ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಆಗ್ರಹ

ದಾವಣಗೆರೆ, ಸೆ.3- ಮಾರ್ಗಸೂಚಿ ನೀಡಿ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಗಣೇಶ ಮೂರ್ತಿಗಳ ಮಾರಾಟ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಗಣೇಶ ಉತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಬೇಕೆಂದು ಘೋಷಣೆ ಹಾಕಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಪ್ರತಿವರ್ಷವೂ ಸಹ ಗಣೇಶ ಉತ್ಸವವನ್ನು ಸಾರ್ವಜನಿಕವಾಗಿ ಆಚರಿಸುತ್ತಾ ಬಂದಿದ್ದು, ಈ ವರ್ಷ ರಾಜ್ಯ ಸರ್ಕಾರ ಕೋವಿಡ್ ನೆಪವೊಡ್ಡಿ ಗಣೇಶ ಉತ್ಸವಕ್ಕೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿರುವುದು ಸಲ್ಲದು ಎಂದರು.

ರಾಜ್ಯ ಸರ್ಕಾರ ಆಡಳಿತ ಪಕ್ಷದ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತಿದೆ. ಆದರೆ ದೇಶದ ಸ್ವಾತಂತ್ರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ನೀಡದೇ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ, ಹಿಂದೂ ಸಂಸ್ಕೃತಿಯಲ್ಲಿ ಗಣೇಶನ ಹಬ್ಬಕ್ಕೆ ಮಹತ್ವದ ಸ್ಥಾನವಿದೆ. ಜೊತೆಗೆ ಎಲ್ಲಾ ಧರ್ಮಗಳವರು ಸಾಮರಸ್ಯದಿಂದ ಆಚರಿಸುವ ಹಬ್ಬವಾಗಿದೆ. ರಾಜ್ಯ ಸರ್ಕಾರ ಭಾವೈಕ್ಯತೆ ಮತ್ತು ಸಾಮರಸ್ಯ ಸಾರುವ ಗಣೇಶ ಉತ್ಸವಕ್ಕೆ ಅನುಮತಿ ನೀಡದೇ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯ ಜಿ.ಎಸ್.ಮಂಜುನಾಥ್, ಹಿಂದೂ ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಇಂದು ಹಿಂದೂ ಧರ್ಮದವರು ಆಚರಿಸುವ ಗಣೇಶ ಹಬ್ಬಕ್ಕೆ ಅನುಮತಿ ನಿರಾಕರಣೆ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.

ಸಾಮಾಜಿಕ ಜಾಲತಾಣದ ಹರೀಶ್ ಕೆ.ಎಲ್.ಬಸಾಪುರ, ಕಾಂಗ್ರೆಸ್ ಹಿಂದುಳಿದ ಘಟಕದ ರಾಜ್ಯ ಕಾರ್ಯದರ್ಶಿಗಳಾದ ಹೆಚ್.ವಿ.ಸತೀಶ್‍ಕುಮಾರ್, ಜಮ್ನಳ್ಳಿ ನಾಗರಾಜ್, ಯುವ ಕಾಂಗ್ರೆಸ್‍ನ ವಿನಯ್ ಜೋಗಪ್ಪನವರ್, ತಿಮ್ಮೇಶ್, ಹಾಲೇಶ್ ಜಲ್ಲಿ, ಎನ್ ಎಸ್‍ಯುಐನ ಅಲಿ ರೆಹಮತ್ ಮತ್ತಿತರರಿದ್ದರು.

error: Content is protected !!