಡಿ, ಬೇರೆ ಧರ್ಮದವರು ನೀಡುವ ಸಹಕಾರವನ್ನು ನಾವು ನೀಡಿದರೆ ಯಾರು ಮತಾಂತರಗೊಳ್ಳುವುದಿಲ್ಲ. ನಮ್ಮಲ್ಲಿ ಸೇವಾ ಮನೋಭಾವ ಇರಬೇಕು ಎಂದು ಹೇಳಿದರು.
ಶ್ರೀ ಬಸವ ಹರಳಯ್ಯ ಸ್ವಾಮೀಜಿ ಮಾತನಾಡಿ, ಇಂದು ಜಾತಿ ಜೀವಂತವಾಗಿದೆ. ಪ್ರತಿ ಹಳ್ಳಿಗೂ ಶರಣರ ವಿಚಾರಧಾರೆಗಳನ್ನು ಕೊಂಡೊಯ್ಯಬೇಕು. ಭೋವಿ, ಲಂಬಾಣಿ, ಮಾದಿಗ ಮೊದಲಾದವರು ಹೆಚ್ಚು ಮತಾಂತರ ಆಗುತ್ತಿದ್ದು, ಮತಾಂತರವನ್ನು ತಡೆಯಲು ನಾವೆಲ್ಲರು ಒಗ್ಗಟ್ಟಿನಿಂದ ಹೋರಾಡಬೇಕಿದೆ.
ದೆಹಲಿಯ ಶ್ರೀ ಮಹಾಂತ ಸ್ವಾಮಿಗಳು ಮಾತನಾಡಿ, ಜಾತಿ ವ್ಯವಸ್ಥೆಯಿಂದ ನಮ್ಮಲ್ಲಿ ಮತಾಂತರ ಹೆಚ್ಚಾಗಿದೆ. 21ನೇ ಶತಮಾನದಲ್ಲಿ ಮುರುಘಾ ಶರಣರು ನಮ್ಮಂತಹ ಎಲ್ಲರನ್ನೂ ಕಟ್ಟಿಕೊಂಡು ಮುಂದೆ ಸಾಗುತ್ತಿರುವುದು ಮತಾಂತರ ತಡೆಗೆ ಮುಖ್ಯ ಕಾರಣ. ಇಂದು ಮುರುಘಾ ಮಠದಲ್ಲಿ ಮಾತ್ರವಲ್ಲ ಎಲ್ಲ ಮಠಗಳಲ್ಲೂ ಇಂತಹ ಬದಲಾವಣೆ ಇರಬೇಕೆಂದರು.
ಶ್ರೀ ಶಾಂತವೀರ ಸ್ವಾಮಿಗಳು ಕೊಳದಮಠ ಬೆಂಗಳೂರು, ಹೊಸದುರ್ಗದ ಡಾ. ಶಾಂತವೀರ ಸ್ವಾಮಿಗಳು, ಶ್ರೀ ವೇಮನಾನಂದ ಸ್ವಾಮಿಗಳು, ಶ್ರೀ ಬಸವಕುಮಾರ ಸ್ವಾಮಿಗಳು, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಸೇರಿದಂತೆ ನೂರಾರು ಸ್ವಾಮಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಇದುವರೆಗೂ ಧರ್ಮಸಂಸತ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮಿಗಳು ಹೊಸದಾಗಿ ಪರಿವರ್ತನಪರ ಧರ್ಮಸಂಸತ್ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳಿಗೆ ಅಧಿಕಾರ ಹಸ್ತಾಂತರಿಸಿದರು.
ಮುಂದಿನ ಧರ್ಮಸಂಸತ್ ಸಭೆಯನ್ನು ಯಾದಗಿರಿ ಜಿಲ್ಲೆ ಗುರುಮಿಠಕಲ್ನ ಶ್ರೀ ಖಾಸಾ ಮುರುಘಾ ಮಠದಲ್ಲಿ ನಡೆಸಲು ಹಾಗು ಏಪ್ರಿಲ್-11 ರಂದು ಡಾ. ಶಿಮುಶ ಸಮಾನತೆ ದಿನವನ್ನಾಗಿ ಆಚರಿಸಲು, ತೀರ್ಮಾನಿಸಿ ನಿರ್ಣಯ ಕೈಗೊಳ್ಳಲಾಯಿತು.