ಬಸಾಪುರದಲ್ಲಿ ಸರ್ಕಾರಿ ಶಾಲೆಯ ಕಟ್ಟಡಗಳ ಕಾಮಗಾರಿಗೆ ಗುದ್ದಲಿ ಪೂಜೆ

ದಾವಣಗೆರೆ, ಆ.25- ಪ್ರತಿಯೊಬ್ಬರಿಗೂ ತಾವು ಒಂದು ನೂತನ ಮನೆ ಕಟ್ಟಿಸಬೇಕೆಂಬ ಮಹದಾಸೆ ಇದ್ದೇ ಇರುತ್ತದೆ. ಅಂತಹ ಸಂದರ್ಭ ಬಂದಾಗ ಮನೆಯ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಮನೆಯ ಸದಸ್ಯರು ಯಾವ ರೀತಿ ಸಂಭ್ರಮಿಸುತ್ತಿದ್ದರೋ ಅದಕ್ಕಿಂತ ಹೆಚ್ಚಿನ ರೀತಿ ಮಹಾನಗರ ಪಾಲಿಕೆ ವ್ಯಾಪ್ತಿಯ ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಗಳ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಆ ಶಾಲೆಯ ಶಿಕ್ಷಕರು ಸಂಭ್ರಮಿಸಿದ್ದು ಕಂಡು ಬಂತು.

ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಶಿಫಾರಸ್ಸಿನ ಮೇರೆಗೆ ಸ್ಮಾರ್ಟ್ ಸಿಟಿ ಯೋಜನೆ ಯಡಿ ಆರು ಶಾಲಾ ಕಟ್ಟಡಗಳಿಗೆ ಅನುದಾನ ದೊರೆತಿದ್ದು, ಇಂದು ಕಟ್ಟಡಗಳ ಗುದ್ದಲಿ ಪೂಜೆ ಕಾರ್ಯ ನಡೆಯಿತು.  

ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಅವರು ತಾವೇ ಅರ್ಚಕರಾಗಿ ಶಾಸ್ತ್ರ ಬದ್ದವಾಗಿ ಪೂಜೆ ನೆರವೇರಿಸಿದರು. ಶಾಲೆಯ ಶಿಕ್ಷಕಿಯರು ಸಂಭ್ರಮದಿಂದ ಗ್ರಾಮದ ಮುಖಂಡರಿಗೆ ಕಂಕಣ ಕಟ್ಟುವ ಮೂಲಕ ಸ್ವಾಗತಸಿದ್ದು ವಿಶೇಷವಾಗಿತ್ತು.

ಭೂಮಿ ಪೂಜೆಯ ಈ ವಿಶೇಷ ಸಮಾರಂಭದಲ್ಲಿ ಹಿರಿಯ ಪತ್ರಕರ್ತರೂ ಆದ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಬಾ.ಮ.ಬಸವರಾಜಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್‌, ಮಾಜಿ ನಗರಾಭಿವೃದ್ಧಿ ಸದಸ್ಯ ಎಂ.ಎಸ್. ಕೊಟ್ರಯ್ಯ, ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್.ಹರೀಶ್, ಗ್ರಾಮದ ಮುಖಂಡರುಗಳಾದ ಸಿ.ಮಹೇಶ್ವರಪ್ಪ, ನಾಗೇಂದ್ರಚಾರ್, ಎನ್.ಎಂ.ಕೊಟ್ರಯ್ಯ, ಬಿ.ಕೆ. ದೇವೇಂದ್ರಪ್ಪ, ಕೆ.ಬಿ. ಲಿಂಗರಾಜ್, ಕೆ.ಬಿ.ಪ್ರಕಾಶ್ ಭಾಗವಹಿಸಿ  ನೆರವೇರಿಸಿದರು. 

ಹಾದಿಮನಿ ಶಿವಕುಮಾರ್, ಬಿ.ಟಿ. ಮರುಳಸಿದ್ದಪ್ಪ, ಎಚ್. ಎಂ.ಲೋಕೇಶ್ವರಯ್ಯ, ದಲಿತ ಮುಖಂಡ ಹನುಮಂತಪ್ಪ, ಸ್ಮಾರ್ಟ್ ಸಿಟಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾದ ಶಿವರಾಜ್, ಸಹಾಯಕ ಅಭಿಯಂತರರಾದ ವೀರೇಶ್, ಅನೂಪ್ ಸೇರಿದಂತೆ ಗ್ರಾಮದ ಪ್ರಮುಖರು ಭಾಗಿಗಳಾಗಿದ್ದರು.

error: Content is protected !!