ಅತ್ಯಾಚಾರ ಪ್ರಕರಣಗಳಿಗೆ ಮೂಲ ಕಾರಣವಾಗಿರುವ ಅಶ್ಲೀಲ ಸಿನಿಮಾ, ಸಾಹಿತ್ಯಗಳನ್ನು ನಿಷೇಧಿಸಬೇಕು.
– ಜ್ಯೋತಿ ಕುಕ್ಕವಾಡ, ಅಧ್ಯಕ್ಷರು, ಜಿಲ್ಲಾ ಎಐಎಮ್ಎಸ್ಎಸ್
ದಾವಣಗೆರೆ, ಸೆ.13- ದೆಹಲಿಯ ಮಹಿಳಾ ಪೊಲೀಸ್ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಬರ್ಬರ ಕೊಲೆ ಖಂಡಿಸಿ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ವತಿಯಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ್ದ ಉಭಯ ಸಂಘಟನೆಗಳ ಮಹಿಳಾ ಪದಾಧಿಕಾರಿಗಳು, ದೆಹಲಿಯ ಮಹಿಳಾ ಪೊಲೀಸ್, ಮುಂಬೈ ಹಾಗೂ ಯಾದಗಿರಿಯ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಅಮಾನವೀಯ ಕೊಲೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಘಟನೆಯು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈಗ ಅದೇ ರೀತಿ ದೆಹಲಿಯಲ್ಲಿ ಮತ್ತೊಂದು ಘಟನೆ ಅಮಾನವೀಯ ಹಾಗೂ ಕ್ರೂರವಾಗಿ ನಡೆದಿದೆ. ಸಾಬಿಯಾ ಎಂಬ ಮಹಿಳಾ ಪೊಲೀಸ್ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ನಡೆದಿದೆ. ಈ ಘಟನೆ ನಡೆದು 15 ದಿನಗಳು ಕಳೆದರೂ ಕೂಡ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಇಡೀ ದೇಹಕ್ಕೆ ಎಣಿಸಲಾರದಷ್ಟು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚಿ ಉಗ್ರ ಶಿಕ್ಷೆ ನೀಡಬೇಕೆಂದು ಎಐಎಮ್ಎಸ್ಎಸ್ ಜಿಲ್ಲಾಧ್ಯಕ್ಷರಾದ ಜ್ಯೋತಿ ಕುಕ್ಕವಾಡ ಒತ್ತಾಯಿಸಿದರು.
ಮಹಿಳೆ ಉನ್ನತ ಹುದ್ದೆಯಲ್ಲಿದ್ದರೆ ರಕ್ಷಣೆ ಸಿಗುತ್ತದೆ ಎಂಬ ವಾದ ಈ ಘಟನೆಯಿಂದ ಸುಳ್ಳಾಗಿದೆ. ಹಾಗೆಯೇ ಹೈದರಾಬಾದಿನ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಕೊಲೆ ಮತ್ತು ಮುಂಬೈಯ 34 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಬರ್ಬರ ಕೊಲೆ ನಡೆದಿದೆ. ಹೀಗೆ ಯಾವುದೇ ವಯೋಮಾನದ ಮಿತಿಯಿಲ್ಲದೆ ಘಟನೆ ನಡೆದು ಸಾವಿಗೀಡಾಗುತ್ತಿದ್ದಾರೆ. ಆದ್ದರಿಂದ ಇದಕ್ಕೆಲ್ಲ ಮೂಲ ಕಾರಣವಾಗಿರುವ ಅಶ್ಲೀಲ ಸಿನಿಮಾ, ಸಾಹಿತ್ಯಗಳನ್ನು ನಿಷೇಧಿಸಬೇಕು. ಜಸ್ಟೀಸ್ ವರ್ಮ ಆಯೋಗದ ಶಿಫಾರಸ್ಸುಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವಂತೆ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕೆ. ಭಾರತಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷರಾದ ಬನಶ್ರೀ, ಎಐಡಿವೈಓ ಜಿಲ್ಲಾ ಸಂಘಟನಾಕಾರ ಪರಶುರಾಮ್, ಸರಸ್ವತಿ, ಪೂಜಾ, ಪುಷ್ಪ, ಕಾವ್ಯ, ತಿಪ್ಪೇಸ್ವಾಮಿ ಸೇರಿದಂತೆ ಇತರರು ಇದ್ದರು.