ಕೊಂಡಜ್ಜಿಗೆ ಬಾರದ ಕೇಂದ್ರ ಗೃಹ ಸಚಿವ

ದಾವಣಗೆರೆ, ಸೆ.2- ರಾಷ್ಟ್ರದ ರಾಜಧಾನಿ ದೂರದ ದೆಹಲಿಯಿಂದ ದಾವಣಗೆರೆಗೆ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಇಂದು ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಆಗಮಿಸಿದ್ದ  ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಂಡಜ್ಜಿ ಗ್ರಾಮಕ್ಕೆ ಆಗಮಿಸದೇ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲೇ ಎಲ್ಲಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ವಾಪಸ್‌ ಆಗಿರುವುದು ಕೊಂಡಜ್ಜಿ ಗ್ರಾಮಸ್ಥರಲ್ಲಿ  ನಿರಾಸೆ ಮೂಡಿಸಿದೆ.

ಅಮಿತ್ ಷಾ, ಬೊಮ್ಮಾಯಿ ಅವರು ದಾವಣಗೆರೆ ಮತ್ತು  ಕೊಂಡಜ್ಜಿಗೆ ಬರುತ್ತಾರೆ ಎಂದು ಎಲ್ಲಾ ಸಿದ್ದತೆ ನಡೆಸಿದ್ದರು. ಅದರಂತೆ ದಾವಣಗೆರೆಯಿಂದ  ಕೊಂಡಜ್ಜಿಗೆ ಹೋಗುವ ರಸ್ತೆಯನ್ನು ಸ್ವಚ್ಚಗೊಳಿಸಿ  ಕೆಲವು ಕಡೆ ಇದ್ದ ಹಂಪ್ಸ್ ಗಳನ್ನು ತೆರೆವುಗೊಳಿಸಲಾಗಿತ್ತು. 

ಇಷ್ಟೇ ಅಲ್ಲದೇ ಅಲ್ಲಲ್ಲಿ ಹಾಳಾಗಿ ಗುಂಡಿಬಿದ್ದ ಭಾಗಗಳಲ್ಲಿ ಡಾಂಬರೀಕರಣ ಮಾಡಿ, ಎಲ್ಲಿಯೂ ಗುಂಡಿಗಳಿಲ್ಲದಂತೆ ರಸ್ತೆಯನ್ನು ರಿಪೇರಿ ಮಾಡಲಾಗಿತ್ತು.  ರಸ್ತೆಯ ಎಡ ಮತ್ತು ಬಲ ಭಾಗಗಳಲ್ಲಿ ದೊಡ್ಡ ದೊಡ್ಡ ಕಟ್ ಔಟ್ ಗಳನ್ನು ಮತ್ತು  ಬಾವುಟಗಳನ್ನು ಹಾಕಲಾಗಿತ್ತು. ಬಿಗಿ ಭದ್ರತೆಗಾಗಿ  ದಾವಣಗೆರೆಯಿಂದ ಕೊಂಡಜ್ಜಿವರೆಗೆ  ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು. 

ಆದರೆ, ಅಮಿತ್ ಷಾ ಅವರು ಕೊಂಡಜ್ಜಿಗೆ ಬರುವುದಿಲ್ಲ ಎಂದು ಸುದ್ದಿ ತಿಳಿದ ಆವರಗೊಳ್ಳ, ಕಕ್ಕರಗೊಳ್ಳ, ಕೊಂಡಜ್ಜಿ ಗ್ರಾಮಸ್ಥರು ನಿರಾಸೆ ಗೊಂಡರು. 

ದೆಹಲಿಯಿಂದ ದಾವಣಗೆರೆಯವರೆಗೆ ಬಂದಿದ್ದಾರೆ. ಅಲ್ಲಿಂದ ಕೇವಲ 12 ಕಿ.ಮೀ ದೂರದಲ್ಲಿ  ಕೊಂಡಜ್ಜಿ ಗ್ರಾಮ ಇರೋದು. 

ಇಲ್ಲಿಗೆ ಬರೋಕೆ ಏನಾಗಿತ್ತು. ಅವರಿಗೆ ಬರಲು ಸಾಧ್ಯವಿಲ್ಲ ಅಂದ ಮೇಲೆ ಮೊದಲೇ ಏಕೆ ತಿಳಿಸಿದರು ಎಂದು ಕೊಂಡಜ್ಜಿ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. 

ಅವರು ಬರದಿದ್ದರೇನಂತೆ ಈ ರಸ್ತೆಯಲ್ಲಿ ದಿನಾ ಅಡ್ಡಾಡುವಾಗ ನಮ್ಮ ಸೊಂಟ ನೋವು ಬರುತ್ತಿತ್ತು, ಕೇಂದ್ರ ಸಚಿವರು ಬರುತ್ತಾರೆ ಎನ್ನುವುದಕ್ಕಾದರೂ ರಸ್ತೆಯನ್ನು ರಿಪೇರಿ ಮಾಡಿದ್ದಾರೆ ಎಂದು ಒಂದು ಹಂತದಲ್ಲಿ ಸಮಾಧಾನ ಪಟ್ಟುಕೊಂಡರು. ಇನ್ನು ಪೊಲೀಸ್ ಸಿಬ್ಬಂದಿಯವರು ಬೆಳಿಗ್ಗೆಯಿಂದ ಕಾದು ಕಾದು ಸಾಕಾಗಿದ್ದರು. 

ಒಟ್ಟಿನಲ್ಲಿ ಕೊಂಡಜ್ಜಿಗೆ ಕೇಂದ್ರ ಗೃಹ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಬರದೇ ಇದು, ಭದ್ರತೆ ವಿಚಾರ ಮುಂದಿಟ್ಟುಕೊಂಡು ವಾಪಾಸ್‌ ಆಗಿದ್ದು ಸಮಂಜಸ ಅಲ್ಲ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ದಾವಣಗೆರೆ ಜಿಲ್ಲಾಧ್ಯಕ್ಷ ಎನ್.ಕೆ. ಕೊಟ್ರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

error: Content is protected !!