ದಾವಣಗೆರೆ, ಆ. 29 – ವಿದ್ಯೆ ಹಾಗೂ ಪ್ರಜ್ಞಾವಂತಿಕೆ ಯಿಂದ ದೇಶವನ್ನು ಕಾಡುತ್ತಿರುವ ಬಡತನ, ಅಜ್ಞಾನ ಹಾಗೂ ಜಾತೀಯತೆಗಳು ನಿವಾರಣೆಯಾಗುತ್ತವೆ ಎಂಬ ನಿರೀಕ್ಷೆ ಇನ್ನೂ ಈಡೇರಿಲ್ಲ. ದೇಶದ ಬೆಳವಣಿಗೆ ಕುಂಠಿತಗೊಳಿಸುತ್ತಿರುವ ಈ ಪಿಡುಗುಗಳ ನಿವಾರಣೆಗೆ ಯುವಕರ ಮೂಲಕ ಪ್ರಯತ್ನ ನಡೆಯಬೇಕಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಡಾ. ಜಿ. ಪರಮೇಶ್ವರ್ ಯುವ ಸೈನ್ಯದ ವತಿಯಿಂದ ರಾಜ್ಯ ಮಟ್ಟದಲ್ಲಿ ಸಂಘಟನೆ ಬಲವರ್ಧನೆಗಾಗಿ ಆಯೋ ಜಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಆನ್ಲೈನ್ ಮೂಲಕ ಮಾತನಾಡುತ್ತಿದ್ದರು.
ದೇಶ, ರಾಜ್ಯ ಹಾಗೂ ಸಮಾಜ ಈಗ ಬೇರೆ ಬೇರೆ ದಾರಿಗೆ ಹೋಗುವ ಪರಿಸ್ಥಿತಿ ಕಾಣುತ್ತಿದ್ದೇವೆ. ಇದರಿಂದಾಗಿ ದೇಶ ಕಟ್ಟಬೇಕಾದ ಯುವಕರು ದಾರಿ ತಪ್ಪುತ್ತಿದ್ದಾರೆ. ಯುವಕರಿಗೆ ಸಮಾಜದಲ್ಲಿ ಅವಕಾಶಗಳು ದೊರೆಯುತ್ತಿಲ್ಲ. ಸಮಾಜದಲ್ಲಿ ಸಮಾನತೆ ಕಾಣುವ ನಿರೀಕ್ಷೆ ಸಾಕಾರವಾಗದೇ ಜೀವನವೇ ಮುಗಿಯುತ್ತಿದೆ ಎಂದವರು ವಿಷಾದಿಸಿದರು.
ಈಗಿನ ಪರಿಸ್ಥಿತಿಯಲ್ಲಿ ಬಹಳ ವಿಷಯಗಳು ಜನರಿಗೆ ವಿರುದ್ಧವಾಗಿವೆ. ಈ ಸಮಯದಲ್ಲಿ ಯುವ ಸೈನ್ಯ ಸಂಘಟನೆ ಸಮಾಜಮುಖಿ ಕೆಲಸ ಮಾಡಬೇಕು. ಜನರ ಮನ ತಲುಪುವ ಕೆಲಸ ಮಾಡಬೇಕು. ಶಿಕ್ಷಣ, ಉದ್ಯೋಗ ಮತ್ತು ಸಮಾಜದಲ್ಲಿ ಬದಲಾವಣೆ ಪಡೆಯಲು ಶ್ರಮಿಸಬೇಕಿದೆ ಎಂದವರು ಹೇಳಿದರು.
ಯುವ ಸೈನ್ಯದ ಗೌರವಾಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಪರಮೇಶ್ವರ್ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ತಮ್ಮ ಸಾಮರ್ಥ್ಯ ತೋರಿದ್ದರು. ಆದರೂ, ಬೆನ್ನಿಗೆ ಚೂರಿ ಹಾಕುವ ಹುನ್ನಾರದಿಂದ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಂಚಿತರನ್ನಾಗಿ ಮಾಡಲಾಯಿತು. ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದನ್ನೂ ಸಹ ಸಹಿಸದೇ, ಅವರು ಬೆಳೆಯಬಾರದೆಂದು ಸರ್ಕಾರ ಉರುಳಿಸಲಾಯಿತು ಎಂದು ವಿಷಾದಿಸಿದರು.
ಚುನಾವಣೆಯಲ್ಲಿ ಸೋತವರನ್ನು ಬೇರೆ ಕ್ಷೇತ್ರದಿಂದ ಗೆಲ್ಲಿಸಿ ಮುಖ್ಯಮಂತ್ರಿ ಮಾಡಿದ ಉದಾಹರಣೆಗಳಿವೆ. ಆದರೆ, ಪರಮೇಶ್ವರ್ ಅವರಿಗೆ ಅಂತಹ ಅವಕಾಶ ದೊರೆಯಲಿಲ್ಲ. ಈ ಎಲ್ಲ ಹಿನ್ನಡೆಗಳು ತಾತ್ಕಾಲಿಕ. ಪರಮೇಶ್ವರ್ ಅವರು ಶಿಕ್ಷಣ ಹಾಗೂ ಉದ್ಯೋಗ ವಲಯದಲ್ಲಿ ಮಾಡಿರುವ ಸಾಧನೆಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಯುವ ಸೈನ್ಯದ ಗೌರವಾಧ್ಯಕ್ಷರಾದ ಇಕ್ಬಾಲ್ ಅಹಮದ್, ನಜೀರ್ ಅಹಮದ್ ಕೆಂಗೋನಳ್ಳಿ, ಯುವ ಸೈನ್ಯದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತಿಕ್ ಅಹಮದ್, ರಾಜ್ಯಾಧ್ಯಕ್ಷ ನಗುತಾ ರಂಗನಾಥ್, ಜಿಲ್ಲಾಧ್ಯಕ್ಷ ಎಂ. ಹಾಲೇಶ್, ರಾಜ್ಯ ಕಾರ್ಯದರ್ಶಿ ಜಿ.ಆರ್. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.