ದಾವಣಗೆರೆ, ಡಿ. 1 – ಹೊಸದನ್ನು ಬರೆಯಲು ಪೆನ್ಸಿಲ್ ಚೂಪಾಗಿಸುವ ಹಾಗೂ ಹಳೆಯದನ್ನು ಅಳಿಸುವ ರಬ್ಬರ್ ರೀತಿಯಲ್ಲಿ ಕಾರ್ಯಾಗಾರಗಳು ಅನಗತ್ಯವಾಗಿರುವುದನ್ನು ತೆಗೆದು ಹಾಕಿ, ಹೊಸತನ್ನು ತಿಳಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ರಾಜೇಶ್ವರಿ ಎನ್. ಹೆಗಡೆ ಕರೆ ನೀಡಿದರು.
ವಕೀಲರ ದಿನಾಚರಣೆ ಪ್ರಯುಕ್ತ ಜಿಲ್ಲಾ ವಕೀಲರ ಸಂಘದ ವತಿಯಿಂದ ನಗರದ ವಕೀಲರ ಸಾಂಸ್ಕೃತಿಕ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಮೂರು ದಿನಗಳ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನಲ್ಲಿ ಕಲಿಯುವಾಗ ಕೆಲವೇ ಕಾಯ್ದೆಗಳನ್ನು ಕಲಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜಾರಿಗೆ ಬಂದ ವಾಣಿಜ್ಯ ನ್ಯಾಯಾಲಯಗಳ ಕಾಯ್ದೆ, ಎನ್.ಡಿ.ಪಿ.ಎಸ್. ಕಾಯ್ದೆ, ಪೋಕ್ಸೋ, ಕೆಲಸದ ಸ್ಥಳದಲ್ಲಿ ಲೈಂಗಿಕ ಪೀಡನೆಯಂತಹ ಕಾಯ್ದೆಗಳನ್ನು ವಕೀಲರು ತಾವೇ ಅಧ್ಯಯನ ಮಾಡಿ ಕಲಿಯಬೇಕಾಗುತ್ತದೆ ಎಂದವರು ಹೇಳಿದರು.
ವಕೀಲರು ಹೊಸ ಕಾಯ್ದೆಗಳು ಹಾಗೂ ತಿದ್ದುಪಡಿ ಬಗ್ಗೆ ಚೆನ್ನಾಗಿ ತಿಳಿದುಕೊಂಡಾಗ ಕಕ್ಷಿದಾರರನ್ನು ವಿಶ್ವಾಸಕ್ಕೆ ಪಡೆಯುವ ಜೊತೆಗೆ, ನ್ಯಾಯದಾನಕ್ಕೆ ನೆರವಾಗಲು ಸಾಧ್ಯವಾಗುತ್ತದೆ ಎಂದು ರಾಜೇಶ್ವರಿ ಹೇಳಿದರು. ವಕೀಲರಿಗೆ ಸಂಘ ಕಾರ್ಯಾಗಾರ ಆಯೋಜಿಸಿರುವ ರೀತಿ ಯಲ್ಲೇ, ನ್ಯಾಯ ಮೂರ್ತಿಗಳೂ ಜ್ಯುಡಿಷಿಯಲ್ ಅಕಾಡೆಮಿ ಮೂಲಕ ಮಾಹಿತಿ ಪಡೆಯುತ್ತಾರೆ ಎಂದವರು ತಿಳಿಸಿದರು.
2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ಶ್ರೀಪಾದ್ ಮಾತನಾಡಿ, ವಕೀಲರು ಹೊಸ ಕಾನೂನುಗಳ ಬಗ್ಗೆ ತಿಳಿದುಕೊಂಡಾಗ ಪ್ರಕರಣಗಳ ಬಗ್ಗೆ ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಲು ಹಾಗೂ ಗೊಂದಲವಿಲ್ಲದೇ ತೀರ್ಪು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯ ಮೂರ್ತಿ ದಶರಥ ಮಾತನಾಡಿ, ಸಂವಿಧಾನ ರಚನೆಯಲ್ಲಿ ವಕೀಲರು ಪ್ರಮುಖ ಪಾತ್ರ ವಹಿಸಿದ್ದಾರೆ. ಕಾನೂನು ಬಲವಾಗಿರುವು ದರಿಂದ, ವಕೀಲರ ಅಗತ್ಯ ಹೆಚ್ಚಾಗಿದೆ ಎಂದು ತಿಳಿಸಿದರು.
ವೇದಿಕೆಯ ಮೇಲೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ಜೆ.ವಿ. ವಿಜಯಾನಂದ, ಪ್ರಧಾನ ಸಿವಿಲ್ ನ್ಯಾಯಮೂರ್ತಿ ಪ್ರೀತಿ ಸದ್ಗುರು ಸದರ್‌ಜೋಷಿ ಉಪಸ್ಥಿತರಿದ್ದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಪ್ರಾರ್ಥಿಸಿದರೆ, ಜಿ.ಕೆ. ಬಸವರಾಜ್ ನಿರೂಪಿಸಿದರು.