ಆನಗೋಡು : ವಿಧಾನ ಪರಿಷತ್ತಿನ ಕಾಂಗ್ರೆಸ್ ಪರ ಮತಯಾಚನೆಯಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ
ದಾವಣಗೆರೆ, ನ.30 – ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವ ಧನವನ್ನೂ ನೀಡಲಾರದಷ್ಟು ಬಿಜೆಪಿ ಸರ್ಕಾರ ದಿವಾಳಿಯಾಗಿದೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಕಿಡಿಕಾರಿದರು.
ಆನಗೋಡಿನಲ್ಲಿ ಮಂಗಳವಾರ ವಿಧಾನ ಪರಿಷತ್ತಿನ ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ಪರ ಮತಯಾಚಿಸಿ ಅವರು ಮಾತನಾಡಿದರು.
ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದು, ಯುವಕರಿಗೆ ಮತದಾನ ಹಕ್ಕನ್ನು ತಂದಿದ್ದೇ ಕಾಂಗ್ರೆಸ್. ಸರ್ವರಿಗೂ ಸಮಬಾಳು ಸಮಪಾಲು ಎಂಬ ಧ್ಯೇಯದಡಿ ಕೆಲಸ ಮಾಡಿದ ಕಾಂಗ್ರೆಸ್ 2023ಕ್ಕೆ ಅಧಿಕಾರ ಹಿಡಿಯುವುದು ಖಚಿತ ಎಂದರು.
ನಾವು ಕೊಟ್ಟ ಅಕ್ಕಿಯಲ್ಲಿಯೇ ಬಿಜೆಪಿ ಸರ್ಕಾರ 2 ಕೆಜಿ ಅಕ್ಕಿ ಕಡಿತ ಮಾಡಿದೆ. ಮುಂದೆ ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿ ಸಾಕಷ್ಟು ಅಕ್ಕಿ, ಪಡಿತರ ನೀಡಲಿದೆ ಎಂದು ಭರವಸೆ ನೀಡಿದರು.
ನಮ್ಮ ಅಭ್ಯರ್ಥಿಗೆ ರಾಜಕೀಯದ ಗಂಧ ಗಾಳಿ ಇಲ್ಲದವ ಎಂದಿರುವ ಸಚಿವ ಕೆ.ಎಸ್. ಈಶ್ವರಪ್ಪ ಒಬ್ಬ ಪೆದ್ದ. ಅವರು ಗೂಗಲ್, ವಾಟ್ಸಾಪ್ ಬಳಕೆ ಗೊತ್ತಿದ್ದರೆ ಪರಿಶೀಲಿಸಿ, ಸೋಮಶೇಖರ್ ಬಗ್ಗೆ ತಿಳಿದುಕೊಂಡು ಮಾತನಾಡಲಿ. ಕಳಂಕರಹಿತವಾಗಿ 5 ವರ್ಷ ಅಧಿಕಾರ ನಡೆಸಿದ ನಮ್ಮ ಸಿದ್ದರಾಮಯ್ಯ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.
ಪಕ್ಷದ ವೀಕ್ಷಕ ಚಿತ್ರದುರ್ಗದ ಸಂಸತ್ ಸದಸ್ಯ ಚಂದ್ರಪ್ಪ, ದೇಶದಲ್ಲಿ ಬಿಜೆಪಿ ಬಂದ ಮೇಲೆ ಅನ್ನಕ್ಕೆ ಹಾಹಾಕಾರವುಂಟಾಗಿ, ನೆಮ್ಮದಿ ಹಾಳಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ಮನೆ ಕೊಡಿಸುವುದಾಗಿ, ರಸ್ತೆ ಮಾಡಿಸುವುದಾಗಿ ಬರೀ ಸುಳ್ಳು ಹೇಳಿ ಮತ ಪಡೆದ ಬಿಜೆಪಿ ಸದಸ್ಯರಿಗೆ ಜನಕ್ಕೆ ಮುಖ ತೋರಿಸಲಾಗುತ್ತಿಲ್ಲ ಎಂದು ಹೇಳಿದರು.
ಹೊಸದುರ್ಗ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ದಾವಣಗೆರೆ ಅಭಿವೃದ್ಧಿಗೆ ಮಲ್ಲಿಕಾರ್ಜುನ್ ಕೆಲಸ ಮಾಡಿ ಹೆಸರಾಗಿದ್ದಾರೆ. ಎಲ್ಲರೂ ಕೆಲಸ ಮಾಡಿದ್ದರೂ ಯಾವುದೋ ಅಲೆಯಿಂದ ಸೋತಿದ್ದೇವೆ. ಆಮಿಷಕ್ಕೆ ಒಳಗಾಗದೇ ಕಾಂಗ್ರೆಸ್ ಗೆಲ್ಲಿಸಿ ಎಂದರು.
ಡಿಸಿಸಿ ಅಧ್ಯಕ್ಷ ಮಂಜಪ್ಪ, ಕಾಂಗ್ರೆಸ್ ಅಭ್ಯರ್ಥಿ ಬಿ. ಸೋಮಶೇಖರ್, ಗ್ರಾ.ಪಂ. ಸದಸ್ಯ ಕರಿಬಸಪ್ಪ ಮತ್ತು ಇತರರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಸಿ. ನಿಂಗಪ್ಪ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್, ಮಾಜಿ ಅಧ್ಯಕ್ಷ ರಾಜೇಂದ್ರ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪಿ. ರಾಜಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಸರುಲ್ಲಾ, ಕೊಡಗನೂರು ಎಸ್. ಸಿದ್ದಪ್ಪ, ಮಾಜಿ ಅಧ್ಯಕ್ಷರಾದ ರವಿ, ಪ್ರವೀಣ್, ಮುಖಂಡರಾದ ಅಣಜಿ ಆಂಜಿನಪ್ಪ, ಮ್ಯಾಸರಳ್ಳಿ ಪ್ರಭು, ಆನಗೋಡು ಬಸವರಾಜ್, ಮಳಲಕೆರೆ ಪ್ರಕಾಶ್, ಸಿದ್ದನೂರು ಪ್ರಕಾಶ್, ಮಾಯಕೊಂಡ ರುದ್ರೇಶ್, ಮುಡೇನಹಳ್ಳಿ ಶಿವು, ಅಣಬೇರು ಅನಿಲ್, ಜಾಫರ್ ಷರೀಫ್, ಅಣಜಿ ತಿಪ್ಪೇಸ್ವಾಮಿ, ರಾಜುನಾಯ್ಕ ಮತ್ತಿತರರಿದ್ದರು.