ಅಕ್ಷರ ಕಲಿಕೆ ಯೋಜನೆ ಜಾರಿಗೆ ಅಧಿವೇಶನದಲ್ಲಿ ಚರ್ಚೆ ಆಗಲಿ

ವಿಶ್ವ ಸಾಕ್ಷರತಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಹರಿಹರ ನಗರಸಭಾ ಸದಸ್ಯ ಶಂಕರ್ ಖಟಾವ್‍ಕರ್ ಆಗ್ರಹ

ಹರಿಹರ, ಸೆ.15- ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಸರ್ಕಾರ ಅನುದಾನ ನೀಡಿ, ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡಬೇಕು ಎಂದು ನಗರಸಭಾ ಸದಸ್ಯ ಶಂಕರ್ ಖಟಾವ್‍ಕರ್ ಆಗ್ರಹಿಸಿದರು.

ತಾಲ್ಲೂಕಿನ ಗುರುಭವನದಲ್ಲಿ ಬುಧವಾರ ತಾಲ್ಲೂಕು ಪ್ರೇರಕರ ಸಂಘ, ಧಾರವಾಡ ಲೋಕ ಶಿಕ್ಷಣ, ಸಂಸ್ಕೃತಿ ಸೇವಾ ಸಂಸ್ಥೆ ಹಾಗೂ ಸೇವಾ ಭಾರತ್ ಅಂತರರಾಷ್ಟ್ರೀಯ ಸಂಸ್ಥೆಯ ಸಹಯೋಗದಲ್ಲಿ ಸಂಘಟಿಸಿದ್ದ ವಿಶ್ವ ಸಾಕ್ಷರತಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  

ದೇಶದಲ್ಲಿ ಸಾಕ್ಷರತೆ ಶೇ.75 ಇದ್ದು, ಶೇ.100 ಗುರಿ ತಲುಪಲು ಅಕ್ಷರ ಕಾರ್ಯಕರ್ತರು, ಕಲಾವಿದರು ಮತ್ತು ಸಂಯೋಜಕರಿಗೆ ಸರ್ಕಾರ ಮುಖ್ಯಮಂತ್ರಿ ಮತ್ತು ಶಾಸಕರು ಇದೇ ಅಧಿವೇಶನದಲ್ಲಿ ಚರ್ಚಿಸಿ, ಅವಕಾಶ ನೀಡಿ ಸದೃಢ ಸಾಕ್ಷರ ಭಾರತ ನಿರ್ಮಿಸಲು ನೆರವಾಗಬೇಕು ಎಂದು ಅವರು ಒತ್ತಾಯಿಸಿದರು. 

ಹರಿಹರ ತಾಲ್ಲೂಕಿನಲ್ಲಿ ಅಕ್ಷರ ಚಳುವಳಿಯ ಕಾರ್ಯಕರ್ತರು ಹಗಲಿರುಳೂ ಶ್ರಮಿಸಿ ದೇಶದ ಸಾಕ್ಷರತೆಗೆ ದುಡಿದಿದ್ದಾರೆ. ಅವರನ್ನು ಅಕ್ಷರ ಕಲಿಕೆಯ ಕಟ್ಟಡ ನಿರ್ಮಾಣಕ್ಕೆ ಅಣಿಗೊಳಿಸಲು ಖಟಾವ್ ಕರ್ ಸಲಹೆ ನೀಡಿದರು.  

ನಿವೃತ್ತ ಪ್ರಾಧ್ಯಾಪಕ ಸಿ.ವಿ.ಪಾಟೀಲ್ ಮಾತನಾಡಿ, ಸಾಕ್ಷರತಾ ಆಂದೋಲನ ಆರಂಭಿಸುವ ಮೊದಲು ಸಂ ಯೋಜಕರ ಭದ್ರತೆಗೆ ಭಾರತ ಜ್ಞಾನ-ವಿಜ್ಞಾನ ಸಮಿತಿ ಯಿಂದ ವಾತಾವರಣ ನಿರ್ಮಾಣ ಸಾಧ್ಯವಾಯಿತು. ರಾಜ ಕಾರಣಿಗಳು, ಅಕ್ಷರ ಕಾರ್ಯಕರ್ತರ ಮಧ್ಯೆ ಸಾಮ್ಯತೆ ಇಲ್ಲದೇ ಸಹಕಾರ ದೊರಕಲಿಲ್ಲ ಎಂದು ವಿಷಾದಿಸಿದರು. 

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಅಂಬಣ್ಣ ಮಾತನಾಡಿ, ಭಾರತ ಇಡೀ ಪ್ರಪಂಚಕ್ಕೆ ಮಾನವ ಶಕ್ತಿ ನೀಡಿದ್ದು, 2030ಕ್ಕೆ ಸಂಪೂರ್ಣ ಸಾಕ್ಷರತಾ ಗುರಿ ಹಾಕಿಕೊಂಡಿದೆ. ದೇಶದಲ್ಲಿಯೇ ಕರ್ನಾಟಕ ರಾಜ್ಯ ಸಾಕ್ಷರತೆಯಲ್ಲಿ 15ನೇ ಸ್ಥಾನ ಪಡೆದುಕೊಂಡಿದೆ. ದಾವಣಗೆರೆ ರಾಜ್ಯದಲ್ಲಿ 12ನೇ ಸ್ಥಾನದಲ್ಲಿದೆ. ಹರಿಹರ ಶೇ.72 ಇದೆ. ದೇಶದಲ್ಲಿಯೇ ತ್ರಿಪುರ ಪ್ರಥಮ ಸ್ಥಾನದಲ್ಲಿದೆ. ಕೇರಳ 2ನೇ ಸ್ಥಾನಕ್ಕೆ ಹೋಗಿದೆ. ನಮ್ಮ ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಶೇ.75 ಇದೆ. ಅದರಲ್ಲಿ ದಾವಣಗೆರೆ ಜಿಲ್ಲೆ ಶೇ.76 ಇದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ವಯಸ್ಕರ ಶಿಕ್ಷಣಾಧಿಕಾರಿ ಡಾ. ಐ.ಎ.ಲೋಕಾಪೂರ್   ಮಾತನಾಡಿ, ಸಾಕ್ಷರತೆ ಪ್ರಗತಿಗೆ ಪ್ರೇರಕರೇ ಶಕ್ತಿ. ನೀವೆಲ್ಲಾ ಯಾವುದೇ ಸಹಾಯ ದೊರಕದಿದ್ದರೂ ಸಾಕ್ಷರತೆ ಹೆಚ್ಚುಸುವಲ್ಲಿ ಶ್ರಮವಹಿಸಿದ್ದೀರಿ ಎಂದು ಶ್ಲಾಘಿಸಿದರು.

ಸಂಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಎಸ್.ಹೆಚ್.ಹೂಗಾರ್, ಎ.ಸಿದ್ದಲಿಂಗಪ್ಪ, ನೋಟಗಾರ್, ಕೊಟ್ರಬಸಪ್ಪ, ಸೇವಾ ಭಾರತ್‍ನ ಜಯಪ್ರಕಾಶ್, ಪ್ರೇರಕರ ಸಂಘದ ಅಧ್ಯಕ್ಷ ಬೂದಿಹಾಳ್‌ ಕೆಂಚವೀರಪ್ಪ, ಮೋಸಸ್ ಅಮನ್ನ ಮತ್ತಿತರರು ಮಾತನಾಡಿದರು.  ಸಮಾಜ ಸೇವಾಕರ್ತೆ ಆಲಿಸ್ ಸಾಲೋಮನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಲಾವಿದರು ಕ್ರಾಂತಿಗೀತೆ ಹಾಡಿದರು.

ಹೊಳೆಸಿರಿಗೆರೆ ಎಂ.ಶಿವಕುಮಾರ್ ಸ್ವಾಗತಿಸಿದರು. ಚನ್ನಗಿರಿಯ ಗುರುಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ವಸಂತ ವಂದಿಸಿದರು. 

error: Content is protected !!