ಜೆ.ಹೆಚ್. ಪಟೇಲ್ ಕಾಲೇಜು ಘಟಿಕೋತ್ಸವದಲ್ಲಿ ದಾವಿವಿ ಕುಲಪತಿ ಪ್ರೊ.ಹಲಸೆ
ದಾವಣಗೆರೆ, ನ.30- ವಿದ್ಯಾರ್ಥಿಗಳು ಸಮಾಜ ಮುಖಿಗಳಾಗಿ ಜೀವನ ನಡೆಸಬೇಕೆಂದು ದಾವಣಗೆರೆ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಇಂದು ಏರ್ಪಾಡಾಗಿದ್ದ ಮಂಗಳ ಜ್ಯೋತಿ ವಿದ್ಯಾಸಂಸ್ಥೆಯ ಜೆ.ಹೆಚ್. ಪಟೇಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಅಂಡ್ ಟೆಕ್ನಾಲಜಿಯ ಕಾಲೇಜು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಓದುವುದೊಂದೇ ವಿದ್ಯಾರ್ಥಿಯ ಏಕೈಕ ಗುರಿಯಾಗಿರಬೇಕು. ಅಧ್ಯಾಪಕ ರುಗಳೂ ಸಹ ಉತ್ತಮ ಬೋಧನೆ ಮೂಲಕ ವಿದ್ಯಾ ರ್ಥಿಗಳ ಯಶಸ್ಸಿಗೆ ಶ್ರಮಿಸಬೇಕು ಎಂದು ಹೇಳಿದರು.
ಉತ್ತಮ ಜೀವನ ಶೈಲಿ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಂಡು, ಶ್ರದ್ಧೆಯಿಂದ ಓದಿ ಹೆತ್ತವರಿಗೆ, ಕಾಲೇಜಿಗೆ ಹಾಗೂ ದೇಶಕ್ಕೆ ಕೀರ್ತಿ ತನ್ನಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಅಂತರಂಗದ ಅರಿವಿನ ವ್ಯಾಪ್ತಿ ಹೆಚ್ಚಿಸಿಕೊಂಡಾಗ ಮಾತ್ರ ವಿಶ್ವವೇ ಬೆರಗಾ ಗುವಂತಹ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ದೃಶ್ಯ ಮಾಧ್ಯಮಗಳಲ್ಲಿನ ರಿಯಾಲಿಟಿ ಶೋಗಳು ಕೃತಕ ಜಗತ್ತನ್ನು ದರ್ಶಿಸುತ್ತವೆ. ಅವುಗಳ ವೀಕ್ಷಣೆಯಿಂದ ಭೌತಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ವ್ಯಕ್ತಿತ್ವ ವಿಕಸನವಾಗುವುದಿಲ್ಲ. ನಾಯಕತ್ವದ ಗುಣ ಬೆಳೆಯುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ರಿಯಾಲಿಟಿ ಶೋಗಳಿಂದ ದೂರವಿರಿ. ಶಿಕ್ಷಕರ ಬೋಧನೆಯನ್ನು ಆಸಕ್ತಿಯಿಂದ ಆಲಿಸಿದಾಗ ಅರಿವಿಲ್ಲದಂತೆ ಬೆಳೆಯುತ್ತೀರಿ ಎಂದು ಕಿವಿ ಮಾತು ಹೇಳಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಿ. ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ಶಿಸ್ತಿನಿಂದ ಪಾಲ್ಗೊಳ್ಳಿ. ಕಠಿಣ ಪರಿಶ್ರಮದಿಂದ ಓದಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಗಳ ಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಷಹನಾಜ್ ಬೀ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮುಸ್ತಾಫ್, ಪ್ರಾಂಶುಪಾಲರಾದ ಜಿ.ಟಿ. ಅಶ್ವಿನಿ ಉಪಸ್ಥಿತರಿದ್ದರು.