ಕನ್ನಡ ನಾಡ ಸೇವಾ ಕೇಂದ್ರದ ಸೇವೆ ಶ್ಲ್ಯಾಘನೀಯ

ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ, ನ. 30- ಕಲೆ, ಸಾಹಿತ್ಯ ಹಾಗೂ ಸಮಾಜ ಸೇವೆಗೆ ತನ್ನನ್ನು ಅರ್ಪಿಸಿಕೊಂಡಿರುವ ಕನ್ನಡ ನಾಡ ಸೇವಾ ಕೇಂದ್ರದ ಸೇವೆ ಶ್ಲ್ಯಾಘನೀಯವಾಗಿದೆ ಎಂದು ಶ್ರೀ ಗುರು ಕಾರುಣ್ಯ ಶಿವಯೋಗ ಧಾಮದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ನಗರದ ರೋಟರಿ ಬಾಲಭವನದಲ್ಲಿ ನಿನ್ನೆ ಜರುಗಿದ ಸೇವಾ ಕೇಂದ್ರದ ಬೆಳ್ಳಿ ಹಬ್ಬದ ಸ್ಮರಣ ಸಂಚಿಕೆ `ಕನ್ನಡ ಸೇವಾಮೃತ’ ಪುಸ್ತಕ ಬಿಡುಗಡೆ ಮಾಡಿ ಶ್ರೀಗಳು ಮಾತನಾಡಿದರು. 

ಇಳಿ ವಯಸ್ಸಿನಲ್ಲಿಯೂ ಕಲೆಯನ್ನು ಉಳಿಸಿ, ಬೆಳೆಸಲು ನಿರತರಾಗಿರುವ ಸಂಘದ ಕಾರ್ಯದರ್ಶಿ ಡಿ. ಲಲಿತಮ್ಮ ನವರಿಗೆ ದೇವರ ಕೃಪೆ  ಸದಾ ಇರಲಿ  ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಮಹಾಪೌರ ಎಸ್.ಟಿ. ವೀರೇಶ್‍ ಮಾತನಾಡಿ, ಇಂದು ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ  ಕಲಾವಿದರ ಬದುಕು ಕಷ್ಟವಾಗಿದೆ. ಆದ್ದರಿಂದ ಬದುಕಿಗಾಗಿ ಬೇರೆ ವೃತ್ತಿಯನ್ನು ಮಾಡಿಕೊಂಡು, ಕೇವಲ ಹವ್ಯಾಸಕ್ಕಾಗಿ ಕಲಾ ಸೇವೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್‍ಕುಮಾರ್, ಸಂಘದ ಕಾರ್ಯದರ್ಶಿ ಡಿ. ಲಲಿತಮ್ಮ ಮತ್ತು ಹಿರಿಯ ರಂಗಭೂಮಿ ಕಲಾವಿದೆ ಡಿ. ಶಾಂತಮ್ಮ, ಸಂಸ್ಥೆಯ ವ್ಯವಸ್ಥಾಪಕ ಹೆಚ್. ಬಸವರಾಜ್ ಉಪಸ್ಥಿತರಿದ್ದರು.

ನಗರದ ಹನುಮಂತರಾಜು, ಹುಬ್ಬಳ್ಳಿಯ ದಾನೇಶ ಬುರಡಿ, ಶ್ರೀಕುಮಾರ, ಎಂ. ಹಳದೇಶಿ, ಕುಮಾರಿ ಚೆನ್ನಮ್ಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗುಡದಯ್ಯ ಮತ್ತು ಮಿತ್ರರು ವಾದ್ಯ ನುಡಿಸಿದರು. ಕನ್ನಡಾಮೃತ ಸ್ಮರಣ ಸಂಚಿಕೆ ಸಂಪಾದಕ ಬಸವರಾಜ ಪಟ್ಟಣಶೆಟ್ಟಿ ನಿರೂಪಿಸಿ, ವಂದಿಸಿದರು.

error: Content is protected !!