ನಿಮ್ಮಿಂದ ಕಾಂಗ್ರೆಸ್ ಪಕ್ಷಕ್ಕೆ ಮೋಸವಾಗಿದೆಯೋ… ಪಕ್ಷದಿಂದ ನಿಮಗೆ ಮೋಸವಾಗಿದೆಯೋ ಆತ್ಮಾವಲೋಕನ ಮಾಡಿಕೊಳ್ಳಿ

ಮಾನ್ಯರೇ,

ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನವಾಗಿ ದೇವರಮನೆ ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದಾರೆ. ಅವರಿಗೆ ಅಭಿನಂದನೆಗಳು. ಆದರೆ, ಅವರು ತಮ್ಮ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ತಾವು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿರುವ ಕಾರಣ ಎಲ್ಲರಿಗೂ ತಿಳಿದಿದೆ. 

ಪಕ್ಷದಲ್ಲಿದ್ದಾಗ ಯಾವ ನೋವಿತ್ತು ಏನಿಲ್ಲಾ ಸಮಸ್ಯೆ ಅನುಭವಿಸಿದೆ ಎಂಬುದು ನನಗೆ ಮಾತ್ರ ಗೊತ್ತು ಎಂದು ತಿಳಿಸಿದ್ದೀರಾ. ಅಧಿಕಾರದ ಆಸೆಗಾಗಿ ಮೇಯರ್ ಚುನಾವಣೆಯ ಕೊನೆಯ ಕ್ಷಣದಲ್ಲಿ ರಾತ್ರೋರಾತ್ರಿ ಹೋದ ನೀವು, ಈ ಮಾತುಗಳನ್ನು ಹೇಳುವುದು ಎಷ್ಟು ಸರಿ.

ಮಹಾನಗರ ಪಾಲಿಕೆಯ 22ನೇ ವಾರ್ಡ್ ಯಲ್ಲಮ್ಮ ನಗರ ಕಾಂಗ್ರೆಸ್‌ನ ಭದ್ರಕೋಟೆ ಯಾಗಿತ್ತು. ಅಲ್ಲಿ ಪಕ್ಷಕ್ಕಾಗಿ ದುಡಿದ ಅನೇಕ ನಾಯಕರುಗಳು ಇದ್ದರು. ಆದರೂ ನಮ್ಮ ಪಕ್ಷದ ಹೈಕಮಾಂಡ್ ಎಂದೂ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡದ ನಿಮ್ಮನ್ನು ಕರೆತಂದು ಟಿಕೆಟ್ ನೀಡಿ, ಗೆಲ್ಲಿಸಿಕೊಂಡು ಬಂದದ್ದು, ಕಾಂಗ್ರೆಸ್ ಪಕ್ಷ ನಿಮಗೆ ಮಾಡಿದ ಮೋಸವಲ್ಲವೇ ?

ಮೂರ್ನಾಲ್ಕು ಬಾರಿ ಗೆದ್ದು, ಹತ್ತಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಂತಹ ಪಕ್ಷದ ಪಾಲಿಕೆಯ ಸದಸ್ಯರುಗಳು ಇದ್ದರೂ ಸಹ ಪ್ರಥಮ ಬಾರಿ ಗೆದ್ದಂಥಾ ನಿಮ್ಮನ್ನು ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಕಾಂಗ್ರೆಸ್ ಪಕ್ಷ ನಿಮಗೆ ನೀಡಿದ ನೋವು ಅಲ್ಲವೇ ?

ಮೇಯರ್ ಚುನಾವಣೆಗೆ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಎರಡು ಬಾರಿ ಬಂದಿದ್ದು, ಮುಂದೆ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಬರುವುದಿಲ್ಲ ಎಂದು ಅರಿತು, ಟಿಕೆಟ್ ನೀಡಿದ ಪಕ್ಷಕ್ಕೆ, ಗೆಲ್ಲಿಸಿಕೊಂಡು ಬಂದಂತಹ ಮುಖಂಡರು, ಕಾರ್ಯಕರ್ತರುಗಳಿಗೆ ನೀವು ಮೋಸ – ನೋವು ಮಾಡಿರುವಿರಿ ವಿನಃ ಪಕ್ಷವಾಗಲೀ, ಪಕ್ಷದ ಮುಖಂಡರುಗಳಾಗಲೀ, ಕಾರ್ಯಕರ್ತರುಗಳಾಗಲೀ ಅಲ್ಲ ಎಂಬುದು ತಿಳಿಯಲಿ.

ಕಾಂಗ್ರೆಸ್ ಪಕ್ಷ ನಿಮಗೆ ಟಿಕೆಟ್ ನೀಡಿ, ಪಾಲಿಕೆ ಸದಸ್ಯರನ್ನಾಗಿ ಮಾಡಿದ ಕಾರಣ ದಿಂದಾಗಿಯೇ, ಇಂದು ನಿಮಗೆ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಒಲಿದಿರುವುದು ಎಂಬುದನ್ನು ತಿಳಿದು ನಮ್ಮ ಪಕ್ಷದ ನಾಯಕರುಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ.

ಏನೇ ಆಗಲಿ ನೂತನವಾಗಿ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿ ಆಯ್ಕೆಯಾದ ನಿಮಗೆ ಅಭಿನಂದನೆಗಳು.


– ಕೆ.ಎಲ್.ಹರೀಶ್, ಬಸಾಪುರ.

ನಿಮ್ಮನ್ನು ಮೇಯರ್ ಮಾಡಲು ಶ್ರಮವಹಿಸಿದ ಕಾರ್ಯಕರ್ತರಲ್ಲಿ ಒಬ್ಬ. 

error: Content is protected !!