ಜಿಲ್ಲೆಯಲ್ಲಿ ಗೋಶಾಲೆಗಾಗಿ 7 ಎಕರೆ ಭೂಮಿ

ದಾವಣಗೆರೆ, ಸೆ.7- ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸುವ ಸರ್ಕಾರದ ಆದೇಶದಂತೆ ದಾವಣಗೆರೆ ಜಿಲ್ಲೆಯಲ್ಲಿಯೂ ಗೋಶಾಲೆ ಆರಂಭಿಸಲು 7 ಎಕರೆ ಜಾಗ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಪಶುಸಂಗೋಪನೆಯ ಇಲಾಖೆಯ ವತಿಯಿಂದ ಗೋಶಾಲೆ ಆರಂಭಿಸುವ ಸಂಬಂಧ ಜರುಗಿದ ಸಭೆಯ ಅಧ್ಯಕ್ಷತೆ  ವಹಿಸಿ ಅವರು ಮಾತನಾಡಿದರು.

ಪ್ರತಿಯೊಂದು ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಲು ಸರ್ಕಾರ 2021-22 ನೇ ಸಾಲಿನ ಆಯ-ವ್ಯಯದಲ್ಲಿ ಘೋಷಿಸಿದ್ದು, ಅದರಂತೆ ಗೋ ಸಂಪತ್ತಿನ ಸಂರಕ್ಷಣೆಗಾಗಿ ಗೋ ಹತ್ಯೆ ನಿಷೇಧ ಜಾರಿಗೆ ತಂದಿರುವುದರಿಂದ ಇದಕ್ಕೆ ಪೂರಕವಾಗಿ ಗೋಹತ್ಯೆ ತಡೆಯಲು ಹಾಗೂ ಜಾನುವಾರುಗಳನ್ನು ಸಂರಕ್ಷಿಸಲು ಪ್ರತಿ ಜಿಲ್ಲೆಗೆ 50 ಲಕ್ಷ ರೂ.ಅನುದಾನ ನಿಗದಿಪಡಿಸಿದೆ.  ಈಗಾಗಲೇ ಮೊದಲನೇ ಕಂತಿನ 24 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, ಇದು ಗೋಶಾಲೆ ನಿರ್ಮಾಣಕ್ಕೆ ಸಾಕಾಗುವುದಿಲ್ಲ, ಹೀಗಾಗಿ ಹೆಚ್ಚಿನ ಅನುದಾನ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸುವುದು ಸೂಕ್ತ ಎಂದರು.

ನಗರ ವ್ಯಾಪ್ತಿಯಲ್ಲಿ ಹೆಚ್ಚು ಬಿಡಾಡಿ ದನ-ಕರುಗಳು ಇದ್ದು, ಅವುಗಳನ್ನು ಈ ಗೋಶಾಲೆಗೆ ಸೇರಿಸಲಾಗುವುದು. ಹೀಗಾಗಿ ನಗರಪಾಲಿಕೆಯಿಂದ ಹೆಚ್ಚಿನ ಅನುದಾನವನ್ನು ಹಾಗೂ ಗೋಶಾಲೆಗೆ ಸಂಬಂಧಿಸಿದ ಕೆಲ ಕಾಮಗಾರಿಗಳನ್ನು ಮಾಡಿಕೊಡುವಂತೆ ಕೋರಬಹುದು. ಇದರಿಂದ ನಗರ ವ್ಯಾಪ್ತಿಯ ಬಿಡಾಡಿ ಪ್ರಾಣಿಗಳ ನಿಗ್ರಹಕ್ಕೂ ಸಹಕಾರಿಯಾಗಲಿದ್ದು, ಪಾಲಿಕೆಯವರಿಗೂ ಇದರಿಂದ ಅನುಕೂಲವಾಗಲಿದೆ ಎಂದರು.

ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್ ಮಾತನಾಡಿ, ಈಗಾಗಲೇ 4 ಜಿಲ್ಲೆಗಳಲ್ಲಿ ಗೋಶಾಲೆಗಳು ಆರಂಭದ ಹಂತದಲ್ಲಿವೆ. ಒಂದು ಪಶು ನಿರ್ವಹಣೆಗೆ ದಿನವೊಂದಕ್ಕೆ 70 ರೂ. ಬೇಕಾಗುತ್ತದೆ.  ಆದರೆ ಸರ್ಕಾರ  17.50 ರೂ. ನೀಡುತ್ತದೆ. ಉಳಿದ ಖರ್ಚನ್ನು ಸಂಘ-ಸಂಸ್ಥೆಗಳ ನೆರವಿನಿಂದ ನಿಭಾಯಿಸಲಾಗುತ್ತಿದ್ದು, ನಿರ್ವಹಣೆಗೂ ಹೆಚ್ಚಿನ ಅನುದಾನ ಬೇಕಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಮಹಾವೀರ್ ಜೈನ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ತಾಲ್ಲೂಕು ಸಹಾಯಕ ನಿರ್ದೇಶಕರು, ತಾಂತ್ರಿಕ ಸಹಾಯಕ ವೀರೇಶ್ ಉಪಸ್ಥಿತರಿದ್ದರು.

error: Content is protected !!