ಕೇಂದ್ರ ಸಚಿವ ನಾರಾಯಣ ಸ್ವಾಮಿ ವಿರುದ್ಧದ ಹೇಳಿಕೆಗೆ ಶಂಭುಲಿಂಗಪ್ಪ ಖಂಡನೆ

ಜಗಳೂರು, ಸೆ.13- ಕೇಂದ್ರ ಸಚಿವ ನಾರಾ ಯಣ ಸ್ವಾಮಿ ಅವರ ಬಗ್ಗೆ ಅವಳಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ದಲಿತ ಮುಖಂಡ ಶಂಭುಲಿಂಗಪ್ಪ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಮಾದಿಗ ಹಾಗೂ ಆದಿಜಾಂಬವ ಸಮಾಜದಿಂದ ನಡೆಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಹೋದರ ಸಮಾಜದವರು ಎಸ್‌ಸಿ ಮೀಸಲಾತಿಯಡಿ  ಸೌಲಭ್ಯ ಪಡೆದು, ಮೂಲ ಅಸ್ಪೃಶ್ಯ ಸಮುದಾಯದ ಮಂತ್ರಿಗಳ  ಬಗ್ಗೆ  ಅಸಭ್ಯವಾಗಿ ಮಾತನಾಡುವವರು ಸದಾಶಿವ ಆಯೋಗ ವರದಿಯ ಬಗ್ಗೆ ಬಹಿರಂಗ ಚರ್ಚೆಗೆ ಬಂದರೆ ಸ್ಪಷ್ಟಪಡಿಸುತ್ತೇವೆ ಎಂದರು.

ನ್ಯಾ. ಸದಾಶಿವ ಅವರ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವರದಿ ಜಾರಿಗೆ 2005 ರಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಆಡಳಿತಾವಧಿಯಲ್ಲಿ ಮನವಿ ಸಲ್ಲಿಸಲಾಗಿತ್ತು. ಆದರೆ ತರುವಾಯದ ಮುಖ್ಯಮಂತ್ರಿಗಳು ಅದನ್ನು ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ.

ದಶಕಗಳಿಂದ ತುಳಿತಕ್ಕೊಳಗಾಗಿ ಸಾಂವಿಧಾನಿಕ ಸೌಲಭ್ಯಗಳಿಂದ ವಂಚಿತವಾಗಿರುವ ಮಾದಿಗ ಸಮಾಜಕ್ಕೆ ಸದಾಶಿವ ವರದಿ ಜಾರಿಯಾದರೆ ಬಹುಪಾಲು ಸವಲತ್ತು ಸಿಗುತ್ತದೆ ಎಂಬ ಹತಾಶೆಗೊಳಗಾಗಿ ಸಹೋದರ ಸ್ಪೃಶ್ಯ ಲಂಬಾಣಿ ಸಮುದಾಯದವರು ನ್ಯಾಮತಿಯಲ್ಲಿ ಮಾದಿಗ ಸಮಾಜದ ನಾಯಕ ಕೇಂದ್ರ, ಸಚಿವ ನಾರಾಯಣಸ್ವಾಮಿ ಅವರ ಬಗ್ಗೆ ಅವಮಾನದ ಹೇಳಿಕೆ ನೀಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದ್ದು, ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು  ಶಂಭುಲಿಂಗಪ್ಪ ಒತ್ತಾಯಿಸಿದರು.

ಮುಖಂಡ ಹನುಮಂತಾಪುರ ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದಲ್ಲಿ ಬಹುಸಂಖ್ಯೆಯಲ್ಲಿರುವ ಮಾದಿಗ ಸಮಾ ಜದ ಒಬ್ಬ ವ್ಯಕ್ತಿಗೆ ಅಪರೂಪಕ್ಕೆ ಕೇಂದ್ರ ಸಚಿವ ಸ್ಥಾನ ಲಭಿಸಿದ್ದು, ಜೊತೆಗಿರುವ ಜಾತಿಯವರೇ ಸಹಿಸದೆ ಮೊಸರಿನಲ್ಲಿ ಕಲ್ಲು ಹಾಕುವ ಹುನ್ನಾರ ನಡೆದಿದೆ. ಸದಾಶಿವ ಆಯೋಗದ ವರದಿ ಜಾರಿ ಯಾದರೆ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳು ಮೀಸಲಾತಿಯಿಂದ ವಂಚಿತ ವಾಗುವುದಿಲ್ಲ. ಅನ್ಯಾಯಕ್ಕೊಳಗಾದ ಸಮುದಾ ಯಕ್ಕೆ ಒಳಮೀಸಲಾತಿ ಸಿಗುವುದು ಎಂಬುದನ್ನು  ಅವರುಗಳು ಮನಗಾಣಬೇಕಿದೆ ಎಂದರು.

ಮಾದಿಗ ದಂಡೋರ ಸಮಿತಿ ತಾಲ್ಲೂಕು ಅಧ್ಯಕ್ಷ ಎಚ್.ಸಿ. ಮಹೇಶ್ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ ಅತಿ ಹೆಚ್ಚು ಸೌಲಭ್ಯಗಳನ್ನು ಇತರೆ ಸಹೋದರ ಸಮಾಜಗಳು ಪಡೆಯುತ್ತಿದ್ದು, ಇತ್ತೀಚೆಗೆ ಕೆಪಿಎಸ್‌ಸಿ ನೇಮಕಾತಿಯ ಎಫ್‌ಡಿಎ ಹುದ್ದೆಗೆ ಒಂದೇ ಸಮುದಾಯದ 70 ಅಭ್ಯರ್ಥಿ ಗಳು ಆಯ್ಕೆಯಾಗಿರುವುದು ಮೋಸ ವಂಚನೆಯ ಅನುಮಾನ ಸೃಷ್ಠಿಸಿದೆ. ಸೂಕ್ತ ಪರಿಶೀಲನೆ ನಡೆಯಬೇಕಿದೆ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ, ಶೇಖರಪ್ಪ, ಚಂದ್ರಪ್ಪ, ಶಿವಮೂರ್ತಿ, ವೆಂಕಟೇಶ, ಮಂಜಪ್ಪ, ಡಿಎಸ್‌ಎಸ್ ಅಧ್ಯಕ್ಷ ಮಲೆಮಾಚಿಕೆರೆ  ಸತೀಶ್, ಜೀವನ್ ಇನ್ನಿತರರಿದ್ದರು.

error: Content is protected !!