ಜಿಲ್ಲೆಯಲ್ಲಿ ನಾಡಿದ್ದು ಬೃಹತ್ ಲಸಿಕಾ ಮೇಳ

ಜಿಲ್ಲೆಯಲ್ಲಿ ನಾಡಿದ್ದು ಬೃಹತ್ ಲಸಿಕಾ ಮೇಳ - Janathavaniದಾವಣಗೆರೆ, ಸೆ.14- ಜಿಲ್ಲೆಯಲ್ಲಿ  ಇದೇ ದಿನಾಂಕ 17 ರಂದು ಬೃಹತ್ ಲಸಿಕಾ ಮೇಳ ನಡೆಯಲಿದ್ದು, 1 ಲಕ್ಷ ಜನರಿಗೆ ಕೊರೊನಾ ವ್ಯಾಕ್ಸಿನ್ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಲಸಿಕೆ ನೀಡುವ ಸಂಬಂಧ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನೂರು ಆರೋಗ್ಯ ಸಂಸ್ಥೆಗಳ ಮೂಲಕ ಲಸಿಕೆ ನೀಡಲಾ ಗುತ್ತಿದ್ದು, ಪಿ.ಹೆಚ್.ಸಿ.ಸಿ ಹೆಚ್.ಸಿ. ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆ, ಇ.ಎಸ್.ಐ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ದಿನದಲ್ಲಿ 1 ಲಕ್ಷ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.

ಅಂದು ಬೆಳಿಗ್ಗೆ 8 ಕ್ಕೆ ಆರಂಭವಾ ಗುವ ಲಸಿಕೆ ಮೇಳದಲ್ಲಿ ಪ್ರತಿ 2 ಗಂಟೆ ಗೊಮ್ಮೆ ಮಾಹಿತಿ ತೆಗೆದುಕೊಳ್ಳ ಲಾಗುವುದು.

ಹರಿಹರದ 31 ವಾರ್ಡ್‍ಗಳಲ್ಲಿ 31 ತಂಡಗಳು ಕಾರ್ಯ ನಿರ್ವಹಿಸಲಿದ್ದು, ನಗರದ 45 ವಾರ್ಡ್‍ಗಳಲ್ಲಿ 45 ತಂಡಗಳು ಕಾರ್ಯನಿರ್ವಹಿಸಲಿವೆ.

ಜಿಲ್ಲೆಯ 195 ಗ್ರಾಮ ಪಂಚಾಯತ್‌ಗಳ ಕೇಂದ್ರ ಸ್ಥಾನಗಳಲ್ಲಿ 1 ತಂಡ ಕನಿಷ್ಠ 200 ಜನರಿಗೆ ಲಸಿಕೆ ನೀಡಲಿದೆ. ಈ ಸಂಬಂಧ ಈಗಾಗಲೇ ಎಲ್ಲಾ ತಹಶೀಲ್ದಾರ್, ಇಓ ಗಳು, ಟಿಹೆಚ್‍ಓ, ಸಿಡಿಪಿಓ ಗಳಿಗೆ ತರಬೇತಿ ನೀಡ ಲಾಗಿದೆ. ನಾಳೆ ತಾಲ್ಲೂಕು ಮಟ್ಟದ ತರಬೇತಿ ನಡೆಯಲಿದ್ದು, ಎಲ್ಲಾ ಬಿ.ಎಲ್.ಓ ಗಳು ತಮ್ಮ ವ್ಯಾಪ್ತಿಯಲ್ಲಿ ಲಸಿಕೆ ಪಡೆದುಕೊಂಡಿಲ್ಲದವರ ಪಟ್ಟಿ ತಯಾರಿಸಲಿದ್ದಾರೆ.

ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಟೋ ಪ್ರಚಾರ ನಗರದಲ್ಲಿ ಕಸದ ಗಾಡಿಗಳಲ್ಲಿ ಪ್ರಚಾರ ವ್ಯವಸ್ಥೆ ಮಾಡಲಾಗುವುದು ಹಾಗೂ ಹಳ್ಳಿಗಳಲ್ಲಿ ಡಂಗೂರ ಭಾರಿಸಲು ಸೂಚಿಸಲಾಗಿದೆ ಎಂದರು.

ವಿಶೇಷವಾಗಿ ದುಡಿಯುವ ಜನರಿರುವ ಪ್ರದೇಶಗಳಲ್ಲಿ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಹಾಗೂ ಬಡ ಜನರು ವಾಸಿಸುವ ಕಡೆ ಕಾರ್ಮಿಕ ಇಲಾಖೆ ವತಿಯಿಂದ ಹೆಚ್ಚಿನ ಪ್ರಚಾರ ನಡೆಸಲಾಗುವುದೆಂದರು.

ಈ ಹಿಂದೆ ವ್ಯಾಕ್ಸಿನ್‌ಗೆ ವಿರೋಧ ಮಾಡಿದ್ದ ಜಾಗಗಳಲ್ಲಿ ಜನರ ಮನವೊಲಿಸಲಾಗುವುದೆಂದರು. ತಾಲ್ಲೂಕು ಹಂತದಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ರೋಟರಿ, ಲಯನ್ಸ್, ರೆಡ್ ಕ್ರಾಸ್‌ನಂತಹ ಸಂಸ್ಥೆಗಳು ಕೈ ಜೋಡಿಸಲಿವೆ. ಒಂದು ರೀತಿ ಚುನಾವಣೆ ನಡೆಸಿದ ರೀತಿಯಲ್ಲಿಯೇ ವ್ಯಾಕ್ಸಿನ್ ಮೇಳ ಯಶಸ್ವಿಗೊಳಿಸಲಾಗುವುದು ಎಂದರು.

ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿ.ಪಂ ಸಿಇಓ ವಿಜಯ ಮಹಾಂತೇಶ್‌ ದಾನಮ್ಮನವರ್, ಡಿಹೆಚ್‍ಓ ಡಾ.ನಾಗರಾಜ್, ಎಡಿಸಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.

error: Content is protected !!