ವಿಜ್ಞಾನ ಗ್ರಾಮೀಣ ಬದುಕನ್ನು ಹಸನು ಮಾಡಬೇಕು

ಹರಪನಹಳ್ಳಿ : ವೃಕ್ಷ ಅಧ್ಯಯನ ಶಿಬಿರದಲ್ಲಿ ಡಿಡಿಪಿಐ ಸಿ. ರಾಮಪ್ಪ

ಹರಪನಹಳ್ಳಿ, ನ. 19- ವಿಜ್ಞಾನ ಗ್ರಾಮೀಣ ಬದುಕನ್ನು ಹಸನು ಮಾಡಬೇಕು. ಸತ್ಯ ಸಂಗತಿ ಯನ್ನು ಪತ್ತೆ ಹಚ್ಚುವ ಬುದ್ಧಿಯನ್ನು ಮಗುವಿಗೆ ಕಲಿಸಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ. ರಾಮಪ್ಪ ಹೇಳಿದರು.

ಇಲ್ಲಿನ ಸಮತಾ ರೆಸಾರ್ಟ್‌ನಲ್ಲಿ ತಾಲ್ಲೂಕು ವಿಜ್ಞಾನ ಶಿಕ್ಷಕರ ಕ್ಲಬ್ ವತಿಯಿಂದ ಇಂದು ಆಯೋಜಿಸಿದ್ದ ವಿಜ್ಞಾನ ಸೆಮಿನಾರ್ ಮತ್ತು ವೃಕ್ಷ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದ ರಾಮಪ್ಪ, ವಿಜ್ಞಾನದಿಂದ ಜನಸಾಮಾನ್ಯರ ಬದುಕು ಬದಲಾವಣೆಯಾಗಬೇಕು. ಮಕ್ಕಳನ್ನು ವೈಜ್ಞಾನಿಕ ಚಿಂತನೆಗೆ ಹಚ್ಚುವಂತೆ ಮಾಡಬೇಕು. ವಿಜ್ಞಾನದ ಕೌತುಕ, ವಿಸ್ಮಯಗಳ ಬುನಾದಿಯನ್ನು ಮಕ್ಕಳಿಗೆ ಹಾಕಬೇಕು ಎಂದು ವಿಜ್ಞಾನ ಶಿಕ್ಷಕರುಗಳಿಗೆ ತಿಳಿಸಿದರು.

ಬಳ್ಳಾರಿಯ ಡಯಟ್‌ನ ಹಿರಿಯ ಉಪನ್ಯಾಸಕ ಪಾರಿ ಬಸವರಾಜ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಮೂಲ ವಿಜ್ಞಾನವನ್ನು ಇಂದು ನಾವು ಕೈ ಬಿಡುತ್ತಿದ್ದೇವೆ. ಪದವಿಯಲ್ಲಿಯೇ ವಿಜ್ಞಾನ ತೆಗೆದುಕೊಂಡು ಮುಂದವರೆಯಿರಿ ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಗುಣಾತ್ಮಕ ಕಲಿಕೆ ಹಾಗೂ ಗುಣಾತ್ಮಕ ಫಲಿತಾಂಶ ಬರಬೇಕು ಎಂದು ಅವರು ತಿಳಿಸಿದರು.

ಮುಖಂಡ ಕೋಡಿಹಳ್ಳಿ ಭೀಮಪ್ಪ ಮಾತ ನಾಡಿ, ಇಂದು ಆಮ್ಲಜನಕ ಹುಡುಕಿಕೊಂಡು ಆಸ್ಪತ್ರೆಗೆ ಹೋಗಬೇಕಾದ  ಸ್ಥಿತಿ ಬಂದಿದೆ. ಪರಿಸರವನ್ನು ಕಾಯ್ದುಕೊಳ್ಳದಿದ್ದರೆ ಆಪತ್ತು ಖಂಡಿತ. ಶೈಕ್ಷಣಿಕವಾಗಿ ವಿಜ್ಞಾನ ಶಿಕ್ಷಕರ ಪಾತ್ರ ಬಹಳ ಮುಖ್ಯವಾದುದು ಎಂದರು.

ಬಳ್ಳಾರಿ ಡಯಟ್‌ನ ಶಿಕ್ಷಣಾಧಿಕಾರಿ ಮೈಲೇಶಿ ಮಾತನಾಡಿ, ಸಂಸ್ಕೃತಿ ಮತ್ತು ವಿಜ್ಞಾನದ ಆಧಾರದ ಮೇಲೆ ಸಮಾಜ ನಿರ್ಮಾಣವಾಗಬೇಕು. ವಿಜ್ಞಾನಕ್ಕೆ ನಾವು ಅನಿವಾರ್ಯವಾಗಬಾರದು. ನಮಗೆ ವಿಜ್ಞಾನ ಅನಿವಾರ್ಯವಾಗಬೇಕು ಎಂದರು.

ಡಿಡಿಪಿಐ ಕಛೇರಿಯ ಪರಿವೀಕ್ಷಕ ಬಸವರಾಜ, ಸತ್ಯನಾರಾಯಣ, ಡಯಟ್‌ನ ಹಿರಿಯ ಉಪನ್ಯಾಸಕ ಮಹೇಶ್ ದೊಡ್ಮನಿ, ವಿಜ್ಞಾನ ಕ್ಲಬ್ ಅಧ್ಯಕ್ಷ ಸೋಮಪ್ಪ, ಸಂಘಟಕರಾದ ಉದಯಶಂಕರ್, ಜಯಮಾಲತೇಶ, ಬಿ.ಎಂ. ವಿಶ್ವನಾಥಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಎಂ. ನಾಗಭೂಷಣ, ಬಿಆರ್‌ಸಿ ಹುಸೇನ್ ಪೀರ್, ಇಸಿಓ ಕಬೀರ ನಾಯ್ಕ, ಡಾ. ಸಿದ್ದಲಿಂಗಮೂರ್ತಿ, ವೀರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!