ಸಮಾಜದ ಆಸ್ತಿಯಾಗಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು

ಸರ್ಕಾರಿ ಶಾಲೆಗಳಲ್ಲಿ ಉತ್ಕೃಷ್ಟ ಶಿಕ್ಷಣ: ಡಿಸಿ

ಗ್ರಾಮ ಭಾಗದ ಸುತ್ತಮುತ್ತಲಿನ ಹಿನ್ನೆಲೆ ಯಲ್ಲಿ ಜ್ಞಾನಾರ್ಜನೆ ಮಾಡಿಕೊಂಡು ಇಂದು ದೇಶ ಕಟ್ಟುವಂತಹ ಪ್ರತಿಭೆಗಳು ಸ್ವತಂತ್ರ್ಯ ಭಾರತದಲ್ಲಿ ಹೆಚ್ಚಾಗಿ ಕಂಡುಬರುವುದು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಶಿಕ್ಷಣ ಮಹತ್ವವಾದದ್ದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

ದಾವಣಗೆರೆ, ಸೆ.1- ವಿದ್ಯಾರ್ಥಿಗಳು ಕುಟುಂಬದ ಆಸ್ತಿಯಾಗುವುದಕ್ಕಿಂತ ಸಮಾ ಜದ ಆಸ್ತಿಯಾಗಬೇಕು. ಆ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಧಿಕಾರಿ ಮಹಾಂತೇಶ್ ಬೀಳಗಿ ಕರೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನ ಸಭಾಂಗಣದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಸುವಿನ ಹಾಲಿನಂತೆ ನಮ್ಮ ಬದುಕು ಸಾಗಿಸಬೇಕು. ಸಮಾಜದ ಕಟ್ಟಕಡೆಯ ಮನು ಷ್ಯನಿಗೂ ನಮ್ಮ ಉಪಯೋಗವಾಗ ಬೇಕು. ನಮ್ಮ ದೇಶದಲ್ಲಿರುವಂತಹ ಸಂಪನ್ಮೂಲಗಳನ್ನು ದೇಶದ ಸರ್ವಾಂಗೀಣ ಪ್ರಗತಿ ಮತ್ತು ಅಭಿವೃದ್ಧಿಗೆ ಉಪಯೋಗಿಸಿಕೊಂಡು ನಮ್ಮ ಬದುಕನ್ನು ಅರ್ಥಪೂರ್ಣವಾಗಿ ಮಾಡಿಕೊಳ್ಳ ಬೇಕು ಎಂದು ಕಿವಿ ಮಾತು ಹೇಳಿದರು.

ಸ್ವಾರ್ಥಕ್ಕಾಗಿ ಬದುಕದೇ ದೇಶಕ್ಕಾಗಿ ಬದುಕಿದ ಕಾರಣ ಇಂದು ನಾವು ಅನೇಕ ಗಣ್ಯ ವ್ಯಕ್ತಿಗಳನ್ನು ನೆನಪು ಮಾಡಿಕೊಳ್ಳುತ್ತೇವೆ. ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಬ್ರಿಟಿಷರ ಕಾಲದಲ್ಲಿ ನಮ್ಮ ಸಂಪತ್ತನ್ನೂ ನಾವು ಅನುಭವಿಸುವಂತಿರಲಿಲ್ಲ. ಆದರೆ ಇಂದು ನಮ್ಮ ಸಂಪನ್ಮೂಲಗಳನ್ನು ನಾವೇ ಅನುಭವಿಸುತ್ತಿದ್ದೇವೆ. ಇದೇ ನಿಜವಾದ ಸ್ವಾತಂತ್ರ್ಯ. ದೇಶದ ಹಳ್ಳಿಗಳ ಕಟ್ಟ ಕಡೆಯ ಮನುಷ್ಯನಿಗೂ ಸರ್ಕಾರದ ಯೋಜನೆಗಳು ಮುಟ್ಟಬೇಕು ಎಂಬುದು ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿತ್ತು. ಸ್ವಾತಂತ್ರ್ಯ ಸಿಕ್ಕ ನಂತರ ದೂರದೃಷ್ಟಿಯಿಂದ ರೂಪಿಸಿದ ಅನೇಕ ಯೋಜನೆಗಳು ಇಂದು ಫಲ ಕೊಡುತ್ತಿವೆ. ಯೋಜನೆಗಳ ಫಲಶೃತಿಗಳಿಂದ ದೇಶ ಅಭಿವೃದ್ಧಿಯಾಗುತ್ತಿರುವುದರ ಪರಿಣಾಮ ಇಂದು ಇಡೀ ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ ಎಂದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರು ಮತ್ತು ಸಂಶೋಧಕರಾದ ಡಾ.ಬಿ.ಸಿ.ಮಹಾಬಲೇಶ್ವ ರಪ್ಪ ಮಾತನಾಡಿ, ಭಾರತದಲ್ಲಿ ರಾಜರ ಆಡಳಿತದಲ್ಲೂ ಪ್ರಜಾಪ್ರಭುತ್ವದ ಆಶಯವಿತ್ತು. ಚೋಳರ ಕಾಲದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆ ಇತ್ತು. ಪ್ರಜಾಪ್ರಭುತ್ವದಲ್ಲಿ ನಾವಿಂದು ಮಾನವ ಹಕ್ಕುಗಳ ಕುರಿತು ಮಾತನಾಡುತ್ತಿದ್ದೇವೆ. ಆದರೆ ಮಿಥಾಕ್ಷರದಲ್ಲಿ ವಿಜ್ಞಾನೇಶ್ವರ ಮಾನವ ಹಕ್ಕುಗಳ ಸಂರಕ್ಷಣೆ, ಸಮಾನತೆ, ಸ್ತ್ರೀ ಧರ್ಮ, ವಿಚ್ಛೇದನವನ್ನು ಇತ್ಯರ್ಥ ಮಾಡುವ ವಿಧಾನ ಸಭೆ, ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳ ಕುರಿತು ವಿವರಿಸಿದ್ದು, ಪ್ರಸ್ತುತ ಸಮಾಜಕ್ಕೆ ಆಧಾರ ಗ್ರಂಥವಾಗಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಶಿವಮೊಗ್ಗದ ಜನ ಸಂಪರ್ಕ ಕಾರ್ಯಾಲಯದ ಕ್ಷೇತ್ರ ಪ್ರಚಾರ ಅಧಿಕಾರಿ ಜಿ.ತುಕಾಮಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಸಾಯಿರಬಾನು ಫರೂಖಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಪ್ರೊ.ಟಿ.ವೀರೇಶ್, ಜಗದೀಶ್. ಎಸ್, ಗೀತಾದೇವಿ ಟಿ., ನಿವೇದಿತಾ, ಗೌರಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!