ಜನಾಶೀರ್ವಾದ ಯಾತ್ರೆಯಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ದಾವಣಗೆರೆ, ಆ. 18 – ಹಿಂದುಳಿದ ವರ್ಗದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪರಿಶಿಷ್ಟ ಜಾತಿ ಹಾಗೂ ಪಂಗಡದ 20 ಜನರನ್ನು ಸಚಿವರನ್ನಾಗಿ ಮಾಡಿದರೆ, ಅವರನ್ನು ಸಂಸತ್ತಿಗೆ ಪರಿಚಯಿಸಲು ಕಾಂಗ್ರೆಸ್ ಅಡ್ಡಿಪಡಿಸಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ಶಾಮನೂರು ಶಿವಶಂಕರಪ್ಬ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಜನಾಶೀರ್ವಾದ ಯಾತ್ರೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಬಿಜೆಪಿಯನ್ನು ಬ್ರಾಹ್ಮಣರ ಪಕ್ಷ ಹಾಗೂ ಗರ್ಭಗುಡಿ ರಾಜಕೀಯ ಮಾಡುವ ಪಕ್ಷ ಎಂದು ಕಾಂಗ್ರೆಸ್ ಲೇವಡಿ ಮಾಡುತ್ತಿತ್ತು. ಆದರೆ, ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ 20 ಜನರನ್ನು ಬಿಜೆಪಿ ಕೇಂದ್ರ ಸಚಿವರನ್ನಾಗಿ ಮಾಡಿದೆ ಎಂದು ಹೇಳಿದರು.
ಚುನಾವಣೆಗೆ ಮುಂಚೆಯೇ ಹಿಂದುಳಿದ ವರ್ಗಕ್ಕೆ ಸೇರಿದ ಮೋದಿ ಅವರನ್ನು ಪ್ರಧಾನ ಮಂತ್ರಿ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಬಿಜೆಪಿ ಮೂರನೇ ಎರಡರಷ್ಟು ಬಹುಮತದಿಂದ ಗೆಲುವು ಸಾಧಿಸಿದೆ. ಈ ಬಾರಿ ಸಂಪುಟದಲ್ಲಿ 23 ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಸಚಿವರಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಹಿಂದುಳಿದ ವರ್ಗಕ್ಕೆ ಸೇರಿದವರು ಎಂದರು.
ಪರಿಶಿಷ್ಟ ಜಾತಿ – ಪಂಗಡ ಹಾಗೂ ಹಿಂದುಳಿದ ವರ್ಗಗಳವರ ಸಚಿವರನ್ನು ಸಂಸತ್ತಿಗೆ ಪರಿಚಯಿಸಲು ಕಾಂಗ್ರೆಸ್ ಅವಕಾಶ ಕೊಡಲಿಲ್ಲ. ಹೀಗಾಗಿ ಸಚಿವರು ನೇರವಾಗಿ ಜನರ ಬಳಿ ಹೋಗಿ ಜನಾಶೀರ್ವಾದ ಪಡೆಯಬೇಕೆಂದು ಪಕ್ಷ ನಿರ್ಧರಿಸಿದೆ ಎಂದವರು ಹೇಳಿದರು.
ಬ್ರಾಹ್ಮಣರ ಪಕ್ಷ ಎಂದು ಕಾಂಗ್ರೆಸ್ ಲೇವಡಿ ಮಾಡುತ್ತಿದ್ದ ಬಿಜೆಪಿಯಿಂದ ಹಿಂದುಳಿದ ವರ್ಗದ ಪ್ರಧಾನ ಮಂತ್ರಿ, 20 ಪರಿಶಿಷ್ಟ ಜಾತಿ – ಪಂಗಡದ ಸಚಿವರು ಹಾಗೂ 23 ಇತರೆ ಹಿಂದುಳಿದ ವರ್ಗದ ಸಚಿವರಿದ್ದಾರೆ.
– ಎ.ನಾರಾಯಣಸ್ವಾಮಿ, ಕೇಂದ್ರ ಸಾಮಾಜಿಕ ನ್ಯಾಯ ಸಚಿವ
ತುಮಕೂರಿಗೆ ನೇರ ರೈಲು, ಸಿ.ಆರ್.ಸಿ. ಸೌಲಭ್ಯಕ್ಕೆ ಕ್ರಮ
ದಾವಣಗೆರೆ, ಆ. 18 – ದಾವಣಗೆರೆ – ತುಮಕೂರು ನೇರ ರೈಲು ಸಂಪರ್ಕ ಯೋಜನೆಯನ್ನು ಜಾರಿಗೆ ತರುವ ಜೊತೆಗೆ ನಗರದಲ್ಲಿರುವ ಸಿ.ಆರ್.ಸಿ. ಕೇಂದ್ರ ಸ್ವಂತ ಕಟ್ಟಡ ಹೊಂದುವ ಜೊತೆಗೆ ಅಗತ್ಯ ಸೌಲಭ್ಯಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲ್ವೆ ಯೋಜನೆಗೆ ಕೇಂದ್ರ ರೈಲ್ವೆ ಇಲಾಖೆಯಿಂದ 1,901 ಕೋಟಿ ರೂ. ಬಿಡುಗಡೆಯಾಗಿದೆ. ರಾಜ್ಯ ಸರ್ಕಾರ ಯೋಜನೆಯ ಅರ್ಧ ಪಾಲು ನೀಡಬೇಕು. ರಾಜ್ಯ ಸರ್ಕಾರ ಕನಿಷ್ಠ ಜಮೀನು ವಶದ ಹಣವನ್ನಾದರೂ ಕೊಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಮನವಿ ಮಾಡಿಕೊಂಡಿದ್ದೇನೆ. ಈ ಯೋಜನೆ ಶೇ.100ರಷ್ಟು ಜಾರಿಗೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿರುವ ಸಿ.ಆರ್.ಸಿ. ಕೇಂದ್ರ ಬಾಡಿಗೆ ಕಟ್ಟಡದಲ್ಲಿದ್ದು, ಇದಕ್ಕಾಗಿ 12 ಎಕರೆ ಜಾಗ ಕಲ್ಪಿಸಿ ಸ್ವಂತ ಕಟ್ಟಡದ ಜೊತೆ ಸೌಲಭ್ಯ ಕಲ್ಪಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಕೇಳಿದ್ದಾರೆ. ಇದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಪರಿಶಿಷ್ಟ ಜಾತಿ ಹಾಗೂ ಪಂಗಡದ ಐಎಎಸ್ ಅಧಿಕಾರಿಗಳ ಸಂಖ್ಯೆ ಕೇಂದ್ರ ಹಾಗೂ ರಾಜ್ಯ ಸಚಿವಾಲಯಗಳಲ್ಲಿ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಐಎಎಸ್ ಪರೀಕ್ಷೆ ಸೇರಿದಂತೆ ಬ್ಯಾಂಕಿಂಗ್ ಮತ್ತಿತರೆ ಪರೀಕ್ಷೆಗಳಿಗಾಗಿ ಪ್ರತಿಭಾವಂತ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ತರಬೇತಿ ನೀಡಲಾಗುವುದು ಎಂದವರು ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ನಿಗಮಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಹಣಕಾಸು ಸೌಲಭ್ಯ ಕಲ್ಪಿಸಲಾಗುವುದು. ಪರಿಶಿಷ್ಟ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಎಲ್ಲ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಸಚಿವರು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸುವ ಕ್ರಮ ಸನಿಹದಲ್ಲಿದೆ. ಶೀಘ್ರದಲ್ಲೇ ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ನಾರಾಯಣಸ್ವಾಮಿ ಹೇಳಿದರು.
ದೇಶಾದ್ಯಂತ ಜಾತಿ ಗಣತಿ ನಡೆಸುವಲ್ಲಿ ಹಲವಾರು ತೊಡಕುಗಳಿವೆ. ಈ ಬಗ್ಗೆ ಕೇಂದ್ರ ಸರ್ಕಾರ ಪರಿಣಿತರ ಸಮಿತಿಯೊಂದನ್ನು ರಚಿಸಿದೆ. ಸಮಿತಿಯ ವರದಿಯಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ದೇಶದ ಎಲ್ಲಾ 84 ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಒಂದೊಂದು ಅಂಬೇಡ್ಕರ್ ನವೋದಯ ಶಾಲೆಗಳನ್ನು ತೆರೆಯಲಾಗುವುದು ಎಂದು ಸಚಿವರು ಹೇಳಿದರು.
ಸದಾಶಿವ ಆಯೋಗದ ವರದಿ ಜಾರಿಗೆ ಈಗಲೂ ನಾನು ಬದ್ಧವಾಗಿದ್ದೇನೆ. ಸ್ವಾಮೀಜಿಗಳು ಹಾಗೂ ರಾಜಕೀಯ ಮುಖಂಡರ ಜೊತೆ ಮಾತನಾಡಿದ್ದೇನೆ. ಎಲ್ಲರ ಹೃದಯ ಗೆದ್ದು ಯೋಜನೆ ಜಾರಿಯಾಗುವಂತೆ ಮಾಡಲು ಶ್ರಮಿಸುತ್ತೇನೆ ಎಂದರು.
ಕೇಂದ್ರ ಸರ್ಕಾರದ ವೃದ್ಧಾಶ್ರಮಗಳು ಹಾಗೂ ಡಿ – ಅಡಿಕ್ಷನ್ ಕೇಂದ್ರಗಳಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕೇಂದ್ರಗಳ ನೋಂದಣಿ ಹಾಗೂ ಹಾಜರಾತಿ ಆನ್ಲೈನ್ ಮಾಡಲಾಗಿದೆ. ಸಿಸಿಟಿವಿ ಕಡ್ಡಾಯಗೊಳಿಸಿ ದೆಹಲಿಯಿಂದಲೇ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಪ್ರೊ. ಲಿಂಗಣ್ಣ, ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
ಸಂಸದೀಯ ಪ್ರಜಾಪ್ರಭುತ್ವದ ನಡಾವಳಿಗಳನ್ನು ಉಲ್ಲಂಘಿಸಿದ ಪ್ರತಿಪಕ್ಷಗಳ ಸದಸ್ಯರು, ಸಭಾಧ್ಯಕ್ಷರ ಮುಖಕ್ಕೆ ಪುಸ್ತಕಗಳನ್ನು ಎಸೆದಿದ್ದಾರೆ. ಅಧಿಕಾರಿಗಳ ಟೇಬಲ್ ಮೇಲೆ ಹತ್ತಿ ಕುಣಿದಿದ್ದಾರೆ ಎಂದವರು ತರಾಟೆಗೆ ತೆಗದೆುಕೊಡಂರು. ಕೊರೊನಾ ಲಸಿಕೆಗೆ ಮೊದಲಿನಿಂದಲೂ ಕಾಂಗ್ರೆಸ್ ಹಾದಿ ಬೀದಿಯಲ್ಲಿ ಅಪ ಪ್ರಚಾರ ಮಾಡುತ್ತಿದೆ. ಆದರೆ, ನಾವು ಅದಕ್ಕೆ ಕಿವಿಗೊಡದೆ ಕೆಲಸ ಮಾಡಿದ್ದೇವೆ. ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಕಾಂಗ್ರೆಸ್ – ಜೆಡಿಎಸ್ಗಳಿಗೆ ಕೆಲಸ ಇಲ್ಲದೇ ಟೀಕಿಸುತ್ತಿವೆ ಎಂದವರು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, 2023ರ ವಿಧಾನಸಭಾ ಚುನಾವಣೆಗೆ ಪಕ್ಷ ಇಂದಿನಿಂದಲೇ ಸಿದ್ಧತೆ ಆರಂಭಿಸಬೇಕು. ಬೂತ್ನಿಂದ ಹಿಡಿದು ತಾಲ್ಲೂಕಿನವರೆಗೆ ಸಂಘಟನೆ ಆಗಬೇಕು ಎಂದು ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಮುಂದಿನ ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಪಕ್ಷಕ್ಕಾಗಿ ದುಡಿಯಬೇಕು. ಪಕ್ಷ ಗೆದ್ದರೆ ಅಭಿವೃದ್ಧಿ ಕೆಲಸಗಳಾಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ.ಎಲ್.ಸಿ. ವೈ.ಎ. ನಾರಾಯಣ ಸ್ವಾಮಿ, ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಪ್ರೊ. ಲಿಂಗಣ್ಣ, ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ಮೇಯರ್ ಎಸ್.ಟಿ. ವೀರೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ನಂದೀಶ್, ರಾಜ್ಯ ಕಾರ್ಯದರ್ಶಿ ಕೆ.ಎಸ್. ನವೀನ್, ಮಾಜಿ ಶಾಸಕ ಬಸವರಾಜ ನಾಯ್ಕ, ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಬಯಲು ಸೀಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಣಬೇರು ಜೀವನಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಸಹನ ಮಂಜುನಾಥ್ ಪ್ರಾರ್ಥಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಸ್ವಾಗತಿಸಿದರು. ಬಿ.ಎಸ್. ಜಗದೀಶ್ ನಿರೂಪಿಸಿದರು.