ಗೆಲುವಿನತ್ತ ನಡಿಗೆ… : ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನಗರದ ಬಾಪೂಜಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ನಡೆದ ಹಿರಿಯ ನಾಗರಿಕರ ಕ್ರೀಡಾ ಸ್ಪರ್ಧೆಗಳಲ್ಲಿ ವೇಗದ ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಿರಿಯ ನಾಗರಿಕರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್ ನಾಯಕ್
ದಾವಣಗೆರೆ, ಸೆ. 26- ಹಿರಿಯ ನಾಗರಿಕರು ಯುವಕರು ಹಾಗೂ ಸಮಾಜಕ್ಕೆ ಸ್ಫೂರ್ತಿ ಎಂದು ಹಿರಿಯ ಸಿವಿಲ್ ನ್ಯಾಯಮೂರ್ತಿ ಪ್ರವೀಣ್ ನಾಯಕ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನಗರದ ಬಾಪೂಜಿ ಶಾಲೆಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಹಿರಿಯ ನಾಗರಿಕರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿರಿಯರ ಅನುಭವ ಹಾಗೂ ಅವರ ಮಾರ್ಗದರ್ಶನವನ್ನು ಇಂದಿನ ಯುವಪೀಳಿಗೆ ಸದ್ಬಳಕೆ ಮಾಡಿಕೊಂಡು, ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಉಚಿತ ಕಾನೂನು ಅರಿವು-ನೆರವು ನೀಡುತ್ತಿದ್ದು, ಹಿರಿಯ ನಾಗರಿಕರ ಯಾವುದೇ ರೀತಿಯ ಕಾನೂನಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಪ್ರಾಧಿ ಕಾರವನ್ನು ಸಂಪರ್ಕಿಸುವಂತೆ ಅವರು ಸಲಹೆ ನೀಡಿದರು.
ಸ್ಪರ್ಧೆಗಳಲ್ಲಿ ಹಿರಿಯ ನಾಗರಿಕರ ಉತ್ಸಾಹ
ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನೋಂದಾಯಿತ 119 ಹಿರಿಯ ನಾಗರಿಕರ ಪೈಕಿ 89 ಜನರು ಭಾಗಿಯಾಗಿದ್ದರು.
60-70, 70-80 ಹಾಗೂ 80 ವರ್ಷ ಮೇಲ್ಪಟ್ಟ ವಯಸ್ಸಿನ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ವಚನಗೀತೆ, ಭಾವಗೀತೆ, ಜನಪದ ಗೀತೆ ಸೇರಿದಂತೆ ಸಂಗೀತ ಸ್ಪರ್ಧೆಗಳು, ಚೆಂಡು ಎಸೆತ, ನಿಧಾನ ನಡುಗೆ, ಕೇರಂ, ಬಾಸ್ಕೆಟ್ಗೆ ಚೆಂಡು ಹಾಕುವುದು ಸೇರಿದಂತೆ ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳು ನಡೆದವು.
ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಡಾ.ಕೆ.ಕೆ. ಪ್ರಕಾಶ್ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ಎಲ್.ಹೆಚ್. ಅರುಣ್ಕುಮಾರ್ ಮಾತನಾಡುತ್ತಾ, ಹಿರಿಯ ನಾಗರಿಕರು ಎಂಬುದು ಪ್ರತ್ಯೇಕ ಸಮುದಾಯವಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ದುಡಿದು, ವಯಸ್ಸಾದ ನಂತರ ಹಿರಿಯ ನಾಗರಿಕ ಎಂಬ ಪದ ಬಳಕೆಗೆ ಬಂದಿದೆ. ಅಭಿವೃದ್ಧಿ ರಾಷ್ಟ್ರಗಳಾದ ಜಪಾನ್, ಜರ್ಮನಿಗಳಲ್ಲಿ ಶೇ.70ರಷ್ಟು ಹಿರಿಯ ನಾಗರಿಕರೇ ಇದ್ದು, ಅವರು ಸಕ್ರಿಯವಾಗಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಸಮಾಜದಲ್ಲಾಗಿರುವ ಬದಲಾವಣೆ ಗಳಿಂದಾಗಿ ಹಿರಿಯರ ಬಗ್ಗೆ ಪ್ರೀತಿ ಅನುಕಂಪ, ಸಹಾನುಭೂತಿಯಂತಹ ಮಾನವೀಯ ಮೌಲ್ಯಗಳು ಕಂಡುಬರುತ್ತಿಲ್ಲ. ಹಿರಿಯರ ಮೌಲ್ಯಗಳು, ಸಂಸ್ಕಾರ ಹಾಗೂ ಅವರ ಜೀವನದ ಅನುಭವಗಳು ಎಲ್ಲರಿಗೂ ದಾರಿದೀಪವಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷರೂ, ಜಿಲ್ಲಾ ಹಿರಿಯ ನಾಗರಿಕರ ಸಂಘದ ಗೌರವ ಕಾರ್ಯದರ್ಶಿಗಳೂ ಆದ ಎಸ್. ಗುರುಮೂರ್ತಿ, ಸ್ಪರ್ಧೆಗಳಲ್ಲಿ ಹಿರಿಯ ನಾಗರಿಕರು ಅತೀ ಹೆಚ್ಚಿನ ರೀತಿಯಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣದ ಅಧಿಕಾರಿ ಡಾ.ಕೆ.ಕೆ. ಪ್ರಕಾಶ್, ಸುರಕ್ಷಾ ಮಲ್ಟಿಪರ್ಪಸ್ ಸಂಸ್ಥೆಯ ಅಧ್ಯಕ್ಷ ಷಾ ನವಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.