ಡಾ. ಎ.ಹೆಚ್. ಶಿವಯೋಗಿಸ್ವಾಮಿ ಶ್ರಮದಿಂದ ಸರ್ಕಾರ ಮಾಡಿದ ಆದೇಶದಿಂದಾಗಿ ರಾಜ್ಯದ 8600 ಪದವಿ ಪೂರ್ವ ಕಾಲೇಜುಗಳಿಗೆ ಅನುಕೂಲ ವಾದಂತಾಗಿರುವುದಲ್ಲದೇ ಸುಮಾರು 20 ಸಾವಿರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರ – ಪ್ರೋತ್ಸಾಹ ನೀಡಿದಂತಾಗಿದೆ.
– ಎಸ್.ಜೆ. ಶ್ರೀಧರ್, ಗೌರವಾಧ್ಯಕ್ಷರು, ಜಿಲ್ಲಾ ಖಾಸಗಿ ಪದವಿ ಪೂರ್ವ ಕಾಲೇಜುಗಳ ಒಕ್ಕೂಟ
ದಾವಣಗೆರೆ, ಸೆ.6- ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಗಳಲ್ಲಿ ಪ್ರಥಮ ಪಿಯುಸಿ ತರಗತಿ ದಾಖಲಾತಿಗೆ ಸಂಬಂಧಿಸಿದಂತೆ ಪ್ರವೇಶ ದಾಖಲಾತಿ ಮಿತಿಯನ್ನು 80 ರಿಂದ 100ಕ್ಕೆ ಹೆಚ್ಚಿಸಲು ಅನುಮತಿ ನೀಡಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಮೊನ್ನೆ ಆದೇಶ ಹೊರಡಿಸಿದೆ.
ಅಗತ್ಯತೆ ಹಾಗೂ ಬೇಡಿಕೆ ಯಾನುಸಾರ, ಮಂಜೂರಾತಿ ಪಡೆದು ಬೋಧಿಸುತ್ತಿರುವ ಪ್ರತಿ ಸಂಯೋಜನೆಗೆ 20 ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿಗೆ ಹಾಗೂ ಒಂದಕ್ಕಿಂತ ಹೆಚ್ಚು ವಿಭಾಗಗಳಿದ್ದಲ್ಲಿ ಪ್ರತಿ ವಿಭಾಗಕ್ಕೆ 20 ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿಗೆ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಹು ತೇಕ ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿರುವ ಹಿನ್ನೆಲೆ ಯಲ್ಲಿ ಪಿಯುಸಿ ಪ್ರವೇಶಾತಿಗೆ ಹೆಚ್ಚು ಬೇಡಿಕೆ ಬಂದ ಕಾರಣದಿಂದಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಮಸ್ಯೆಯುಂಟಾಗಿತ್ತು. ಇದನ್ನು ಪರಿಗಣಿಸಿ, ಶಿಕ್ಷಣ ಇಲಾಖೆಯು ಈ ಕ್ರಮ ಕೈಗೊಂಡಿದೆ.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿ ಸ್ವಾಮಿ ಅವರು ಶಿಕ್ಷಣ ಸಚಿವ ನಾಗೇಶ್ ಅವರನ್ನು ಸಂಪರ್ಕಿಸಿ, ವಿಷಯವನ್ನು ಪ್ರಸ್ತಾಪಿಸಿ, ದಾಖಲಾತಿ ಮಿತಿಯನ್ನು ಹೆಚ್ಚಿಸುವ ಅಗತ್ಯತೆಯನ್ನು ವಿವರಿಸಿದರು. ಶಿವಯೋಗಿಸ್ವಾಮಿ ಅವರ ಪ್ರಸ್ತಾಪವನ್ನು ಪರಿಶೀಲಿಸಿದ ಸಚಿವ ನಾಗೇಶ್ ಅವರು ದಾಖಲಾತಿ ಮಿತಿಯನ್ನು ಹೆಚ್ಚಿಸಲು ನೀಡಿದ ನಿರ್ದೇಶನದ ಮೇರೆಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದಾರೆ.
ನಗರದ ಸರ್.ಎಂ.ವಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಯೂ ಆಗಿರುವ ದಾವಣಗೆರೆ ಜಿಲ್ಲಾ ಖಾಸಗಿ ಪದವಿ ಪೂರ್ವ ಕಾಲೇಜುಗಳ ಒಕ್ಕೂಟದ ಗೌರವಾಧ್ಯಕ್ಷ ಎಸ್.ಜೆ.ಶ್ರೀಧರ್ ಅವರು ಮಾಡಿಕೊಂಡ ಮನವಿ ಮೇರೆಗೆ ಡಾ. ಶಿವಯೋಗಿಸ್ವಾಮಿ ಅವರು ತತ್ಕ್ಷಣವೇ ಸಚಿವರನ್ನು ಸಂರ್ಪಕಿಸಿ, ಬೇಡಿಕೆ ಈಡೇರಿಸುವಲ್ಲಿ ಶ್ರಮಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಡಾ.ಶಿವಯೋಗಿಸ್ವಾಮಿ ಅವರನ್ನು ಇಂದು ಭೇಟಿ ಮಾಡಿದ ಶ್ರೀಧರ್ ಅವರು ಹೂಗುಚ್ಛ ನೀಡುವುದರ ಮೂಲಕ ಕೃತಜ್ಞತೆ ಸಲ್ಲಿಸಿದರು.
ಸರ್.ಎಂ.ವಿ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ನಾಯ್ಡು, ಶ್ರೀ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್, ಬಿಜೆಪಿ ಮುಖಂಡ ಹೆಚ್.ಎನ್.ಕಲ್ಲೇಶ್ ಅವರುಗಳು ಶ್ರೀಧರ್ ಅವರೊಂದಿಗಿದ್ದರು.
ಸಚಿವ ನಾಗೇಶ್ ಅವರು ಕೈಗೊಂಡ ತೀರ್ಮಾನದಿಂದಾಗಿ ರಾಜ್ಯದ 8600 ಪದವಿ ಪೂರ್ವ ಕಾಲೇಜುಗಳಿಗೆ ಅನುಕೂಲವಾದಂತಾಗಿರುವುದಲ್ಲದೇ ಸುಮಾರು 20 ಸಾವಿರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರ – ಪ್ರೋತ್ಸಾಹ ನೀಡಿದಂತಾಗಿದೆ ಎಂದು ಶ್ರೀಧರ್ ತಿಳಿಸಿದ್ದಾರೆ.