ಆಧುನಿಕ ವ್ಯವಸ್ಥೆಗಾಗಿ ಉದ್ಯಮ-ಶಿಕ್ಷಣ ಸಂಸ್ಥೆಗಳು ಜೊತೆಯಾಗಬೇಕು

ಬಿಐಇಟಿಯಲ್ಲಿ ಸ್ಕೈಸೆಂಡ್‌ ಘಟಕ ಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿದ ಸ್ಟೀವ್‌ ರೂಚ್

ದಾವಣಗೆರೆ, ಡಿ. 3 – ವಿದ್ಯಾರ್ಥಿಗಳ ಕೌಶಲ್ಯವನ್ನು ಉದ್ಯಮಶೀಲತೆಗೆ ಪೂರಕವಾಗಿ ಬಳಸಲು ಅಮೆರಿಕದ ಸ್ಕೈಸೆಂಡ್‌ ಸಾಫ್ಟ್‌ವೇರ್‌ ಕಂಪನಿ ಹಾಗೂ ಬಾಪೂಜಿ ಇಂಜಿನಿಯರಿಂಗ್‌ ಮತ್ತು ತಾಂತ್ರಿಕ ಮಹಾವಿದ್ಯಾಲಯ (ಬಿ.ಐ.ಇ.ಟಿ.) ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಇದೇ ವೇಳೆ ಸ್ಕೈಸೆಂಡ್‌ನ ನೂತನ ಘಟಕಕ್ಕೆ ಕಾಲೇಜಿನಲ್ಲಿ  ಚಾಲನೆ ನೀಡಲಾಗಿದೆ.

ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸ್ಕೈಸೆಂಡ್‌ ಅಧ್ಯಕ್ಷ ಸ್ಟೀವ್‌ ರೂಚ್, ಉದ್ಯಮ ಹಾಗೂ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಿಂದಾಗಿ ವಿದ್ಯಾರ್ಥಿಗಳು ಇಂಟರ್ನ್‌ಶಿಪ್‌ ಯೋಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂಜಿನಿಯರಿಂಗ್‌ ಜೊತೆಗೆ ಉದ್ಯಮಗಳ ಕಾರ್ಯ ನಿರ್ವಹಣೆಯ ತಿಳುವಳಿಕೆ ಪಡೆಯಲಿದ್ದಾರೆ. ಇದರಿಂದ ಜಾಗತಿಕವಾಗಿ ಉದ್ಯೋಗ ಪಡೆಯಲು ನೆರವಾಗಲಿದೆ ಎಂದರು.

ತಮ್ಮ ಕಂಪನಿಯು ಕೃತಕ ಬುದ್ಧಿವಂತಿಕೆ, ಅನಲಿಟಿಕ್ಸ್, ಬ್ಲಾಕ್‌ಚೈನ್‌, ಕ್ಲೌಡ್‌ ಮುಂತಾದ ತಂತ್ರಜ್ಞಾನಗಳನ್ನು ಬಳಸಿಕೊಂಡು ಉದ್ಯಮಗಳ ನಿರ್ವಹಣೆಗೆ ನೆರವಾಗುವ ತಂತ್ರಾಂಶ ರೂಪಿಸುತ್ತಿದೆ ಎಂದವರು ಹೇಳಿದರು.

ಪ್ರಸಕ್ತ ಉದ್ಯಮಗಳಲ್ಲಿ ಎರಡು – ಮೂರು ದಶಕಗಳ ಹಳೆಯ ವ್ಯವಸ್ಥೆ ಇದೆ. ಇದನ್ನು ಆಧುನೀಕರಣಗೊಳಿಸಲು ಉದ್ಯಮ ಹಾಗೂ ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಬ್ಬರೂ ಜೊತೆಯಾಗಿ ಕಾರ್ಯ ನಿರ್ವಹಿಸಬೇಕು ಎಂದು ರೂಚ್ ಹೇಳಿದ್ದಾರೆ.

ಅಮೆಜಾನ್‌ ಕಂಪನಿ ಯಾವುದೇ ಅಂಗಡಿ ಹೊಂದಿರದಿದ್ದರೂ ವಿಶ್ವಾದ್ಯಂತ ಸರಕುಗಳನ್ನು ಮಾರುತ್ತಿದೆ. ಓಲಾ ಕಂಪನಿ ಯಾವುದೇ ಕಾರು ಹೊಂದಿರದಿದ್ದರೂ ವಿಶ್ವದಾದ್ಯಂತ ಕ್ಯಾಬ್‌ ಸೇವೆ ಸಲ್ಲಿಸುತ್ತಿದೆ. ಇದು ತಂತ್ರಜ್ಞಾನ ಬದಲಾಗಿರುವ ರೀತಿಯನ್ನು ತೋರಿಸುತ್ತದೆ ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಐಇಟಿ ನಿರ್ದೇಶಕ ವೈ. ವೃಷಭೇಂದ್ರಪ್ಪ, ಸ್ಕೈಸೆಂಡ್ ಜೊತೆ ಕೈ ಜೋಡಿಸಿರುವುದರಿಂದ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಮುಗಿಸುವ ವೇಳೆಗೆ ಉದ್ಯಮಶೀಲತೆ ಹಾಗೂ ಕೌಶಲ್ಯದಲ್ಲಿ ತರಬೇತಿ ಪಡೆದು ಉದ್ಯೋಗಕ್ಕೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.

ಉದ್ಯಮ ನಿರ್ವಹಿಸುವವರಿಗೆ ಸರಕುಗಳ ಪೂರೈಕೆಯಿಂದ ಹಿಡಿದು ಹಣಕಾಸಿನ ವಹಿವಾಟಿನವರೆಗೆ ಹಲವಾರು ಸಮಸ್ಯೆಗಳಿರುತ್ತವೆ. ವಿಶೇಷವಾಗಿ ಕೊರೊನಾ ಸಂದರ್ಭದಲ್ಲಿ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿವೆ. ಇಂತಹ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಾಫ್ಟ್‌ವೇರ್‌ ಕಂಪನಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಉತ್ತಮ ಸಾಫ್ಟ್‌ವೇರ್‌ ಅನ್ನು ಕೆಲವೇ ಬುದ್ಧಿವಂತ ವಿದ್ಯಾರ್ಥಿಗಳು ಸೇರಿಕೊಂಡು ಕಾಲೇಜಿನಲ್ಲಿ ರೂಪಿಸುತ್ತಾರೆ. ಆದರೆ, ಅವುಗಳು ಉದ್ಯಮಗಳ ಬಳಕೆಯಾಗುವಂತೆ ಮಾಡಲು ನೂರಾರು ಪರಿಣಿತರು ಬೇಕಾಗುತ್ತಾರೆ. ಅಂತಹ ಪರಿಣಿತರನ್ನು ರೂಪಿಸಲು ಉದ್ಯಮ – ಶಿಕ್ಷಣ ಸಹಭಾಗಿತ್ವ ನೆರವಾಗುತ್ತದೆ ಎಂದು ತಿಳಿಸಿದರು.

ಸ್ಕೈಸೆಂಡ್‌ ಸ್ಥಾಪಕ ಛಾಯಾಪತಿ ಗಂಗಾಧರಪ್ಪ ಮಾತನಾಡಿ, ದಾವಣಗೆರೆ ಈಗ ಸ್ಮಾರ್ಟ್‌ ಸಿಟಿ ಆಗಿದೆ. ಮುಂದೆ ಮೆಗಾ ಸಿಟಿ ಆಗಿ ಅಭಿವೃದ್ಧಿ ಆಗಬೇಕಿದೆ. ಈ ದಿಸೆಯಲ್ಲಿ ಉದ್ಯಮ ಹಾಗೂ ಶೈಕ್ಷಣಿಕ ಬೆಳವಣಿಗೆ ಮಹತ್ವದ್ದಾಗಿದೆ ಎಂದರು.

ಸ್ಕೈಸೆಂಡ್‌ ಸಿಒಒ ಎಸ್. ಕುಮಾರ್ ಹಾದಿಮನಿ ಮಾತನಾಡಿ, ಬಿಐಇಟಿಯಲ್ಲಿ ಕಂಪನಿಯ ಘಟಕ ತೆರೆದಿರುವುದು ದೊಡ್ಡ ಯೋಜನೆಯ ಆರಂಭವಾಗಿದೆ. ಇಲ್ಲಿನ ಪದವೀಧರರು ಉದ್ಯಮಕ್ಕೆ ಅಗತ್ಯ ಕೌಶಲ್ಯ ಪಡೆಯಲಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಹಲವಾರು ವಿದ್ಯಾರ್ಥಿಗಳಿಗೆ ಸ್ಕೈಸೆಂಡ್‌ ಕಂಪನಿ ವತಿಯಿಂದ ಉದ್ಯೋಗದ ಪ್ರಸ್ತಾಪ ಪತ್ರವನ್ನು ನೀಡಲಾಯಿತು.

ವೇದಿಕೆಯ ಮೇಲೆ ಹಂಗಾಮಿ ಪ್ರಾಂಶುಪಾಲ ಡಾ. ಕೆ. ಸದಾಶಿವಪ್ಪ ಉಪಸ್ಥಿತರಿದ್ದರು.

ಡಾ. ಸಿ.ಆರ್. ನಿರ್ಮಲ ಸ್ವಾಗತಿಸಿದರೆ, ಡಾ. ಚೇತನ ಪ್ರಕಾಶ್ ವಂದಿಸಿದರು.

error: Content is protected !!