ನಗರದಲ್ಲಿ ಹೈಟೆಕ್‌ ರೇಷ್ಮೆ ಮಾರುಕಟ್ಟೆ

ಕ್ರಮಕ್ಕಾಗಿ ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ ಸೂಚನೆ

ದಾವಣಗೆರೆ, ಆ. 31 – ನಗರದ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಸ್ಥಗಿತಗೊಂಡಿರುವ ರೇಷ್ಮೆ ಮಾರಾಟ ಮಳಿಗೆಗಳಿಗೆ ಮತ್ತೆ ಚಾಲನೆ ನೀಡಲು ಹೈಟೆಕ್‌ ವ್ಯವಸ್ಥೆ ಕಲ್ಪಿಸಲು ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ರೇಷ್ಮೆ ಖಾತೆ ಸಚಿವ ಕೆ.ಸಿ. ನಾರಾಯಣ ಗೌಡ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ರೇಷ್ಮೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಪ್ರಸಕ್ತ ರೈತರು ರೇಷ್ಮೆ ಗೂಡುಗಳನ್ನು ಮಾರಲು, ರಾಮನಗರ ಇಲ್ಲವೇ ಹಾವೇರಿಗೆ ಹೋಗಬೇಕಿದೆ. ಅದರ ಬದಲು, ಇಲ್ಲೇ ಮಾರುಕಟ್ಟೆ ಆರಂಭಿಸಿದರೆ ರೈತರಿಗೆ ಅನು ಕೂಲವಾಗುತ್ತದೆ. ರಾಮನಗರದಿಂದ ವ್ಯಾಪಾರಿ ಗಳು ಬಂದು ಇಲ್ಲೇ ಖರೀದಿ ಮಾಡುವಂತಾಗಲಿ ಎಂದರು. ಮಾರುಕಟ್ಟೆಯಲ್ಲಿ ರೈತರಿಗೆ ಚೀನಾ ದಲ್ಲಿ ನೀಡಲಾಗುತ್ತಿರುವಂತೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆಸಬೇಕಿದೆ. ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪಿಸಿ, ಇದರಲ್ಲಿ ರೈತರಿಗೆ ವಾಸ್ತವ್ಯ, ಬ್ಯಾಂಕಿಂಗ್ ವ್ಯವಸ್ಥೆ, ಸುಸಜ್ಜಿತ ಲಾಕರ್, ಗೋಡೌನ್, ರಾಕ್‌ ಸಹಿತ ಎಲ್ಲ ಸೌಲಭ್ಯಗಳು ಕಲ್ಪಿಸಬೇಕಿದೆ. ರೈತರಿಗೆ ಯಾವುದೇ ಅನ್ಯಾಯ ಹಾಗೂ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿಕೊಡಲು ಅಧಿಕಾರಿಗಳು ಪ್ರಸ್ತಾವನೆ ರೂಪಿಸಬೇಕು ಎಂದು ಸಚಿವರು ಹೇಳಿದರು.

ಉತ್ತಮ ಗುಣಮಟ್ಟದ ರೇಷ್ಮೆ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿದ್ದು, ಬೇಡಿಕೆಯೂ ಇದೆ.  ರೈತರಿಗೆ ರೇಷ್ಮೆ ಕೃಷಿ ಉತ್ತಮ ಲಾಭ ತಂದುಕೊಡುವ ಕೃಷಿ ಚಟುವಟಿಕೆಯಾಗಿದೆ.  ಎಕರೆಗೆ ಪ್ರತಿ ತಿಂಗಳು ಸುಮಾರು 40 ರಿಂದ 50 ಸಾವಿರ ರೂ. ಆದಾಯ ಗಳಿಸಲು ಇಲ್ಲಿ ಅವಕಾಶವಿದೆ. ಬೇರೆಲ್ಲ ಬೆಳೆಗಳಿಗಿಂತ ರೇಷ್ಮೆ ಹೆಚ್ಚು ಆದಾಯ ತರುತ್ತದೆ ಎಂದು ಸಚಿವರು ಹೇಳಿದರು.

ರೇಷ್ಮೆ ಬೆಳೆಗಾರರಿಗೆ ಸನ್ಮಾನ : ದಾವಣಗೆರೆ ತಾಲ್ಲೂಕಿನ ರೇಷ್ಮೆ ಗೂಡು ಬೆಳೆಗಾರ ಓಂಕಾರಪ್ಪ ಹಾಗೂ ಜಗಳೂರು ತಾಲ್ಲೂಕಿನ ಕೋಟೇಶ್ವರ್ ಅವರು ಅತ್ಯುತ್ತಮ ಇಳುವರಿ ಪಡೆದಿದ್ದು, ವರ್ಷಕ್ಕೆ ಹತ್ತು ಸುತ್ತಿನಲ್ಲಿ ಗೂಡುಗಳನ್ನು ಪಡೆಯುತ್ತಿರುವ ಬಗ್ಗೆ ಸಚಿವರು ಹರ್ಷ ವ್ಯಕ್ತಪಡಿಸಿದ್ದು, ಇಂತಹ ರೈತರಿಗೆ ಮುಖ್ಯಮಂತ್ರಿಗಳಿಂದ ಸನ್ಮಾನ ಮಾಡಿಸುವುದಾಗಿ ಹೇಳಿದರು. 

ಬಿಳಿಗೂಡಿಗೆ ಉತ್ತೇಜನ :  ರೇಷ್ಮೆ ಇಲಾಖೆ ಪ್ರಭಾರಿ ಉಪನಿರ್ದೇಶಕ ಶ್ರೀಹರ್ಷ ಮಾತನಾಡಿ, ಬಿಳಿಗೂಡಿನಿಂದ ರೈತರಿಗೆ ಹೆಚ್ಚು ಆದಾಯ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ರೆಂಡಿಟ್ಟೆ ಚಂದ್ರಿಕೆಯ ಬಿಳಿಗೂಡುಗಳಿಗಾಗಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಚನ್ನಗಿರಿಯಲ್ಲಿ ರೇಷ್ಮೆ ಇಲಾಖೆಗೆ  ಸೇರಿದ 33 ಎಕರೆ ಜಮೀನಿದೆ. ಇದರಲ್ಲಿ ಒಂದೆರಡು ಎಕರೆ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಲಾಗಿದೆ. ಇದಕ್ಕೆ ಬೇಲಿ ಹಾಕಿದರೆ ಹದ್ದುಬಸ್ತಾಗಿರುತ್ತದೆ ಎಂದರು.

ಇಲಾಖೆ ಜಮೀನು ರೈತರಿಗೆ ಗುತ್ತಿಗೆ : ತೋಣಹುಣಸೆಯಲ್ಲಿ ಇಲಾಖೆಗೆ ಸೇರಿದ 37 ಎಕರೆ ಜಮೀನಿದ್ದು, ಇದಕ್ಕೆ ಹೋಗಲು ಸರಿಯಾದ ದಾರಿಯೇ ಇಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಇಂತಹ ಜಾಗಗಳನ್ನು ರೈತರಿಗೆ ಗುತ್ತಿಗೆಯಲ್ಲಿ ನೀಡಿ. ಇದರಿಂದ ರೈತರ ಆದಾಯ ದುಪ್ಪಟ್ಟಾಗುತ್ತದೆ ಹಾಗೂ ಆಸ್ತಿಗಳ ನಿರ್ವಹಣೆಯೂ ಆಗುತ್ತದೆ. ಇಂತಹ ಆಸ್ತಿಗಳನ್ನು ಇಲಾಖೆಯಿಂದಲೇ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಚಿವ ನಾರಾಯಗೌಡ ಹೇಳಿದರು.

ಸಭೆಯಲ್ಲಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ್, ಶಾಸಕರುಗಳಾದ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪಯ್ಯ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಉಪಕಾರ್ಯದರ್ಶಿ ಆನಂದ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್‌, ಜವಳಿ ಉದ್ಯಮಿ ಮಂಜುನಾಥ್ ಆರ್. ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!