ಕಾಳಸಂತೆಕೋರರನ್ನು ಮಟ್ಟ ಹಾಕದಿದ್ದರೆ ಜೈಲಿಗೆ : ಅಧಿಕಾರಿಗಳಿಗೆ ಎಚ್ಚರಿಕೆ
ಹರಿಹರ, ಆ.18- ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ವಿತರಣೆ ಮಾಡುವ ದಿನಸಿ ಪದಾರ್ಥಗಳನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವವರನ್ನು ತಡೆಯುವಲ್ಲಿ ತಾಲ್ಲೂಕು ಆಹಾರ ಅಧಿಕಾರಿಗಳು ವಿಫಲರಾಗಿದ್ದು, ಅವರ ಜೊತೆಯಲ್ಲಿ ನೀವು ಕೂಡ ಜೈಲಿಗೆ ಹೋಗಬೇಕಾಗುತ್ತದೆ ಎಂದು ಶಾಸಕ ಎಸ್. ರಾಮಪ್ಪ ಎಚ್ಚರಿಸಿದರು.
ನಗರದ ತಾ.ಪಂ. ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಹೆಚ್ಚು ಬಡವರು ಇದ್ದಾರೆ. ಸರ್ಕಾರ ನ್ಯಾಯಬೆಲೆ ಅಂಗಡಿ ಮೂಲಕ ಅಕ್ಕಿ, ಗೋಧಿ, ಬೇಳೆ ಸೇರಿದಂತೆ ಹಲವಾರು ದಿನಸಿ ಪದಾರ್ಥಗಳನ್ನು ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ವಿತರಣೆ ಮಾಡದೆ, ಇಲ್ಲಿನ ನಾಲ್ವರು ಅಕ್ರಮ ಅಕ್ಕಿ ಮಾರಾಟಗಾರರಿಗೆ ನೀಡಲಾಗುತ್ತಿದೆ. ಅವರ ಹೆಸರನ್ನು ನಾನು ಹೇಳಬಲ್ಲೆ. ಅವರುಗಳಿಗೆ ಗೋಡೌನ್‌ನಿಂದ ನೇರವಾಗಿ ಸರಬರಾಜು ಆಗುತ್ತಿದೆ. ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ಇದ್ದರೂ ಕೂಡ ಕ್ರಮ ಕೈಗೊಳ್ಳುವ ಸಾಹಸ ಮಾಡುತ್ತಿಲ್ಲ.
ನ್ಯಾಯಬೆಲೆ ಅಂಗಡಿಯಲ್ಲಿ ಸಾರ್ವಜನಿಕರಿಗೆ ಎರಡು ಕೆಜಿ ಕಡಿಮೆ ವಿತರಣೆ ಮಾಡಲಾಗುತ್ತದೆ. ಇದನ್ನು ಗಮನಿಸಲು ಸ್ಥಳ ಪರಿಶೀಲನೆ ಮಾಡಲು ಹೋಗದೆ, ಕಚೇರಿಯ ಕುಳಿತು ಕಾಲಹರಣ ಮಾಡುತ್ತಾ ಸಮಯ ಕಳೆಯುತ್ತಿದ್ದೀರಾ ಎಂದು ಆಹಾರ ಇಲಾಖೆಯ ನಸ್ರುಲ್ ಸಾಬ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಕೊಕ್ಕನೂರು ಆರೋಗ್ಯ ಕೇಂದ್ರದಲ್ಲಿ ಲಸಿಕೆಯನ್ನು ಮಾರಾಟ ಮಾಡುವುದಕ್ಕೆ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಈ ಕುರಿತು ತನಿಖೆ ನಡೆಸುವಂತೆ ಶಾಸಕರು ನಿರ್ದೇಶಿಸಿದರು.
ಪಶುಸಂಗೋಪನೆ ಇಲಾಖೆಯಿಂದ ರೈತರಿಗೆ ಇದುವರೆಗೂ ಒಂದು ಹಸು, ಎಮ್ಮೆ, ಕುರಿಯನ್ನೂ ಸಹ ವಿತರಣೆ ಮಾಡಿರುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಹಸುವಿಗೆ ರೋಗ ಬಂದಾಗ ಅವುಗಳಿಗೆ ನೀಡಲು ಔಷಧಿಯನ್ನು ಕೊಡುತ್ತಿಲ್ಲ ಎಂದು ರೈತರು ದೂರುತ್ತಾರೆ. ಭಾನುವಳ್ಳಿ, ಹನಗವಾಡಿ ಸೇರಿದಂತೆ ಇತರೆ ಗ್ರಾಮಗಳಲ್ಲಿ 6 ತಿಂಗಳಿಂದ ಹಸುವಿಗೆ ಚಿಕಿತ್ಸೆ ನೀಡಲು ವೈದ್ಯರು ಇರುವುದಿಲ್ಲ ಎನ್ನಲಾಗಿದೆ. ಬನ್ನಿಕೋಡು, ಬೆಳ್ಳೂಡಿ, ಭಾನುವಳ್ಳಿ, ಧೂಳೆಹೊಳೆ ದೇವರಬೆಳಕೆರೆ, ಕೊಕ್ಕನೂರು, ನಿಟ್ಟೂರುಗಳಲ್ಲಿ ಆಸ್ಪತ್ರೆ ಇದ್ದರೂ ಕೂಡ ವೈದ್ಯರು ಇಲ್ಲ ಎಂದು ದೂರುತ್ತಾರೆ. ಯಾವ ಯಾವ ಗ್ರಾಮಗಳಲ್ಲಿ ಪಶು ವೈದ್ಯರ ಕೊರತೆ ಇದೆ ಎಂಬುದನ್ನು ಪಟ್ಟಿ ಮಾಡಿ ಕೊಡಿ ಎಂದು ಅವರು ಸೂಚಿಸಿದರು.
ಜಿ.ಪಂ. ಇಲಾಖೆಯ ಆಡಳಿತಾಧಿಕಾರಿ ಡಿ.ಆರ್. ಮಧು, ತಾ.ಪಂ. ಇಒ ಗಂಗಾಧರನ್ ಮಾತನಾಡಿದರು.
ಬಿಇಓ ಬಿ.ಸಿ. ಸಿದ್ದಪ್ಪ ಮಾತನಾಡಿ, ಇದೇ ದಿನಾಂಕ 23 ರಂದು 9 ಮತ್ತು 10 ತರಗತಿಯ ಮಕ್ಕಳಿಗೆ ತರಗತಿ ಮಾಡಲು ಸರ್ಕಾರ ಆದೇಶಿಸಿದೆ. ಒಂದು ಕೊಠಡಿಯಲ್ಲಿ 15 ರಿಂದ 20 ಮಕ್ಕಳಿಗೆ ಪಾಠಗಳನ್ನು ಮಾಡಲಾಗುತ್ತದೆ. ಶಾಲೆಯ ಆವರಣ ಮತ್ತು ಕೊಠಡಿಗಳಿಗೆ ಔಷಧಿ ಸಿಂಪಡಣೆ ಮಾಡಲಾಗಿದೆ. ಶಾಲೆಗೆ ಕಡ್ಡಾಯವಾಗಿ ಮಕ್ಕಳು ಬರಲೇ ಬೇಕು ಎಂದು ಇಲ್ಲ. ಶಾಲೆಗೆ ಬರದೆ ಇದ್ದರೂ ಸಹ ಅವರಿಗೆ ಹಾಜರಾತಿ ನೀಡಲಾಗುತ್ತದೆ. ಶಾಲೆಗೆ ಬರದೇ ಇರುವ ಮಕ್ಕಳು ಮನೆಯಲ್ಲಿ ಚಂದನ ಟಿ.ವಿ. ನೋಡಿ ಪಾಠವನ್ನು ಕಲಿಯಬಹುದು ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಚಂದ್ರಮೋಹನ್ ಮಾತನಾಡಿ, ಇದುವರೆಗೂ ಹರಿಹರ ತಾಲ್ಲೂಕಿನಲ್ಲಿ 6410 ಜನರಿಗೆ ಕೊರೊನಾ ಸೋಂಕು ತಗುಲಿದೆ. ಆದರೆ, ಎಷ್ಟು ಜನರು ಮರಣ ಹೊಂದಿದ್ದಾರೆ ಎಂಬ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಸಲ್ಲಿಸಲಾಗುವುದು. ತಾಲ್ಲೂಕಿಗೆ ಇಲ್ಲಿಯವರೆಗೆ 1 ಲಕ್ಷದ 728 ಲಸಿಕೆ ಸರಬರಾಜು ಆಗಿದೆ ಎಂದು ಅವರು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ರೇಖಾ ಮಾತನಾಡಿ, ಕೊರೊನಾ ಸಮಯದಲ್ಲಿ ರೈತರ ಕುಟುಂಬಗಳಿಗೆ ಸರ್ಕಾರ 10 ಸಾವಿರ ರೂ. ಸಹಾಯ ಧನವನ್ನು ನೀಡಿದ್ದು, ಅದರಲ್ಲಿ ಹರಿಹರ ತಾಲ್ಲೂಕಿನ 464 ರೈತರ ಖಾತೆಗೆ ನೇರವಾಗಿ ಹಣವನ್ನು ಹಾಕಲಾಗಿದೆ. ಹನಿ ನೀರಾವರಿಗೆ ಈ ಬಾರಿ ಯಾವುದೇ ಹಣವನ್ನು ಸರ್ಕಾರ ಬಿಡುಗಡೆ ಮಾಡಿರುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಶಿವಮೂರ್ತಿ, ಸಿಡಿಪಿಒ ನಿರ್ಮಲ, ಲ್ಯಾಂಡ್ ಆರ್ಮಿ ಗಣೇಶ ಬಾಬು, ಬೆಸ್ಕಾಂ ಇಲಾಖೆ ಕರಿಬಸವರಾಜ್, ತಾ.ಪಂ. ಲೆಕ್ಕಾಧಿಕಾರಿ ಲಿಂಗರಾಜ್ ಇನ್ನಿತರರಿದ್ದರು.