ಕುಂದುವಾಡ ಕೆರೆಗೆ ಬೆಣ್ಣೆ, ಟಿವಿ ಸ್ಟೇಷನ್‌ ಕೆರೆಗೆ ಸುಣ್ಣ

ಅಭಿವೃದ್ಧಿ ಕಾಣದ ಟಿವಿ ಸ್ಟೇಷನ್ ಕೆರೆಯತ್ತ ಗಮನ ಹರಿಸುವಂತೆ ಸ್ಥಳೀಯರ ಒತ್ತಾಯ

ದಾವಣಗೆರೆ, ಡಿ.3- ನಗರಕ್ಕೆ ಕುಡಿಯುವ ನೀರು ಪೂರೈಸುವ ಕೆರೆಗಳಲ್ಲಿ ಒಂದಾದ ಕುಂದುವಾಡ ಕೆರೆ ಅಭಿವೃದ್ಧಿಗೆ ಹಲವರ ವಿರೋಧದ ನಡುವೆಯೂ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಆದರೆ ಕುಡಿಯುವ ನೀರನ್ನೇ ಪೂರೈಸುವ ಮತ್ತೊಂದು ಕೆರೆಯಾದ ಟಿವಿ ಸ್ಟೇಷನ್‌ ಕೆರೆಯ ಅಭಿವೃದ್ಧಿ ಮಾತ್ರ ಮರೀಚಿಕೆ ಯಾಗಿರುವುದು ಕೆರೆ ಸುತ್ತ ಮುತ್ತಲಿನ ಬಡಾವಣೆಗಳ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವ ಟಿವಿ ಸ್ಟೇಷನ್‌ ಕೆರೆಗೂ ಅನೇಕ ಜನರು ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆಂದು ಬರುತ್ತಿದ್ದಾರೆ. ಆದರೆ ಕುಂದುವಾಡ ಕೆರೆ ಬಳಿ ಇರುವಂತಹ ಸ್ವಚ್ಛತೆ, ಶುದ್ಧತೆ ಮಾತ್ರ ಇಲ್ಲಿ ಕಾಣುತ್ತಿಲ್ಲ.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆಯಿಂದ ಕೆರೆ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಅಧಿಕಾರಿಗಳು, ಜನಪ್ರತಿನಿಧಿ ಗಳು ಹೇಳುತ್ತಿದ್ದಾರಾದರೂ, ಕಾರ್ಯರೂಪಕ್ಕೆ ಬಂದಿಲ್ಲ.

ನಗರಕ್ಕೆ ಕುಡಿಯುವ ನೀರು ಪೂರೈಸುವ ಜೊತೆಗೆ ಜೀವನದಲ್ಲಿ ಜಿಗುಪ್ಸೆಗೊಂಡವರು ಆತ್ಮಹತ್ಯೆ ಮಾಡಿಕೊಳ್ಳುವ ಕೆರೆ ಎಂದೇ ಇದು ಇತ್ತೀಚೆಗೆ ಖ್ಯಾತಿ ಪಡೆಯುತ್ತಿದೆ. ಇದಕ್ಕೆ ಕಾರಣ ಕೆರೆ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸುತ್ತಿರುವುದು. 

ಕುಂದುವಾಡ ಕೆರೆಯನ್ನೂ ಮೀರಿಸಬಹುದಾದ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿ ಮಾಡಬಹುದಾಗಿದೆಯಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬುದು ಸ್ಥಳೀಯ ಅಳಲು.

ಕೆರೆಯ ಸುತ್ತ ಇರುವ ಏರಿ ಮೇಲೆ ಹುಲ್ಲು ಬೆಳೆದಿದ್ದು, ವಾಯುವಿಹಾರಿಗಳಿಗೆ ತೊಂದರೆಯಾಗುತ್ತಿದೆ. ಇನ್ನು ಏರಿ ಬಳಿ ಗ್ರಿಲ್ ಅಥವಾ ಬೇಲಿ ಇಲ್ಲದಿರುವುದರಿಂದ ಪ್ರಾಣ ಹಾನಿಗೂ ಕಾರಣವಾಗಬಹುದಾಗಿದೆ. ಇನ್ನಾದರೂ ಸ್ಥಳೀಯ ಅಡಳಿತಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ವಾಯುವಿಹಾರಿಗಳು ಒತ್ತಾಯಿಸಿದ್ದಾರೆ.

error: Content is protected !!