ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸಬೇಕು

ಹೊನ್ನಾಳಿಯ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕರೆ

ಹೊನ್ನಾಳಿ, ನ.29-  ಗ್ರಾ.ಪಂ. ಮಟ್ಟದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸ ಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರೆ ನೀಡಿದರು.

ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದ ತರಳ ಬಾಳು ಸಮುದಾಯ ಭವನದಲ್ಲಿ ಸೋಮವಾರ ನಡೆದ ವಿಧಾನ ಪರಿಷತ್ ಚುನಾವಣೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೀವು ಪ್ರತಿನಿಧಿಸುವ ಗ್ರಾಮ ಸಶಕ್ತವಾಗಬೇಕು. ಜನರ ನೋವಿಗೆ ಗ್ರಾ.ಪಂನ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಸಕಾಲದಲ್ಲಿ ಸ್ಪಂದಿಸಬೇಕು ಎಂದು  ಅವರು ಕಿವಿಮಾತು ಹೇಳಿದರು.

ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಬಿಜೆಪಿ ಸರ್ಕಾರ ಶಕ್ತಿ ಮೀರಿ ಅನುದಾನ ನೀಡುತ್ತಿದೆ. ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಸಾಕಷ್ಟು ಅನು ದಾನ ನೀಡುತ್ತಿದೆ ಎಂದು ಅವರು ತಿಳಿಸಿದರು.

ತಾವು ಮುಖ್ಯಮಂತ್ರಿ ಆದ ಎಲ್ಲಾ ಸಂದರ್ಭಗಳಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸುವ ಮೂಲಕ ಓರ್ವ ಆದರ್ಶ ಶಾಸಕ ಎಂದು ಹೆಸರು ಪಡೆದಿದ್ದಾರೆ ಎಂದು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕಾಂಗ್ರೆಸ್ ಪಕ್ಷ ಮುಳುಗುವ ಹಡಗು ಇದ್ದಂತೆ. ಡಿ.ಕೆ. ಶಿವಕುಮಾರ್, ಸಿದ್ಧರಾಮಯ್ಯ ಜಗಳವನ್ನು ನಿತ್ಯ ನೋಡುತ್ತಿದ್ದೇವೆ. ಹಾಗಾಗಿ, ವಿಪಕ್ಷಗಳ ಹಣದ ಆಮಿಷಕ್ಕೆ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರಾರೂ ಬಲಿಯಾಗಬಾರದು. ಪಕ್ಷ ತಾಯಿ ಇದ್ದಂತೆ, ದ್ರೋಹ ಬಗೆಯಬಾರದು. ಅರುಣ್ ಡಿ.ಎಸ್. ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಕೋರಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ ಕೋಟ್ಯಂತರ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು. 

ವಿಧಾನ ಪರಿಷತ್ ಚುನಾವಣೆಯ ಬಿಜೆಪಿ
ಅಭ್ಯರ್ಥಿ ಡಿ.ಎಸ್. ಅರುಣ್, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್ ಇತರರು ಮಾತನಾಡಿದರು.

ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಅರಕೆರೆ ಎ.ಬಿ. ಹನುಮಂತಪ್ಪ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ. ಗುರುಮೂರ್ತಿ, ಎಸ್.ಬಿ. ಹನುಮಂತಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನೆಲಹೊನ್ನೆ ಎನ್.ಎಸ್. ಮಂಜುನಾಥ್, ಕಾರ್ಯದರ್ಶಿ ಅರಕೆರೆ ಎ.ಎಂ. ನಾಗರಾಜ್, ಹೊನ್ನಾಳಿ ಪುರಸಭಾ ಅಧ್ಯಕ್ಷ ಬಾಬು ಹೋಬಳಿದಾರ್, ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ, ಎಪಿಎಂಸಿ ನಿರ್ದೇಶಕ ಜಿವಿಎಂ ರಾಜು, ಜಿಪಂ ಮಾಜಿ ಅಧ್ಯಕ್ಷೆ ದೀಪಾ ಜಗದೀಶ್, ಮಾಜಿ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ಮಾಜಿ ಸದಸ್ಯರಾದ ಎಂ.ಆರ್. ಮಹೇಶ್, ಮುಖಂಡರಾದ
ಸಿ.ಆರ್. ಶಿವಾನಂದ್, ಬೆನಕನಹಳ್ಳಿ ಎ.ಜಿ. ಮಹೇಂದ್ರಗೌಡ, ತಿಮ್ಮೇನಹಳ್ಳಿ ಟಿ.ಆರ್. ಚಂದಪ್ಪ, ಸಿ.ಕೆ. ರವಿ, ಕೆ.ವಿ. ಶ್ರೀಧರ್ ಇತರರು ಇದ್ದರು.

error: Content is protected !!