ಮಲೇಬೆನ್ನೂರು, ಆ.20- ಕೊಕ್ಕನೂರು ಗ್ರಾಮದ ಪವನದೇವ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಇವರ ಸಹಯೋಗದೊಂದಿಗೆ ಹರಿಹರ ತಾಲ್ಲೂಕಿನ 1 ಸಾವಿರ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಶುಕ್ರವಾರ ಫುಡ್ ಕಿಟ್ ವಿತರಿಸಿದರು.
ನಂತರ ಮಾತನಾಡಿದ ಸಂಸದರು, ಕೊರೊನಾ ಲಾಕ್‌ಡೌನ್ ವೇಳೆ ಕಾರ್ಮಿಕರಿಗೆ ಕೆಲಸ ಇಲ್ಲದೆ ತೊಂದರೆ ಆಗಿದ್ದನ್ನು ಗಮನಿಸಿದ ಸರ್ಕಾರ 2 ಸಾವಿರ ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿದೆ.
ಜೊತೆಗೆ ಫುಡ್ ಕಿಟ್‌ಗಳನ್ನು ನೀಡಿದೆ. ಹರಿಹರ ತಾಲ್ಲೂಕಿನಲ್ಲಿ 17,500 ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, ಈಗಾಗಲೇ ಶಾಸಕ ರಾಮಪ್ಪ ಅವರು 5 ಸಾವಿರ ಜನರಿಗೆ ಫುಡ್ ಕಿಟ್ ನೀಡಿದ್ದಾರೆ.
ಉಳಿದ ಜನರಿಗೆ ಫುಡ್ ಕಿಟ್ ನೀಡಲು ಇಂದು ಚಾಲನೆ ನೀಡಿದ್ದೇವೆ. ಅಗತ್ಯ ಬಿದ್ದರೆ ಕಾರ್ಮಿಕ ಸಚಿವರ ಜೊತೆ ಮಾತನಾಡಿ ಇನ್ನೂ ಹೆಚ್ಚಿನ ಫುಡ್ ಕಿಟ್‌ಗಳನ್ನು ದಾವಣಗೆರೆ ಜಿಲ್ಲೆಗೆ ತರಿಸುವುದಾಗಿ ಹೇಳಿದರು. ಕೇಂದ್ರ ಸರ್ಕಾರದಿಂದ ರೈತರ ಖಾತೆಗೂ 2 ಸಾವಿರ ರೂ. ಹಣ ಜಮಾ ಆಗಿದೆ ಎಂದರು.
ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಹರಿಹರ ತಾ. ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಭದ್ರಾ ಕಾಡಾ ಸದಸ್ಯ ಗೋವಿನಹಾಳ್ ರಾಜಣ್ಣ, ಗ್ರಾ.ಪಂ. ಅಧ್ಯಕ್ಷ ನಿಂಗನಗೌಡ, ದಿಶಾ ಕಮಿಟಿ ಸದಸ್ಯ ಐರಣಿ ಅಣ್ಣಪ್ಪ, ಬಿಜೆಪಿ ತಾ. ಪ್ರಧಾನ ಕಾರ್ಯದರ್ಶಿ ಹುಗ್ಗಿ ಮಹಾಂತೇಶ್, ಬೆಳ್ಳೂಡಿ ಬಕ್ಕೇಶ್, ವಾಸು ಚಂದಾಪೂರ್, ಜಿಲ್ಲಾ ಕಾರ್ಮಿಕಾಧಿಕಾರಿ ಇಬ್ರಾಹಿಂ ಸಾಬ್, ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ ಕವಿತಾ, ಕಾರ್ಮಿಕ ಇಲಾಖೆಯ ಸಿಬ್ಬಂದಿಗಳಾದ ಮಧು, ಮಂಜು, ಪಿಎಸ್‌ಐ ರವಿಕುಮಾರ್, ತಾಲ್ಲೂಕು ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿ ನಂದಿಗುಡಿ ಶ್ರೀಕಾಂತ್ ಮತ್ತಿತರರು ಈ ವೇಳೆ ಹಾಜರಿದ್ದರು.