ದೇವಸ್ಥಾನಗಳು ಧಾರ್ಮಿಕ, ಸಾಂಸ್ಕೃತಿಕ ಕೇಂದ್ರಗಳು

ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗು ಪಾದಯಾತ್ರೆ ಎರಡನ್ನೂ ನಡೆಸಿದ ಮೊದಲ ಏಕೈಕ ಗ್ರಾಮ ನರಸಗೊಂಡನಹಳ್ಳಿ.

– ಶ್ರೀ ಶ್ರೀಶೈಲ ಜಗದ್ಗುರುಗಳ ಶ್ಲ್ಯಾಘನೆ

ಹೊನ್ನಾಳಿ, ನ.21- ದೇವಸ್ಥಾನಗಳು ಭಾರತ ದೇಶದ ಧಾರ್ಮಿಕ, ಸಾಂಸ್ಕೃತಿಕ ಕೇಂದ್ರಗಳಾಗಿವೆ ಎಂದು ಶ್ರೀ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ನರಸಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇಣುಕಾ ಚಾರ್ಯರ, ಶ್ರೀ ಭೂತೇಶ್ವರ ಸ್ವಾಮಿಯ ನೂತನ ಮಂದಿರ ಪ್ರವೇಶ ಮತ್ತು ಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಭಾನುವಾರ ಹಮ್ಮಿಕೊಂಡ ಭಾವೈಕ್ಯ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಾಚೀನ ಭಾರತೀಯ ಶಿಲ್ಪಕಲೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ನಮ್ಮ ದೇಶದ ದೇವಸ್ಥಾನಗಳಿಗೆ ಸಲ್ಲುತ್ತದೆ. ವಿಶ್ವದ ಎಲ್ಲಾ ರಾಷ್ಟ್ರಗಳ ದೇವಸ್ಥಾನಗಳಿಗಿಂತ ಭಾರತದಲ್ಲಿ ದೇವಸ್ಥಾನಗಳ ಸಂಖ್ಯೆ ಅಧಿಕ. ಪ್ರಾಚೀನ ಕಾಲದಲ್ಲಿ ಧಾರ್ಮಿಕವಾಗಿ ಜನರ ನಾಡಿ ಮಿಡಿತವನ್ನು ಹಿಡಿದಿಟ್ಟುಕೊಂಡ ಶಕ್ತಿ ದೇವಸ್ಥಾನಗಳು. ಹಾಗಾಗಿ, ದೇವಸ್ಥಾನಗಳ ನಿರ್ಮಾಣದಿಂದ ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸುತ್ತದೆ ಎಂದು ತಿಳಿಸಿದರು.

ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಿರ್ಮಲವಾದ ಭಕ್ತಿಯಿಂದ ಮಾತ್ರ ಭಗವಂತ ಸಂಪನ್ನಾಗುತ್ತಾನೆ ಎಂದು ಹೇಳಿದರು.

ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೆರೆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಶ್ರೀಶೈಲ ಪೀಠದ ವತಿಯಿಂದ 101 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಅದರಂತೆ ಮನೆಗಳು ಈಗಾಗಲೇ ನಿರ್ಮಾಣದ ಹಂತದಲ್ಲಿವೆ. ಆ ಮನೆಗಳ ಪೈಕಿ ಒಂದು ಮನೆ ನಿರ್ಮಾಣದ ಹಣವನ್ನು ಹೊನ್ನಾಳಿ ಹಿರೇಕಲ್ಮಠ ಭರಿಸಲಿದೆ ಎಂದರು.

ಜಗದ್ಗುರುಗಳು ಪಟ್ಟಾಧಿಕಾರವಾಗಿ 12 ವರ್ಷಗಳಿಂದ ಭಕ್ತರು ತಮಗೆ ಅರ್ಪಿಸಿದ ಬಂಗಾರ, ಇನ್ನಿತರೆ ಒಡವೆಗಳನ್ನು ಮಾರಾಟ ಮಾಡಿ, ಆ ಹಣವನ್ನು ಬಳಸಿ ಕೊರೊನಾ ಕಾಲಘಟ್ಟದಲ್ಲಿ ನಿರಾಶ್ರಿತರಿಗೆ ಮನೆ ಕಟ್ಟಲು ಮುಂದಾಗಿರುವುದೂ ಸೇರಿದಂತೆ ವಿಶಿಷ್ಟ ಸೇವೆ ಸಲ್ಲಿಸಿದರು. ಇದೀಗ, ಆಂಧ್ರಪ್ರದೇಶ ಸರ್ಕಾರ ಶ್ರೀಶೈಲ ಪೀಠಕ್ಕೆ 10 ಎಕರೆ ಭೂಮಿ ಮಂಜೂರು ಮಾಡಿದೆ. ಆ ಜಾಗದಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ 101 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಲು ಉದ್ದೇಶಿಸಿ ದ್ದಾರೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಒಂದು ಗುರುಕುಲವನ್ನು ಸ್ಥಾಪಿಸಲು ನಿರ್ಧರಿಸಿ ದ್ದಾರೆ. ಹೀಗೆ, ಅವರ ಸೇವಾ ಮನೋಭಾವ ಅನನ್ಯವಾದುದು ಎಂದು ವಿವರಿಸಿದರು.

ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಡಾ. ಶಾಂತವೀರ ಸ್ವಾಮೀಜಿ, ಹೊಟ್ಯಾಪುರ ಹಿರೇಮಠದ ಶ್ರೀ ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ನಾಗವಂದ ಹೊರಗಿನ ಮಠದ ಶ್ರೀ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಹೂವಿನಹಡಗಲಿ ತಾಲ್ಲೂಕು ಉತ್ತಂಗಿಯ ಅಷ್ಟಮಠಗಳ ಸಂಸ್ಥಾನ ಮಠಾಧೀಶರಾದ ಶ್ರೀ ಸೋಮಶಂಕರ ಸ್ವಾಮೀಜಿ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಬಿಜೆಪಿ ಮುಖಂಡ ಎಂ.ಪಿ. ರಮೇಶ್, ಎ.ಜಿ. ಹೇಮಲತಾ ಇತರರು ಮಾತನಾಡಿದರು.

ಅರಕೆರೆ ಗ್ರಾಪಂ ಅಧ್ಯಕ್ಷ ಎ.ಬಿ. ರಂಗಪ್ಪ, ಉಪಾಧ್ಯಕ್ಷೆ ಪ್ರಮೀಳಾ ಶಂಕರಾಚಾರಿ, ಸದಸ್ಯರಾದ ಮಂಜುನಾಥ್, ನರಸಗೊಂಡನಹಳ್ಳಿ ಗ್ರಾಮದ ಮಠದ ಮುರುಗೇಂದ್ರಯ್ಯ, ಮುಖಂಡರಾದ ಎನ್.ಎಚ್. ರಘು, ವೈ.ಎಸ್. ಸುರೇಂದ್ರ, ಕೆ.ಆರ್. ಶ್ರೀನಿವಾಸ್, ಮಂಜುನಾಥ್, ಅರಕೆರೆ ಎಸ್.ಜಿ. ಮಧುಗೌಡ ಇನ್ನಿತರರಿದ್ದರು.

error: Content is protected !!